ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19 ಭೀತಿ | ವಿದೇಶಕ್ಕೆ ಪ್ರಯಾಣಿಸಲು ಅನುಮತಿ ಅಗತ್ಯ: ಆರೋಗ್ಯ ಇಲಾಖೆ ಸೂಚನೆ

Last Updated 4 ಮಾರ್ಚ್ 2020, 20:13 IST
ಅಕ್ಷರ ಗಾತ್ರ

ಬೆಂಗಳೂರು: ‘14 ದಿನಗಳಲ್ಲಿ ಕೋವಿಡ್‌- 19 ಸೋಂಕು ಪ್ರಕರಣ ವರದಿಯಾದ ದೇಶಕ್ಕೆ ಭೇಟಿ ನೀಡಿ, ವಾಪಸ್ ಆದಲ್ಲಿ ಈ ಬಗ್ಗೆ ಮಾಹಿತಿ ನೀಡಬೇಕು. ನಗರದಿಂದ ಆ ದೇಶಗಳಿಗೆ ಮತ್ತೆ ಪ್ರಯಾಣಿಸಬೇಕಾಗಿದ್ದರೂ ಇಲಾಖೆಯ ಅನುಮತಿ ಪಡೆಯಬೇಕು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದೆ.

ನಗರದಲ್ಲಿ ಉದ್ಯೋಗ ಮಾಡುತ್ತಿದ್ದ ಟೆಕಿಯೊಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿರುವುದರಿಂದ ಆರೋಗ್ಯ ಇಲಾಖೆಯು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಐಟಿ–ಬಿಟಿ ಕಂಪನಿಗಳಿಗೆ ಸೂಚಿಸಿದೆ.

ಚೀನಾ, ಇರಾನ್, ಇರಾಕ್‌, ಕೊರಿಯಾ, ಇಟಲಿ, ಜಪಾನ್ ಸೇರಿದಂತೆ ಅಧಿಕ ಸೋಂಕು ಪ್ರಕರಣಗಳು ವರದಿಯಾದ 11 ದೇಶಗಳಿಗೆ ಪ್ರಯಾಣ ಮಾಡದಿರುವುದು ಒಳಿತು. ಕೆಲಸ ಮಾಡುವ ಸ್ಥಳದಲ್ಲಿ ಸ್ವಚ್ಛತೆಗೆ ಆದ್ಯತೆ ಮಾಡಬೇಕು. ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.

ಸೋಂಕು ತಗುಲಿದಹೈದರಾಬಾದ್‍ನ ಟೆಕಿ ವಾಸವಚಿದ್ದ ಅಪಾರ್ಟ್‌ಮೆಂಟ್ ವಸತಿ ಸಮುಚ್ಚಯದ 92 ಮನೆಗಳ ನಿವಾಸಿಗಳ ಆರೋಗ್ಯವನ್ನು ಬುಧವಾರವೂ ತಪಾಸಣೆ ಮಾಡಲಾಯಿತು. ಯಾವುದೇ ವ್ಯಕ್ತಿಯಲ್ಲಿ ಸೋಂಕಿನ ಶಂಕೆ ಕಾಣಿಸಿಕೊಂಡಿಲ್ಲ. ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್ ಕುಮಾರ್ ಅವರು ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಆರೋಗ್ಯಾಧಿಕಾರಿಗಳ ಜತೆಗೆ ಸಭೆ ನಡೆಸಿ, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ವಿದೇಶಿಗರು ದಾಖಲು:ರಾಜೀವ್‍ಗಾಂಧಿ ಎದೆರೋಗಗಳ ಆಸ್ಪತ್ರೆಗೆ ಇಬ್ಬರು ಸೋಂಕು ಶಂಕಿತ ವಿದೇಶಿಯರನ್ನು ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದಾಗಿ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಲ್ಲಿ ದಾಖಲಾದವರ ಸಂಖ್ಯೆ ಐದಕ್ಕೆ ಏರಿದೆ.

ಫೆ.28 ರಂದುಇರಾನ್‍ನಿಂದ ಬಂದ ವ್ಯಕ್ತಿಯೊಬ್ಬರು ತಾವಾಗಿಯೇ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ವೈದ್ಯಕೀಯ ಪರೀಕ್ಷಾ ವರದಿ ಬಂದಿದ್ದು, ಸೋಂಕು ತಗುಲಿಲ್ಲ ಎನ್ನುವುದು ದೃಢ‍ಪಟ್ಟಿದೆ.

ರೋಗಿಗಳ ಸಂಖ್ಯೆ ಹೆಚ್ಚಳ
ಕೋವಿಡ್‌ –19 ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಜ್ವರ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗೆ ಆಸ್ಪತ್ರೆಯನ್ನು ಸಂಪರ್ಕಿಸುವವರ ಸಂಖ್ಯೆ ಹೆಚ್ಚಳವಾಗಿದೆ.ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ ಈ ಮೊದಲು ನಿತ್ಯ ಸರಾಸರಿ 8 ರಿಂದ10 ಮಂದಿ ಸೋಂಕಿಗೆ ತಪಾಸಣೆ ಮಾಡಿಸಿಕೊಳ್ಳುತ್ತಿದ್ದರು. ಟೆಕಿಯಲ್ಲಿ ಸೋಂಕು ದೃಢಪಟ್ಟ ಬಳಿಕ ಈಗ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಚಿಕಿತ್ಸೆಗೆ ಬರುತ್ತಿದ್ದಾರೆ.

ಬುಧವಾರ 63 ಮಂದಿಯನ್ನು ತಪಾಸಿಸಿ, 13 ಮಂದಿಯ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.ಬಿಎಂಸಿಆರ್‌ಐನಲ್ಲಿ 50 ಮಂದಿ ತಪಾಸಣೆಗೆ ಒಳಪಟ್ಟಿದ್ದು, ಯಾರಿಗೂ ಸೋಂಕು ತಗುಲಿಲ್ಲ.

300 ಮಂದಿಗೆ ಚಿಕಿತ್ಸೆಗೆ ವ್ಯವಸ್ಥೆ
ಯಲಹಂಕದಲ್ಲಿರುವ ಗಡಿ ಭದ್ರತಾ ಪಡೆ ತಲಾ 100 ಹಾಸಿಗೆಗಳ ಮೂರು ಬ್ಯಾರಕ್‌ಗಳನ್ನು ಸಿದ್ಧಪಡಿಸಿದೆ. ಅಗತ್ಯ ತರಬೇತಿ ಪಡೆದ ವೈದ್ಯರನ್ನು 24x7 ನಿಯೋಜಿಸಲಾಗುತ್ತದೆ. ಮುಖಗವಸು. ಕೈಗವಸುಗಳು ಸೇರಿದಂತೆ ಅಗತ್ಯ ಸಂರಕ್ಷಣಾ ಸಾಧನಗಳನ್ನು ಒದಗಿಸುವಂತೆ ರಾಜ್ಯ ಔಷಧಿ ನಿಯಂತ್ರಕರಿಗೆ ಸರ್ಕಾರ ಸೂಚಿಸಿದೆ.

ಕಮಾಂಡ್ ಆಸ್ಪತ್ರೆಯಲ್ಲಿ 20 ಹಾಸಿಗೆಗಳ ಪ್ರತ್ಯೇಕ ವಾರ್ಡ್ ಸ್ಥಾಪಿಸಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್ ಅವರು ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಬಿಬಿಎಂಪಿಯ ಉನ್ನತಾಧಿಕಾರಿಗಳ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT