ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣ: ಐಎಸ್‌ ಕೃತ್ಯ

Published 29 ನವೆಂಬರ್ 2023, 23:30 IST
Last Updated 29 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಡೆದಿದ್ದ ಕುಕ್ಕರ್ ಬಾಂಬ್‌ ಸ್ಫೋಟ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದೆ.

‘ಶಂಕಿತರು, ದೇಶದಲ್ಲಿ ದೊಡ್ಡಮಟ್ಟದ ವಿಧ್ವಂಸಕ ಕೃತ್ಯ ಎಸಗಲು ತಯಾರಿ ನಡೆಸಿದ್ದರು. ಅದರ ಭಾಗವಾಗಿ ಮಂಗಳೂರಿನ ಕದ್ರಿಯ ಮಂಜುನಾಥ ದೇವಸ್ಥಾನದಲ್ಲಿ ಸುಧಾರಿತ ಸ್ಫೋಟ ಸಾಮಗ್ರಿ ಇಟ್ಟು ಹಿಂದೂ ಸಮಾಜದಲ್ಲಿ ಭಯದ ವಾತಾವರಣ ನಿರ್ಮಿಸುವುದು ಶಂಕಿತರ ಉದ್ದೇಶವಾಗಿತ್ತು’ ಎಂದು ದೋಷಾರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ವರ್ಷದ ನವೆಂಬರ್‌ನಲ್ಲಿ ಈ ಸ್ಫೋಟ ಪ್ರಕರಣ ನಡೆದಿತ್ತು. ಪ್ರಕರಣ ಸಂಬಂಧ ಐಪಿಸಿ 120ಬಿ, 307 ಹಾಗೂ ಸ್ಫೋಟಕ ವಸ್ತುಗಳ ಕಾಯ್ದೆ–1908 ಅಡಿ ಪ್ರಕರಣ ದಾಖಲಿಸಿಕೊಂಡಿದ್ದ ಎನ್‌ಐಇ ತನಿಖೆ ನಡೆಸಿತ್ತು.

‘ಈ ಸ್ಫೋಟ ಪ್ರಕರಣವು ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಪ್ರಾಯೋಜಿತ ಕೃತ್ಯವಾಗಿದೆ. 2022ರ ನ.19ರಂದು ಶಂಕಿತ ಮಹಮ್ಮದ್ ಶಾರಿಕ್‌, ಕುಕ್ಕರ್‌ನಲ್ಲಿ ಸುಧಾರಿತ ಸ್ಫೋಟಕ ಸಾಧನಗಳನ್ನು ಕೊಂಡೊಯ್ಯುವ ಸಂದರ್ಭದಲ್ಲಿ ಸ್ಫೋಟ ಸಂಭವಿಸಿತ್ತು. ಐಇಡಿ ತೀವ್ರತೆ ಕಡಿಮೆಯಿತ್ತು. ಮಹಮ್ಮದ್‌ ಶಾರಿಕ್‌ ಹಾಗೂ ಸೈಯದ್‌ ಶಾರಿಕ್‌ ಎಂಬುವರನ್ನು ಬಂಧಿಸಿ ತನಿಖೆ ನಡೆಸಲಾಗಿತ್ತು. ಪ್ರಕರಣದಲ್ಲಿ ಇಬ್ಬರ ಪಾತ್ರದ ಬಗ್ಗೆಯೂ ದೋಷಾರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಮಹಮ್ಮದ್ ಶಾರಿಕ್‌ ಹಾಗೂ ಸೈಯದ್‌ ಯಾಸಿನ್‌, ವಿದೇಶದಲ್ಲಿ ನೆಲೆಸಿದ್ದವರ ಪಿತೂರಿಯಂತೆ ಕೃತ್ಯ ಎಸಗಲು ಸಂಚು ರೂಪಿಸಿದ್ದರು. ಷರಿಯತ್‌ ಕಾನೂನು ಪ್ರಚಾರದ ಭಾಗವಾಗಿ ಭಯೋತ್ಪಾದನಾ ಕೃತ್ಯ ಎಸಗಲು ಮುಂದಾಗಿದ್ದರು. ಶಾರಿಕ್‌, ಕುಕ್ಕರ್‌ ಬಾಂಬ್‌ ತಯಾರಿಸಿದ್ದರೆ; ಅಗತ್ಯವಿರುವ ಸ್ಫೋಟಕ ಸಾಮಗ್ರಿಗಳನ್ನು ಸೈಯದ್‌ ಪೂರೈಸಿದ್ದ ಎಂದು ತನಿಖೆಯಿಂದ ಗೊತ್ತಾಗಿದೆ’ ಎಂದು ಎನ್‌ಐಎ ಮೂಲಗಳು ತಿಳಿಸಿವೆ.

‘ಸ್ಫೋಟ ಪ್ರಕರಣಕ್ಕೂ ಮುನ್ನ ಇಸ್ಲಾಮಿಕ್‌ ಸ್ಟೇಟ್‌ ಮುಖಂಡರ ಸೂಚನೆಯಂತೆ ಮಂಗಳೂರಿನಲ್ಲಿ ಉಗ್ರರ ಕೃತ್ಯಕ್ಕೆ ಸಂಬಂಧಿಸಿದಂತೆ ಗೋಡೆ ಬರಹ ಬರೆಯಲಾಗಿತ್ತು. ಅದರಲ್ಲೂ ಇಬ್ಬರು ಪಾತ್ರವಿರುವುದು ಸಾಬೀತಾಗಿದೆ. ಶಿವಮೊಗ್ಗದಲ್ಲಿ ಸ್ಫೋಟಿಸುವ ಪ್ರಯೋಗ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿಯನ್ನು ಬಂಧಿಸಿ ಕಳೆದ ಜುಲೈನಲ್ಲಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಲಾಗಿದೆ. ಅದರಲ್ಲೂ ಈ ಇಬ್ಬರ ಪಾತ್ರದ ಬಗ್ಗೆ ಉಲ್ಲೇಖವಿದೆ’ ಎಂದು ಮೂಲಗಳು ಹೇಳಿವೆ.

ಭಯೋತ್ಪಾದನಾ ಚಟುವಟಿಕೆಗಳಿಗೆ ಯುವಕರ ಸೆಳೆಯುವುದು, ಆರ್ಥಿಕ ನೆರವು ಸಂಗ್ರಹಿಸುವುದು ಶಂಕಿತರ ಉದ್ದೇಶವಾಗಿತ್ತು. ಅದರ ಭಾಗವಾಗಿ ಕೆಲವು ಸ್ಥಳಗಳಲ್ಲಿ ಸಣ್ಣ ಪ್ರಮಾಣದ ಸ್ಫೋಟಕ್ಕೆ ಮುಂದಾಗಿದ್ದರು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಗಾಯಗೊಂಡಿದ್ದ ಇಬ್ಬರು

ಕುಕ್ಕರ್ ಬಾಂಬ್ ಹಿಡಿದು ಆಟೋರಿಕ್ಷಾದಲ್ಲಿ ತರುವ ವೇಳೆ ಸ್ಫೋಟಗೊಂಡಿತ್ತು. ಶಾರಿಕ್‌ ಹಾಗೂ ಆಟೋ ಚಾಲಕ ಗಾಯಗೊಂಡಿದ್ದರು. ಆರಂಭದಲ್ಲಿ ಅನಿಲ ಸೋರಿಕೆಯಾಗಿ ಸ್ಫೋಟ ಸಂಭವಿಸಿದೆ ಎಂದು ಭಾವಿಸಲಾಗಿತ್ತು. ಪರಿಶೀಲನೆ ವೇಳೆ ಸ್ಫೋಟಕ ಸಾಮಗ್ರಿಗಳು ಪತ್ತೆಯಾಗಿದ್ದವು. ನಂತರ, ಎನ್‌ಐಎ ತನಿಖೆ ಕೈಗೆತ್ತಿಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT