ಮಂಗಳವಾರ, ಮಾರ್ಚ್ 21, 2023
23 °C
ಮಾರುತಿಸೇವಾ ನಗರದಲ್ಲಿ ಅಪಾರ್ಟ್‌ಮೆಂಟ್‌ ಅಕ್ಕಪಕ್ಕದ ಮನೆಗಳಿಗೆ ಹಾನಿ: ಬಿಬಿಎಂಪಿ ನಿರ್ಲಕ್ಷ್ಯ

ಸುರಕ್ಷತೆ ಮರೆತ ನಿರ್ಮಾಣ: ಬಿರುಕು, ವಾಲಿದ ಮನೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಾಣಸವಾಡಿ ಬಳಿಯ ಮಾರುತಿಸೇವಾನಗರದಲ್ಲಿ ‘ಆ್ಯಂಬಿಯನ್ಸ್‌ ಡೌನ್‌ಟೌನ್‌’ ವಸತಿ ಸಮುಚ್ಚಯ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ತಳಪಾಯ ಅಗೆ‌ದಿರುವುದರಿಂದ ಪಕ್ಕದ ನಾಲ್ಕು ಮನೆಗಳು ಬಿರುಕುಬಿಟ್ಟು, ವಾಲಿವೆ.

‘ಅಪಾರ್ಟ್‌ಮೆಂಟ್‌ ನಿರ್ಮಾಣದಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳದಿರುವುದರಿಂದ ಪಕ್ಕದ ಕಟ್ಟಡಗಳು ಬಿರುಕು ಬಿಟ್ಟಿವೆ. ಆದ್ದರಿಂದ, ಈ ಕಟ್ಟಡದಿಂದ ಸ್ಥಳಾಂತರವಾಗಬೇಕು’ ಎಂದು ಬಿಬಿಎಂಪಿ ನಾಲ್ಕು ಮನೆಗಳ ಮಾಲೀಕರಿಗೆ ಡಿ.6ರಂದು ನೋಟಿಸ್‌ ನೀಡಿದೆ. ಆದರೆ, ಅದಾದ ನಂತರವೂ ಅಪಾರ್ಟ್‌ಮೆಂಟ್‌ನವರು ಸಹಜ ರೀತಿಯಲ್ಲೇ ನಿರ್ಮಾಣ ಕಾರ್ಯ ಕೈಗೊಂಡಿದ್ದು, ಕಟ್ಟಡಗಳು ಬಿರುಕು ಬಿಟ್ಟಿರುವ ಜೊತೆ ಒಂದು ಕಡೆ ವಾಲಿವೆ. 

‘ಮಾರುತಿ ಸೇವಾನಗರದ ಬಾಣಸವಾಡಿ ಮುಖ್ಯರಸ್ತೆ ವಿಶ್ವೇಶ್ವರಯ್ಯ ಸ್ಟ್ರೀಟ್‌ನಲ್ಲಿ ’ಆ್ಯಂಬಿಯನ್ಸ್‌ ಡೌನ್‌ಟೌನ್‌’  ವಸತಿ ಸಮುಚ್ಚಯ ನಿರ್ಮಾಣ ಮಾಡಲು ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸಿಲ್ಲ. ಈ ನಿರ್ಮಾಣ ಕಟ್ಟಡದ ತಳಪಾಯದ ಮಣ್ಣಿನ ಅಗೆತದಿಂದ ಹಿಂಭಾಗ ಹಾಗೂ ಅಕ್ಕಪಕ್ಕದ ಕಟ್ಟಡಗಳ ಪಾಯದ ಮಟ್ಟಕ್ಕಿಂತ ತುಂಬಾ ಕೆಳಗಿದೆ. ನಿವೇಶನದ ಅಂಚಿನವರೆಗೂ ಅಗೆಯಲಾಗಿದೆ. ಹೀಗಾಗಿ ಪಕ್ಕದಲ್ಲಿರುವ ಕಟ್ಟಡಗಳು ಬಿರುಕು ಬಿಟ್ಟಿವೆ’ ಎಂದು ಬಿಬಿಎಂಪಿ ಮಾರುತಿಸೇವಾನಗರ ಉಪ–ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಅವರೇ ನೀಡಿರುವ ನೋಟಿಸ್‌ನಲ್ಲಿ ತಿಳಿಸಿದ್ದಾರೆ.

‘‌ಮನೆಗಳಲ್ಲಿರುವ ನಿವಾಸಿಗಳನ್ನು ಹೊರಹೋಗಿ ಎಂದು ಹೇಳಿರುವುದನ್ನು ಹೊರತುಪಡಿಸಿದರೆ ಯಾವುದೇ ಸುರಕ್ಷತಾ ಕ್ರಮಗಳನ್ನು ಅಪಾರ್ಟ್‌ಮೆಂಟ್‌ ನಿರ್ಮಿಸುವವರು ಕೈಗೊಂಡಿಲ್ಲ. ನಮ್ಮನ್ನು ಮನೆಯಿಂದ ಹೊರಹಾಕಿದರು. ನಮಗೆ ಪರಿಹಾರ ಒದಗಿಸುವಂತೆ ಬಿಬಿಎಂಪಿ ಎಂಜಿನಿಯರ್‌ಗಳಿಗೆ ಎಷ್ಟು ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಜ.6ರಂದು ಮುಖ್ಯ ಆಯುಕ್ತರಿಗೆ, ನಗರ ಯೋಜನೆ ವಿಭಾಗದ ಹೆಚ್ಚುವರಿ ನಿರ್ದೇಶಕರಿಗೆ ಮನವಿ ಮಾಡಿದ್ದರೂ ಕ್ರಮವಾಗಿಲ್ಲ’ ಎಂದು ಮನೆ ಸ್ಥಳಾಂತರದ ನೋಟಿಸ್‌ ಪಡೆದ 10ನೇ ಸ್ವತ್ತಿನ ಮಾಲೀಕ ಪಿ. ರಾಜಶೇಖರ್‌ ದೂರಿದರು. ಬಿರುಕು ಬಿಟ್ಟು ವಾಲಿರುವ ಮನೆಯಿಂದ ರಾಧಾಬಾಯಿ, ಪರಶುರಾಮ್‌ ಅವರೂ  ಬೇರೆಡೆ ವಾಸವಾಗಿದ್ದಾರೆ.

ನೋಟಿಸ್‌ ನೀಡಿ ಮನೆ ಖಾಲಿ ಮಾಡಿಸಿರುವ ಬಿಬಿಎಂಪಿ ಮಾರುತಿಸೇವಾನಗರ ಉಪ–ವಿಭಾಗದ ಎಇಇ, ಇಇ ಅವರು ಕಟ್ಟಡ ವಾಲಿರುವ ಬಗ್ಗೆ ಪ್ರತಿಕ್ರಿಯೆ ನೀಡಲಿಲ್ಲ.

ದಿನೇದಿನೇ ವಾಲುತ್ತಿವೆ...

‘ಸುರಕ್ಷತಾ ಕ್ರಮ ಕೈಗೊಂಡಿಲ್ಲ ಎಂದು ಬಿಬಿಎಂಪಿ ನೀಡಿರುವ ನೋಟಿಸ್‌ನಲ್ಲಿ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮನೆಗಳ ಕಟ್ಟಡಗಳು ಸುಮಾರು 5.5 ಸೆಂ.ಮೀ ವಾಲಿವೆ. ದಿನೇದಿನೇ ಇನ್ನಷ್ಟು ವಾಲಲಿದ್ದು, ಯಾವುದೇ ಸಂದರ್ಭದಲ್ಲಿ ಬೀಳುವ ಆತಂಕವಿದೆ. ಮೊದಲು ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದರೆ ಅಪಾರ್ಟ್‌ಮೆಂಟ್‌ನವರು ಹಾಗೂ ಬಿಬಿಎಂಪಿಯವರಿಬ್ಬರೂ ಕೇಳುತ್ತಿಲ್ಲ’ ಎಂದು ಅಸೋಸಿಯೇಷನ್‌ ಆಫ್‌ ಕನ್ಸಲ್ಟಿಂಗ್‌ ಸಿವಿಲ್‌ ಎಂಜಿನಿಯರ್ಸ್‌ (ಇಂಡಿಯಾ) ಬೆಂಗಳೂರು ಕೇಂದ್ರದ ಅಧ್ಯಕ್ಷ ಶ್ರೀಕಾಂತ್‌ ಎಸ್‌. ಚನ್ನಾಲ್‌ ದೂರಿದರು.

ನೋಟಿಸ್‌ ನೀಡಲಾಗಿದೆ...

‘ಆ್ಯಂಬಿಯನ್ಸ್‌ ಡೌನ್‌ಟೌನ್‌’ ಅಪಾರ್ಟ್‌ಮೆಂಟ್‌ನವರಿಗೆ ತಡೆ ಗೋಡೆ ನಿರ್ಮಿಸಿ, ಪಕ್ಕದ ಕಟ್ಟಡಗಳಿಗೆ ಆಗಿರುವ ಹಾನಿಯನ್ನು ಸರಿಪಡಿಸಲು ಸೂಚಿಸಲಾಗಿದೆ. ಸೂಚನೆ ಪಾಲಿಸದಿದ್ದರೆ ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡಿದ್ದೇವೆ. ಕಟ್ಟಡಗಳು ವಾಲಿರುವ ಬಗ್ಗೆ ಮಾಹಿತಿ ಇಲ್ಲ. ಸ್ಥಳೀಯ ಎಂಜಿನಿಯರ್‌, ನಗರ ಯೋಜನೆ ಅಧಿಕಾರಿಗಳಿಗೆ ಸೂಚನೆ ನೀಡಿ ಕ್ರಮಕೈಗೊಳ್ಳಲಾಗುತ್ತದೆ’ ಎಂದು ಬಿಬಿಎಂಪಿ ನಗರ ಯೋಜನೆ ವಿಭಾಗದ ಹೆಚ್ಚುವರಿ ನಿರ್ದೇಶಕ ಗಿರೀಶ್‌ ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು