ಬುಧವಾರ, ಜೂನ್ 23, 2021
29 °C

ಕೋವಿಡ್ ಗೆದ್ದವರ ಕಥೆ: ವೈದ್ಯರ ಸಲಹೆಯೇ ‘ಸಂಜೀವಿನಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಚೇರಿಯಲ್ಲಿ ಕೋವಿಡ್‌ ಬಂದವರ ಜೊತೆ ಇದ್ದುದರಿಂದ ಅನುಮಾನಗೊಂಡು ಪರೀಕ್ಷೆಗೆ ಒಳಪಟ್ಟಾಗ ಸೋಂಕು ತಗುಲಿರುವುದು ದೃಢಪಟ್ಟ ನಂತರ, ಮನೆಯಲ್ಲಿಯೇ ಇದ್ದು ಗುಣಮುಖರಾದ ಖಾಸಗಿ ಕಂಪನಿ ಉದ್ಯೋಗಿ ಬಿ. ಜಯಪ್ರಕಾಶ್‌ ತಮ್ಮ ಅನುಭವವನ್ನು ಹಂಚಿಕೊಂಡಿದ್ದು ಹೀಗೆ...

‘ಕಚೇರಿಯಲ್ಲಿ ಒಬ್ಬರಿಗೆ ಕೋವಿಡ್ ಬಂದಿತ್ತು. ಅದಾಗಲೇ ಎರಡನೇ ಅಲೆ ಪ್ರಾರಂಭವಾಗಿದ್ದೂ ನನಗೆ ಅರಿವಿತ್ತು. ಒಂದೆರಡು ದಿನಗಳ ನಂತರ ಜ್ವರ ಬಂದಿತ್ತು. ಮೊದಲು, ಡೆಂಗಿ ನಂತರ ಟೈಫಾಯಿಡ್ ಇರಬಹುದೇನೋ ಎಂದುಕೊಂಡು ಪರೀಕ್ಷೆ ಮಾಡಿಸಿಕೊಂಡೆ. ಆ ಕಾಯಿಲೆಗಳು ಇರಲಿಲ್ಲ. ಮಾ.23ಕ್ಕೆ ಆರ್‌ಟಿ ಪಿಸಿಆರ್ ಪರೀಕ್ಷೆ ಮಾಡಿಸಿಕೊಂಡೆ. 24ಕ್ಕೆ ಕೋವಿಡ್ ಪಾಸಿಟಿವ್‌ ಎಂದು ಫಲಿತಾಂಶ ಬಂದಿತು’

‘ಮೊದಲು ನನಗೆ ತಲೆನೋವು ಇತ್ತು. ನಂತರ ಮೈ–ಕೈ ನೋವು ಶುರುವಾಯಿತು. ತುಂಬಾ ಸುಸ್ತಾಗುತ್ತಿತ್ತಲ್ಲದೆ ಬಾಯಿ ಒಣಗುತ್ತಿತ್ತು. ನೀರಡಿಕೆಯಾಗುತ್ತಿತ್ತು. ಖಾರದ ಪುಡಿ ತಿಂದರೂ ಏನೂ ಎನಿಸುತ್ತಿರಲಿಲ್ಲ. ನಿಂಬೆಹಣ್ಣಿನ ರಸ ಕುಡಿದರೂ ರುಚಿ ಗೊತ್ತಾಗುತ್ತಿರಲಿಲ್ಲ. ಅಮೃತಾಂಜನ್‌ ಮೂಗಿಗೆ ಹಚ್ಚಿಕೊಂಡರೂ ವಾಸನೆ ಬರುತ್ತಿರಲಿಲ್ಲ’

‘ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆಯಂತಹ ಸಮಸ್ಯೆಗಳು ಇರದ ಕಾರಣ, ವೈದ್ಯರು ಮನೆಯಲ್ಲಿಯೇ ಪ್ರತ್ಯೇಕವಾಗಿದ್ದುಕೊಂಡು ಆರೈಕೆ ಪಡೆದುಕೊಳ್ಳತೊಡಗಿದೆ. ಈ ವೇಳೆ, ಬಿಬಿಎಂಪಿಯ ವೈದ್ಯರಲ್ಲದೆ, ಪರಿಚಯವಿದ್ದ ಅನೇಕ ಹಿರಿಯ ವೈದ್ಯರು ಸಲಹೆ ನೀಡಿದರು. ಅವರ ಸಲಹೆಯಂತೆ ನಡೆದುಕೊಂಡೆ. ಅವರು ಸೂಚಿಸಿದ ಔಷಧಿಗಳನ್ನು ಮಾತ್ರ ತೆಗೆದುಕೊಳ್ಳುತ್ತಿದ್ದೆ’

‘ಮನೆಯಲ್ಲಿ ಪ್ರತ್ಯೇಕ ಕೋಣೆ ಇದ್ದುದರಿಂದ ಹೆಚ್ಚು ಸಮಸ್ಯೆಯಾಗುತ್ತಿರಲಿಲ್ಲ. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನೆಲ್ಲ ತೆಗೆದುಕೊಂಡೆ. ಮನೆಯಲ್ಲಿ ಇದ್ದದ್ದು ನಾನು ಮತ್ತು ತಮ್ಮ ಮಾತ್ರ. ತಮ್ಮ ನಿತ್ಯ ಬಿಸಿಯೂಟ ಸಿದ್ಧಮಾಡಿಕೊಡುತ್ತಿದ್ದ. ಊಟದಲ್ಲಿ ತರಕಾರಿ, ಸೊಪ್ಪು ಹೆಚ್ಚು ಸೇವಿಸುತ್ತಿದ್ದೆ. ಹಣ್ಣುಗಳನ್ನು ಜಾಸ್ತಿ ತಿನ್ನುತ್ತಿದ್ದೆ’

‘ಏ.1ಕ್ಕೆ ಮತ್ತೆ ಪರೀಕ್ಷೆ ಮಾಡಿಸಿದೆ. ಏ.4ರಂದು ನನ್ನ ಜನ್ಮದಿನದಂದೇ ಫಲಿತಾಂಶ ಬಂದಿತು. ಕೋವಿಡ್‌ ನೆಗೆಟಿವ್‌ ವರದಿ ಬಂದಿದ್ದರಿಂದ ನಿರಾಳನಾದೆ’.

‘ಸುಮಾರು ಹತ್ತು ದಿನಗಳಲ್ಲಿ ನಕಾರಾತ್ಮಕ ಅಂಶಗಳ ಕಡೆಗೆ ಯಾವತ್ತೂ ಗಮನಕೊಡಲಿಲ್ಲ. ಕೋವಿಡ್‌ ಪಾಸಿಟಿವ್‌ ಬಂದಿದ್ದರೂ, ‘ಪಾಸಿಟಿವ್‌’ ವಿಷಯಗಳ ಬಗ್ಗೆ ಮಾತ್ರ ಯೋಚಿಸುತ್ತಿದ್ದೆ. ಈ ಕಾಯಿಲೆಯಿಂದ ನನಗೇನೂ ಆಗುವುದಿಲ್ಲ ಎಂದು ಅಂದುಕೊಳ್ಳುತ್ತಿದ್ದೆ. ವೈದ್ಯರು ನಿರಂತರವಾಗಿ ಈ ನಿಟ್ಟಿನಲ್ಲಿ ಸಲಹೆ ನೀಡಿದ್ದು ನೆರವಾಯಿತು. ಧೈರ್ಯವಾಗಿ ಇದ್ದರೆ ಬೇಗ ಗುಣಮುಖವಾಗಬಹುದು’.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು