ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19 ಭೀತಿ | ರೋಗಿಗಳ ನೆರವಿಗೆ ಧಾವಿಸಲು ಹಿಂದೇಟು

ಹಾಸಿಗೆ ಸಿಗದೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುತ್ತಿರುವ ಸೋಂಕಿತರು
Last Updated 14 ಜುಲೈ 2020, 20:58 IST
ಅಕ್ಷರ ಗಾತ್ರ

ಬೆಂಗಳೂರು:ನಗರದಲ್ಲಿ ಯಾವುದೇ ಕಾಯಿಲೆಗೆ ತುತ್ತಾದವರ ನೆರವಿಗೂ ಜನರು ಬರುತ್ತಿಲ್ಲ. ರೋಗಿಗಳನ್ನು ಸ್ಪರ್ಶಿಸಿದರೆ ಕೊರೊನಾ ಸೋಂಕು ತಗುಲುವ ಸಾಧ್ಯತೆ ಇದೆ ಎಂದುಕೊಂಡು ಜನರು ದೂರ ಸರಿಯುತ್ತಿದ್ದಾರೆ.

ಮಲ್ಲೇಶ್ವರದಲ್ಲಿ ಮಂಗಳವಾರ ಬೆಳಿಗ್ಗೆ 7 ಗಂಟೆಯ ವೇಳೆಗೆ ಆಟೊ ಚಾಲಕರೊಬ್ಬರು ಮೂರ್ಛೆರೋಗದಿಂದ (ಫಿಟ್ಸ್‌) ನಡು ರಸ್ತೆಯಲ್ಲಿ ಬಿದ್ದಿದ್ದರು. ಆದರೆ, ಯಾರೊಬ್ಬರೂ ಅವರನ್ನು ಮುಟ್ಟಲು, ಉಪಚರಿಸಲು ಮುಂದಾಗಲಿಲ್ಲ. ಸ್ಥಳೀಯರು ಆಂಬುಲೆನ್ಸ್‌ಗೆ ಕರೆ ಮಾಡಿದ ಹಲವು ಗಂಟೆಗಳ ನಂತರ ಬಂತು. ಆಂಬುಲೆನ್ಸ್‌ ಸಿಬ್ಬಂದಿ ಚಾಲಕನನ್ನು ಆಸ್ಪತ್ರೆಗೆ ಕರೆದೊಯ್ದರು.

ಡಯಾಲಿಸಿಸ್‌ ರೋಗಿಗೆ ಚಿಕಿತ್ಸೆ ನಿರಾಕರಣೆ:ನಂದಿನಿ ಲೇಔಟ್‌ನ 34 ವರ್ಷದ ವ್ಯಕ್ತಿಯೊಬ್ಬರು ಡಯಾಲಿಸಿಸ್‌ಗಾಗಿ ನಾಲ್ಕು ದಿನಗಳಿಂದ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಿದ್ದಾರೆ. ಬಿದ್ದು ಕಾಲು ಮುರಿದುಕೊಂಡಿರುವ ಅವರಿಗೆ, ಕಿಡ್ನಿ ವೈಫಲ್ಯವೂ ಆಗಿದೆ.

ಗರ್ಭಿಣಿ ಪರದಾಟ:ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದರೂ ಹಾಸಿಗೆ ಸಿಗದೆ ಗರ್ಭಿಣಿಯೊಬ್ಬರು ಪರದಾಡಬೇಕಾಯಿತು. ಮಹಾಲಕ್ಷ್ಮಿಲೇಔಟ್‌ ಕಮಲಾನಗರದ ನಿವಾಸಿಯಾಗಿರುವ ಮಹಿಳೆ ಚಿಕಿತ್ಸೆಗಾಗಿ ಕೆ.ಸಿ. ಜನರಲ್‌ ಆಸ್ಪತ್ರೆಗೆ ತೆರಳಿದ್ದಾರೆ. ಅಲ್ಲಿ ಹಾಸಿಗೆ ಇಲ್ಲ ಎಂದಿದ್ದಕ್ಕೆ ಮತ್ತೆ ರಾಜಾಜಿನಗರದ ನಾಗರಾಜ್‌ ಹೆರಿಗೆ ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿಯೂ ಹಾಸಿಗೆ ಇಲ್ಲ ಎಂದು ಹೇಳಿ ವಾಪಸ್‌ ಕಳಿಸಿದ್ದಾರೆ.

‘ತುಂಬು ಗರ್ಭಿಣಿಯೊಬ್ಬರು ನನಗೆ ಕರೆ ಮಾಡಿ ಸಮಸ್ಯೆ ಹೇಳಿಕೊಂಡರು. ಕೊನೆಗೆ ಅವರನ್ನು ಶ್ರೀರಾಂಪುರ ಹೆರಿಗೆ ಆಸ್ಪತ್ರೆಗೆ ದಾಖಲಿಸಲಾಯಿತು’ ಎಂದು ಪಾಲಿಕೆ ಸದಸ್ಯ ಎಂ.ಶಿವರಾಜ್‌ ಹೇಳಿದರು.

‘ಹಣ ಕಟ್ಟಿದ ನಂತರವೇ ಚಿಕಿತ್ಸೆ’
ಸರ್ಕಾರಿ ಆಸ್ಪತ್ರೆಯಲ್ಲಿ ಹಾಸಿಗೆಯ ಕೊರತೆ, ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಹಣಕ್ಕೆ ಒತ್ತಾಯ ಮಾಡುತ್ತಿರುವುದರಿಂದ ರೋಗಿಗಳು ಹೈರಾಣಾಗಿದ್ದಾರೆ.

‘ಹೆಬ್ಬಾಳದಲ್ಲಿರುವ ಆಸ್ಪತ್ರೆಗೆ ಸಂಬಂಧಿಯೊಬ್ಬರನ್ನು ಆಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗಿದ್ದೆವು. ಐಸಿಯುಗೆ ದಾಖಲಿಸಬೇಕಾದರೆ ₹9 ಲಕ್ಷ ಕಟ್ಟಬೇಕು ಎಂದು ಹೇಳಿದರು. ಅನಿವಾರ್ಯವಾಗಿ ನಾವು ಶಿವಾಜಿನಗರದ ಆಸ್ಪತ್ರೆಗೆ ದಾಖಲಿಸಬೇಕಾಯಿತು’ ಎಂದು ರೋಗಿಯ ಸಂಬಂಧಿಯೊಬ್ಬರು ಅಳಲು ತೋಡಿಕೊಂಡರು.

ಚಿಕಿತ್ಸೆಗಾಗಿ ನಾಲ್ಕೈದು ಆಸ್ಪತ್ರೆ ಸುತ್ತಿದ ಎಆರ್‌ಒ
ಚಿಕಿತ್ಸೆ ಪಡೆಯಲು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ ನಡೆಸುವ ಸಂಕಷ್ಟ ಸ್ವತಃ ಬಿಬಿಎಂಪಿ ಅಧಿಕಾರಿಗಳಿಗೂ ಎದುರಾಗಿದೆ. ಜೆ.ಪಿ.ನಗರ ವಾರ್ಡ್‌ನ ಸಹಾಯಕ ಕಂದಾಯ ಅಧಿಕಾರಿ ಶರಣಮ್ಮ ಎಂಬುವರು ಆಸ್ಪತ್ರೆಯ ಹಾಸಿಗೆಯಲ್ಲಿದ್ದುಕೊಂಡೇ ವಿಡಿಯೊ ಮಾಡಿ ತಾವು ಚಿಕಿತ್ಸೆ ಪಡೆಯಲು ಎದುರಿಸಿದ ಪಡಿಪಾಟಲನ್ನು ವಿವರಿಸಿದ್ದಾರೆ.

‘ಯಾರಿಂದಲೂ ಯಾವುದೇ ರೀತಿಯ ಸಹಾಯ ಸಿಗುತ್ತಿಲ್ಲ. ನಮ್ಮ ಬಗ್ಗೆ ನಾವೇ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಅವರು ಸಹೋದ್ಯೋಗಿಗಳಿಗೆ ಕಿವಿಮಾತು ಹೇಳಿದ್ದಾರೆ. ಅವರು ಮಾಡಿರುವ ವಿಡಿಯೊ ಬಿಬಿಎಂಪಿ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಮೊಬೈಲ್‌ಗಳಲ್ಲಿ ಹರಿದಾಡುತ್ತಿದೆ.

ಶರಣಮ್ಮ ಅವರಿಗೆ ವಾರದ ಹಿಂದೆ ಚಳಿ ಜ್ವರ ಬಂದಿತ್ತು. ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಹೋದರೆ, ಅಲ್ಲಿ ಆರೋಗ್ಯ ತಪಾಸಣೆ ನಡೆಸಲಿಲ್ಲ. ಮೊದಲು ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡು ಬನ್ನಿ ಎಂದು ಹಿಂದಕ್ಕೆ ಕಳುಹಿಸಿದರು.

‘ಐದು ದಿನಗಳಲ್ಲಿ ಆಸ್ಪತ್ರೆಗಳನ್ನು ಸುತ್ತುತ್ತಲೇ ಪೂರ್ತಿ ನಿಶ್ಶಕ್ತಳಾಗಿದ್ದೇನೆ. ನನಗೆ ಕುಳಿತುಕೊಳ್ಳುವುದಕ್ಕೆ, ನಿಲ್ಲುವುದಕ್ಕೂ ಹಾಗೂ ಮಲಗುವುದಕ್ಕೂ ಆಗುತ್ತಿರಲಿಲ್ಲ. ಉಸಿರಾಟ ಸಮಸ್ಯೆಯೂ ಇತ್ತು. ಈ ಬಗ್ಗೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಸಂಘದ ಅಧ್ಯಕ್ಷ ಎ.ಅಮೃತರಾಜ್‌ ಅವರಿಗೆ ಕರೆ ಮಾಡಿ ವಿವರಿಸಿದ್ದೆ. ಆಸ್ಟರ್‌ ಆಸ್ಪತ್ರೆಗೆ ಹೋಗುವಂತೆ ಹೇಳಿದರು. ಅರ್ಧ ದಿನ ಕಾದ ಬಳಿಕ ಹಾಸಿಗೆ ಲಭ್ಯ ಇಲ್ಲ ಎಂದು ಹೇಳಿದರು’ ಎಂದು ಮಹಿಳೆ ಆರೋಪಿಸಿದ್ದಾರೆ.

‘ಕಂದಾಯ ಉಪ ಆಯುಕ್ತರನ್ನು ಸಂಪರ್ಕಿಸಿದಾಗ ಕಿಮ್ಸ್‌ ಆಸ್ಪತ್ರೆಗೆ ಹೋಗುವಂತೆ ಹೇಳಿದರು. ಅಲ್ಲಿ ಪರೀಕ್ಷೆ ಮಾಡಿಸಿದೆ. ನಿಶ್ಶಕ್ತಿಯಿಂದ ಕುಸಿದು ಕುಳಿತೆ. ಅಲ್ಲೂ ಸೇರಿಸಿಕೊಂಡಿಲ್ಲ. ಕೊನೆಗೆ ಬ್ಯಾಟರಾಯನಪುರದ ಪಾರೋಲೈಫ್‌ ಆಸ್ಪತ್ರೆಗೆ ದಾಖಲಾದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT