ಬುಧವಾರ, ಆಗಸ್ಟ್ 4, 2021
26 °C

ಬಿಬಿಎಂಪಿ | ಕೊರೊನಾ ನಿಯಂತ್ರಣಕ್ಕೆ ಕ್ರಮ: ಪ್ರತಿ ವಾರ್ಡ್‌ಗೂ ನೋಡಲ್‌ ಅಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವಂತೆಯೇ ಇದರ ನಿಯಂತ್ರಣಕ್ಕೆ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಬಿಬಿಎಂಪಿ ಮುಂದಾಗಿದೆ. ಪ್ರತಿ ವಾರ್ಡ್‌ಗೂ ತಲಾ ಒಬ್ಬರು ನೋಡಲ್‌ ಅಧಿಕಾರಿಯನ್ನು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ನೇಮಿಸಿದ್ದಾರೆ.

‘ನೋಡಲ್‌ ಅಧಿಕಾರಿಗಳು ತಮಗೆ ಸೂಚಿಸಿದ ವಾರ್ಡ್‌ ಕಚೇರಿಗಳಲ್ಲಿ ಕಾರ್ಯನಿರ್ವಹಿಸಬೇಕು. ಆಯಾ ವಲಯದ ಜಂಟಿ ಆಯುಕ್ತರ ಬಳಿ ವರದಿ ಮಾಡಿಕೊಳ್ಳಬೇಕು’ ಎಂದು ಆಯುಕ್ತರು ಸೋಮವಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

‘ಕೋವಿಡ್‌ ನಿಯಂತ್ರಣ ಮತ್ತು ಈ ಪ್ರಕರಣಗಳ ಸಮರ್ಪಕ ನಿರ್ವಹಣೆಗಾಗಿ ಕೆಎಎಸ್‌ ಅಧಿಕಾರಿಗಳನ್ನು ಹಾಗೂ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರನ್ನು ವಾರ್ಡ್‌ ಮಟ್ಟದ ನೋಡಲ್‌ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ವಾರ್ಡ್‌ ಸಮಿತಿ ಹಾಗೂ ಆಯಾ ವಾರ್ಡ್‌ನ ಬೂತ್‌ ಮಟ್ಟದ ಸಮಿತಿಗಳ ಜೊತೆ ಸಮನ್ವಯ ಸಾಧಿಸುವಂತೆ ನೋಡಿಕೊಳ್ಳುವುದು ಇವರ ಜವಾಬ್ದಾರಿ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆಡಳಿತ) ಅನ್ಬುಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

7292 ಮತಗಟ್ಟೆ ಮಟ್ಟದ ತಂಡ ರಚನೆ
ಪಾಲಿಕೆಯ ಎಲ್ಲ 198 ವಾರ್ಡ್‌ಗಳಲ್ಲಿ ಒಟ್ಟು 7,292 ಮತಗಟ್ಟೆ ಮಟ್ಟದ ತಂಡಗಳನ್ನು ಬಿಬಿಎಂಪಿ ರಚಿಸಿದೆ. ಪ್ರತಿ ಮತಗಟ್ಟೆ ಮಟ್ಟದಲ್ಲಿ ಕೊರೊನಾ ಸೋಂಕು ನಿಯಂತ್ರಣ ಕ್ರಮಗಳ ಜಾರಿಗೆ ಈ ಸಮಿತಿಗಳು ಶ್ರಮಿಸಲಿದ್ದಾರೆ.‌

ಮತಗಟ್ಟೆ ಹಂತದ ಅಧಿಕಾರಿಗಳು (ಬಿಎಲ್‌ಒ) ಈ ಸಮಿತಿಗಳ ನೇತೃತ್ವ ವಹಿಸಲಿದ್ದಾರೆ. ಸಿ ಗುಂಪಿನ ನಾಲ್ವರು ಅಧಿಕಾರಿಗಳು ಇರಲಿದ್ದಾರೆ. ಆಯಾ ಪ್ರದೇಶದ ಆಶಾ ಕಾರ್ಯಕರ್ತೆಯರು, ಕಿರಿಯ ಆರೋಗ್ಯ ಸಹಾಯಕಿಯರು, ಅಂಗನವಾಡಿ ಕಾರ್ಯಕರ್ತೆಯರು, ಚುನಾವಣೆ ಸಂದರ್ಭದಲ್ಲಿ ಮತಗಟ್ಟೆಯ ಅಧ್ಯಕ್ಷಾಧಿಕಾರಿಗಳು (ಆರ್‌ಒ), ಸಹಾಯಕ ಅಧ್ಯಕ್ಷಾಧಿಕಾರಿಗಳು (ಎಆರ್‌ಒ) ಮತ್ತು ಮತದಾನ ಅಧಿಕಾರಿಗಳಾಗಿ (ಪಿಒ) ಕಾರ್ಯನಿರ್ವಹಿಸಿದವರನ್ನು ಆಯ್ದು ಅವರಿಗೆ ಸಮೀಪದ ವಾರ್ಡ್‌ಗಳಲ್ಲಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. ಪ್ರತಿ ತಂಡದಲ್ಲೂ 10 ಸ್ವಯಂಸೇವಕರು ಇರಲಿದ್ದಾರೆ.

‘ಕೊರೊನಾ ನಿಯಂತ್ರಣಕ್ಕೆ ಮತಗಟ್ಟೆ ಮಟ್ಟದ ತಂಡಗಗಳಲ್ಲಿ ಕಾರ್ಯ ನಿರ್ವಹಿಸಲು ಒಟ್ಟು 35,617 ಮಂದಿಯನ್ನು ಬಳಸಿಕೊಳ್ಳಲಿದ್ದೇವೆ. ಇದರಲ್ಲಿ 28,325 ಸ್ವಯಂಸೇವಕರು. ಅಗತ್ಯ ಬಿದ್ದರೆ ಇನ್ನಷ್ಟು ಸ್ವಯಂಸೇವಕರನ್ನು ಬಳಸಿಕೊಳ್ಳಲು ಸಮಿತಿಗಳಿಗೆ ಸೂಚಿಸಿದ್ದೇವೆ. ಸೆಕ್ಟರ್‌ ಅಧಿಕಾರಿಗಳ ನಿರ್ದೇಶನದಂತೆ ಈ ತಂಡಗಳು ಕಾರ್ಯನಿರ್ವಹಿಸಲಿವೆ’ ಎಂದು ಅನ್ಬುಕುಮಾರ್‌ ತಿಳಿಸಿದರು.  

ಈ ತಂಡಗಳು ಕೊರೊನಾ ಲಕ್ಷಣಗಳ ತಪಾಸಣೆ, ಪರೀಕ್ಷೆ, ಸೋಂಕಿತರ ಸಂಪರ್ಕ ಹೊಂದಿದವರನ್ನು ಕ್ವಾರಂಟೈನ್‌ ಮಾಡುವುದು, ನಿಯಮಗಳ ಅನುಷ್ಠಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಗಳನ್ನು ನಿರ್ವಹಿಸಲಿವೆ.

ವಾರ್ಡ್‌ ಸಮಿತಿಗಳಿಗೆ ಹೆಚ್ಚಿನ ಹೊಣೆ
ಕೊರೊನಾ ಸೋಂಕು ನಿಯಂತ್ರಣದ ಸಲುವಾಗಿ ಆಯಾ ವಾರ್ಡ್ ಸಮಿತಿಗಳಿಗೆ ಹೆಚ್ಚಿನ ಹೊಣೆ ವಹಿಸಿ ಬಿಬಿಎಂಪಿ ಆಯುಕ್ತರು ಸೋಮವಾರ ಆದೇಶ ಹೊರಡಿಸಿದ್ದಾರೆ. 

‘ವಾರ್ಡ್‌ ಸಮಿತಿಗಳಿಗೆ ನಾಗರಿಕ ಸಮುದಾಯದ ಮೂವರನ್ನು (ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಎನ್‌ಜಿಒ ಅಥವಾ ಯುವಸಂಘಟನೆಗಳ ಪ್ರತಿನಿಧಿಗಳು) ಹೆಚ್ಚುವರಿ ಸದಸ್ಯರನ್ನಾಗಿ ನೇಮಿಸಿಕೊಳ್ಳಬಹುದು. ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ಸ್ವಯಂಸೇವಕರಾಗಲು ಬಯಸುವ ಖಾಸಗಿ ವೈದ್ಯರು, ಸಬ್‌ಇನ್‌ಸ್ಪೆಕ್ಟರ್‌ ವೃಂದಕ್ಕಿಂತ ಮೇಲಿನ ಪೊಲೀಸ್‌ ಅಧಿಕಾರಿಯನ್ನು ಹಾಗೂ ವಾರ್ಡ್‌ನ ಸ್ವಸಹಾಯ ಸಂಘಗಳ ಪ್ರತಿನಿಧಿ, ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್‌ ಗುಂಪುಗಳ ಸದಸ್ಯರನ್ನೂ ಸಮಿತಿಯಲ್ಲಿ ಸೇರಿಸಿಕೊಳ್ಳಬೇಕು’ ಎಂದು ಆಯುಕ್ತರು ಸೂಚಿಸಿದ್ದಾರೆ.

ಕೋವಿಡ್‌ ನಿಯಂತ್ರಣ ಜಾಗೃತಿ, ಸುಳ್ಳು ಸುದ್ದಿ ಹಾಗೂ ತಪ್ಪು ಕಲ್ಪನೆಗಳ ವಿರುದ್ಧ ಜಾಗೃತಿ ಮೂಡಿಸುವುದು, ಆರೈಕೆ ಅಗತ್ಯ ಇರುವವರಿಗೆ ನೆರವಾಗುವುದು, ಸೋಂಕು ತಡೆಯುವ ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನ, ಕುಟುಂಬಗಳ ಆರೋಗ್ಯ ಮಾಹಿತಿ ಸಂಗ್ರಹ, ಸ್ವಚ್ಛತೆ ಕಾಪಾಡುವುದು ಈ ಸಮಿತಿಗಳ ಜವಾಬ್ದಾರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು