ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊರಿಗೆ ಕಳಿಸಿ: ಕೂಲಿ ಕಾರ್ಮಿಕರ ಕಣ್ಣೀರು

ಅನಿವಾರ್ಯವಾಗಿ ಬೆಂಗಳೂರಿನಲ್ಲೇ ಉಳಿದಿರುವ ಕಾರ್ಮಿಕರು
Last Updated 29 ಮಾರ್ಚ್ 2020, 20:02 IST
ಅಕ್ಷರ ಗಾತ್ರ

ಬೆಂಗಳೂರು: ಹಸಿದ ಹೊಟ್ಟೆ ತುಂಬಿಸಿಕೊಳ್ಳಲು ‌ಸಿಲಿಕಾನ್ ಸಿಟಿಗೆ ಬಂದಿದ್ದ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರಿಗೆ ಈಗ ಜೈಲಿನಲ್ಲಿ ಸಿಕ್ಕಿಕೊಂಡ ಅನುಭವವಾಗುತ್ತಿದೆ. ಊರಿನತ್ತ ಹೋಗಲು ವಾಹನ ವ್ಯವಸ್ಥೆ ಇಲ್ಲ, ಇಲ್ಲೇ ಇದ್ದರೆ ಹೊಟ್ಟೆ ತುಂಬುವ ಖಾತ್ರಿ ಇಲ್ಲ. ಸಂಕಟದಲ್ಲಿ ಸಿಲುಕಿರುವ ಕೂಲಿಕಾರ್ಮಿಕರು, ತಮ್ಮನ್ನು ಊರಿಗೆ ಕಳಿಸಿಕೊಡಿ ಎಂದು ಕಂಡ ಕಂಡವರ ಬಳಿ ಕಣ್ಣೀರಿಡುತ್ತಿದ್ದಾರೆ.

ಹುಟ್ಟಿದೂರಿನಲ್ಲಿ ತುತ್ತು ಅನ್ನಕ್ಕೂ ಕಷ್ಟವಾದಾಗ ಅನ್ನ ಹುಡುಕಿಕೊಂಡು ದೂರದ ಬೆಂಗಳೂರಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಕಾರ್ಮಿಕರು ಬಂದಿದ್ದಾರೆ. ಕರ್ನಾಟಕ ಮಾತ್ರವಲ್ಲ, ಸಾವಿರಾರು ಮೈಲಿ ದೂರುದ ಒಡಿಶಾ, ಅಸ್ಸಾಂ, ಬಿಹಾರ, ಉತ್ತರ ಪ್ರದೇಶದಿಂದಲೂ ಲಕ್ಷಗಟ್ಟಲೆ ಕಾರ್ಮಿಕರು ಬಂದಿದ್ದಾರೆ. ಅವರ ತುತ್ತಿನ ಚೀಲಕ್ಕೆ ಈಗ ಕೊರೊನಾ ಸೋಂಕು ಕೈ ಹಾಕಿದೆ.

ಲಾಕ್‌ಡೌನ್ ಆಗುವ ಮುನ್ಸೂಚನೆ ಅರಿತ ಒಂದಷ್ಟು ವಲಸೆ ಕಾರ್ಮಿಕರು ಬಿಡಿಗಾಸನ್ನು ಒಟ್ಟು ಮಾಡಿಕೊಂಡು, ಗಂಟುಮೂಟೆ ಕಟ್ಟಿಕೊಂಡು ಖಾಸಗಿ ವಾಹನಗಳನ್ನು ಹಿಡಿದು ತಮ್ಮ ಊರುಗಳತ್ತ ಪ್ರಯಾಣ ಬೆಳೆಸಿದರು.

ಲಾಕ್‌ಡೌನ್ ನಂತರ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ. ಬೆಂಗಳೂರಿನಲ್ಲೇ ಉಳಿದವರಲ್ಲಿ ಕೆಲವರು ಕಾಲ್ನಡಿಗೆಯಲ್ಲೇ ಮಕ್ಕಳೊಂದಿಗೆ ಊರು ಬಿಟ್ಟರು. ಇನ್ನೂ ಹಲವರು ಬೆಂಗಳೂರಿನ ಒಳಗೆ ಮತ್ತು ಹೊರ ವಲಯಗಳಲ್ಲಿ ಇದ್ದಾರೆ. ಹೊರ ರಾಜ್ಯದವರ ಜತೆಗೆ ಬಳ್ಳಾರಿ, ರಾಯಚೂರು, ಕಲಬುರ್ಗಿ ಸೇರಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಕಾರ್ಮಿಕರೂ ತಂಡೋಪತಂಡವಾಗಿ ನೆಲೆಸಿದ್ದಾರೆ.

ಬಿಬಿಎಂಪಿ, ಸಂಘ–ಸಂಸ್ಥೆಗಳು ಕಾರ್ಮಿಕರಿಗೆ, ನಿರ್ಗತಿಕರಿಗೆ ಆಹಾರದ ಪ್ಯಾಕೇಟ್‌ಗಳನ್ನು ಒದಗಿಸುತ್ತಿವೆ. ಆದರೂ ಅದು ಎಲ್ಲರನ್ನು ತಲಪುತ್ತಿಲ್ಲ. ಒಂದು ಹೊತ್ತು ಊಟ ಸಿಕ್ಕರೆ ಮತ್ತೊಂದು ಹೊತ್ತು ಖಾಲಿ ಹೊಟ್ಟೆಯೇ ಗತಿಯಾಗಿದೆ.

ಹೊರ ವಲಯದ ಮಂಚನಾಯಕನಹಳ್ಳಿ ಗೇಟ್ ಬಳಿ ಸುರಿದಿದ್ದ ಕೊಳತೆ ಟೊಮೆಟೊ ಹಣ್ಣುಗಳಲ್ಲಿ ಹುಳುಕಿಲ್ಲದ ಹಣ್ಣುಗಳನ್ನು ಹುಡುಕುತ್ತಿದ್ದ ಬಳ್ಳಾರಿಯ ಮಂಜಮ್ಮ, ‘ಕೂಲಿ ಕೆಲಸ ನಿಂತು ಹೋಗಿದೆ. ಹಣವೂ ಮುಗಿದಿದೆ. ನಿನ್ನೆ ಯಾರೋ ಪುಣ್ಯಾತ್ಮರು ಊಟ ತಂದು ಕೊಟ್ಟರು, ಇವತ್ತು ಮತ್ಯಾರೋ ಅಕ್ಕಿ ಕೊಟ್ಟಿದ್ದಾರೆ, ಸಾಂಬರ್ ಮಾಡಿಕೊಳ್ಳಲು ಟೊಮೆಟೊ ಹುಡುಕುತ್ತಿದ್ದೇವೆ. ನಾವೇನೋ ಒಂದು ದಿನ ಊಟ ಮಾಡದೆ ಇರಬಹುದು, ಮಕ್ಕಳಿಗೆ ಊಟ ಕೊಡದೆ ಇರುವುದು ಹೇಗೆ’ ಎಂದು ಕಣ್ತುಂಬಿಕೊಂಡರು.

‘ಊರಿನಲ್ಲಿ ಅನ್ನಕ್ಕೆ ಗತಿ ಇಲ್ಲದ ಕಾರಣ ಇಲ್ಲಿಗೆ ಬಂದೆವು. ಈಗಿನ ಸ್ಥಿತಿ ನೋಡಿದರೆ ಮತ್ತೆ ಊರಿಗೆ ಹೋಗುತ್ತೇವೋ ಇಲ್ಲವೋ ಎಂಬಂತಾಗಿದೆ. ನಿಮ್ಮ ಕೈ ಮುಗಿತೀವಿ, ನಮ್ಮನ್ನು ಊರಿಗೆ ಕಳಿಸಿಕೊಡಿ. ನ್ಯಾಯಬೆಲೆ ಅಂಗಡಿಯಲ್ಲಿ ಸಿಗುವ ಅಕ್ಕಿ–ದವಸದಲ್ಲೇ ಜೀವನ ನಡೆಸುತ್ತೇವೆ. ಮತ್ತೆ ಈ ಕಡೆಗೆ ಕಾಲಿಡಲ್ಲ’ ಎಂದು ದ್ಯಾಮಕ್ಕ ಕಣ್ಣೀರಿಟ್ಟರು.

ಊರು ಬಿಡಲು ಸದ್ಯಕ್ಕೆ ಅವಕಾಶ ಇಲ್ಲ
ಈ ರೀತಿಯ ಕಾರ್ಮಿಕರು ಮತ್ತು ನಿರ್ಗತಿಕರಿಗಾಗಿ ಸರ್ಕಾರ 200 ಶೆಲ್ಟರ್‌ಗಳನ್ನು ತೆರೆದಿದೆ. ವಾರ್ಡ್‌ ವಾರು ಇರುವ ಈ ಶೆಲ್ಟರ್‌ಗಳಿಗೆ, ತೊಂದರೆಯಲ್ಲಿರುವ ಜನರನ್ನು ಹುಡುಕಿ ಕರೆ ತರಲಾಗುತ್ತಿದೆ ಎಂದು ಕಾರ್ಮಿಕ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಸದ್ಯ 67 ಸಾವಿರ ಜನರನ್ನು ಗುರುತಿಸಿದ್ದೇವೆ. ನಗರದ ಹೊರ ವಲಯದಲ್ಲಿ ಇರುವವರಿಗೂ ವ್ಯವಸ್ಥೆ ಮಾಡುತ್ತಿದ್ದೇವೆ. ಒಡಿಶಾ, ಅಸ್ಸಾಂ ಕಾರ್ಮಿಕ ಇಲಾಖೆ ಅಧಿಕಾರಿಗಳು ನಮ್ಮನ್ನು ಸಂಪರ್ಕಿಸುತ್ತಿದ್ದಾರೆ. ಸದ್ಯಕ್ಕೆ ಬೆಂಗಳೂರು ಬಿಡಲು ಯಾರಿಗೂ ಅವಕಾಶ ಇಲ್ಲ. ಇರುವ ಕಡೆಗೆ ಬಿಬಿಎಂಪಿ ಮತ್ತು ಸಂಘ–ಸಂಸ್ಥೆಗಳ ಸಹಕಾರಲ್ಲಿ ಆಹಾರ ತಲುಪಿಸಲಾಗುತ್ತಿದೆ’ ಎಂದು ಹೇಳಿದರು.

10 ಸಾವಿರ ಆಹಾರ ಕಿಟ್
ಸಂಕಷ್ಟದಲ್ಲಿರುವ 10 ಸಾವಿರ ಕಾರ್ಮಿಕರಿಗೆ ಅಕ್ಕಿ, ದಿನಸಿ ಒಳಗೊಂಡ₹ 800 ಮೊತ್ತದ ಕಿಟ್ ವಿತರಿಸಲು ಸಿಐಟಿಯು ಮುಂದಾಗಿದೆ.

‘10 ಸಾವಿರ ಕಿಟ್ ಖರೀದಿಗೆ ₹80 ಲಕ್ಷ ಬೇಕಾಗಲಿದೆ. ಫೇಸ್‌ಬುಕ್‌ನಲ್ಲಿ ಮಾಡಿದ ಮನವಿಗೆ ಜನರಿಂದ ಒಂದೇ ದಿನ ₹2 ಲಕ್ಷ ಸಂಗ್ರಹವಾಗಿದೆ. ಮೊದಲ ಹಂತದಲ್ಲಿ 1 ಸಾವಿರ ಕಿಟ್ ಖರೀದಿಸಿ ನಿರ್ಗತಿಕರಿಗೆ ವಿತರಿಸುತ್ತೇವೆ’ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಹಂತೇಶ್ ತಿಳಿಸಿದರು.

ನಡೆಯುವುದು ನಿಂತಿಲ್ಲ
ಕಾರ್ಮಿಕರು‌ನಡೆದುಕೊಂಡೇ ಊರಿನತ್ತ ಪ್ರಯಾಣ ಬೆಳೆಸುವುದು ನಿಂತಿಲ್ಲ. ಭಾನುವಾರವೂ ತಂಡೋಪ ತಂಡವಾಗಿ ಕಾರ್ಮಿಕರು ಊರು ಬಿಡುವುದು ಕಂಡು ಬಂತು.

ತುಮಕೂರು ಕಡೆಗೆ ಕೆಲವರು ನಡೆದುಕೊಂಡೇ ಸಾಗುತ್ತಿದ್ದರೆ, ಮತ್ತೆ ಕೆಲವರು ಟ್ರ್ಯಾಕ್ಟರ್‌ಗಳಲ್ಲಿ ಹೊರಟರು. ಹೀಗೆ ನಡೆದು ಸಾಗಿದವರಲ್ಲಿ ಅಸ್ಸಾಂ ರಾಜ್ಯದ ಯುವಕರ ದಂಡೂ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT