ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರಿಗಷ್ಟೇ ಕಂಟೈನ್‌ಮೆಂಟ್‌; ನಿಯಮ ಉಲ್ಲಂಘಿಸಿ ವ್ಯಾಪಾರ

ಬಾಗಲಗುಂಟೆ ಪೊಲೀಸರ ದಾಳಿ; ಅಂಗಡಿ ಮಾಲೀಕರ ವಿರುದ್ಧ ಎಫ್‌ಐಆರ್‌
Last Updated 4 ಜುಲೈ 2020, 22:10 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕಿತ ಪತ್ತೆಯಾದ ಹಿನ್ನೆಲೆಯಲ್ಲಿ ಟಿ.ದಾಸರಹಳ್ಳಿಯ ಭುವನೇಶ್ವರಿನಗರದ 1ನೇ ಅಡ್ಡರಸ್ತೆಯಿಂದ 4ನೇ ಅಡ್ಡರಸ್ತೆಯವರೆಗಿನ ರಸ್ತೆಯನ್ನು ಕಂಟೈನ್‌ಮೆಂಟ್‌ (ನಿಯಂತ್ರಿತ) ಪ್ರದೇಶವೆಂದು ಘೋಷಿಸಲಾಗಿದ್ದು, ಇದು ಹೆಸರಿಗಷ್ಟೇ ಎಂಬಂತಾಗಿದೆ.

ಕಂಟೈನ್‌ಮೆಂಟ್ ಪ್ರದೇಶದಲ್ಲೇ ಹಲವರು ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡುತ್ತಿದ್ದಾರೆ. ಕೆಲವು ಸಾರ್ವಜನಿಕರು ಸರ್ಕಾರದ ನಿಯಮ ಪಾಲಿಸದೇ ಮನೆಯಿಂದ ಹೊರಗೆ ಬಂದು ರಸ್ತೆಯಲ್ಲಿ ಅಡ್ಡಾಡುತ್ತಿದ್ದಾರೆ.

ಈ ಪ್ರದೇಶದದಲ್ಲಿ ಪೊಲೀಸರು ಗಸ್ತು ಮುಗಿಸಿ ಮರಳಿದ ಬಳಿಕ ಅಂಗಡಿಗಳು ಬಾಗಿಲು ತೆರೆಯುತ್ತಿವೆ. ಈ ಬಗ್ಗೆ ಮಾಹಿತಿ ಪಡೆದ ಬಾಗಲಗುಂಟೆ ಠಾಣೆ ಪೊಲೀಸರು, ದಿಢೀರ್ ದಾಳಿ ನಡೆಸಿ ಅಂಗಡಿಗಳನ್ನು ಮುಚ್ಚಿಸಿದ್ದಾರೆ. ಅಂಗಡಿ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನೂ ದಾಖಲಿಸಿದ್ದಾರೆ.

‘ಕಂಟೈನ್‌ಮೆಂಟ್‌ ಪ್ರದೇಶದಲ್ಲಿರುವ ಭೈರವೇಶ್ವರ ಪ್ರಾವಿಜನ್ ಸ್ಟೋರ್, ಪತಂಜಲಿ ಸ್ಟೋರ್, ಮಂಗಲ್ ಫ್ಯಾಮಿಲಿ ಮಾರ್ಟ್‌ ಹಾಗೂ ಕೇತನ್ ಕಲೆಕ್ಷನ್ ಅಂಗಡಿಗಳು ತೆರೆದಿದ್ದವು. ಅಂಗಡಿಯಲ್ಲಿ ಗ್ರಾಹಕರಿಗೆ ನೀಡಲು ಯಾವುದೇ ಸ್ಯಾನಿಟೈಸರ್ ಇರಲಿಲ್ಲ. ಹಲವರು ಮಾಸ್ಕ್ ಸಹ ಧರಿಸಿರಲಿಲ್ಲ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಅಂಗಡಿಗಳನ್ನು ಮುಚ್ಚಿಸಿದ್ದೇವೆ. ಅಂಗಡಿಗಳ ಮಾಲೀಕರಾದ ರಾಜು, ಓಂ ಪ್ರಕಾಶ್, ವಿಷ್ಣು ಮಂಗಲ್ ಹಾಗೂ ಬೋಪಾಲ್‌ರಾಮ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ’ ಎಂದರು.

ನಿಯಮ ಪಾಲಿಸದವರ ವಿರುದ್ಧವೂ ಪ್ರಕರಣ; ಕೊರೊನಾ ನಿಯಮ ಪಾಲನೆ ಪರಿಶೀಲನೆಗಾಗಿ ಬಾಗಲಗುಂಟೆ ಠಾಣೆ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ.

ಕಂಟೈನ್‌ಮೆಂಟ್‌ ಇಲ್ಲದ ಪ್ರದೇಶಗಳಲ್ಲೂ ಪರಸ್ಪರ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡದೇ, ಗ್ರಾಹಕರಿಗೆ ಸ್ಯಾನಿಟೈಸರ್‌ ನೀಡದೇ, ಮಾಸ್ಕ್ ಸಹ ಧರಿಸದೇ ನಿಯಮ ಉಲ್ಲಂಗಿಸಿದ್ದ ಅಂಗಡಿಗಳ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಾಗಿದೆ.

‘ಮಾರಮ್ಮ ದೇವಸ್ಥಾನ ರಸ್ತೆಯಲ್ಲಿರುವ ರಾಜೇಶ್ವರಿ ಟ್ರೇಡರ್ಸ್ ಮಾಲೀಕ ಅಮೃತ, ಬಾಲಾಜಿ ಪ್ರಾವಿಜನ್ ಸ್ಟೋರ್ ಕೆಲಸಗಾರ ಮಂಜುನಾಥ್, ಪವನ್ ಜ್ಯುವೆಲರ್ಸ್ ಮಳಿಗೆಯ ಕೆಲಸಗಾರ ಸಾಗರ್ ಎಂಬುವರ ವಿರುದ್ಧವೂ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT