ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಶ್ರೂಷಕರ ಅಂತರಂಗ: ‘ಕುಟುಂಬ ದೂರದಲ್ಲಿದೆ, ಸೇವೆ ನಿರಾತಂಕ’

Last Updated 9 ಮೇ 2021, 4:25 IST
ಅಕ್ಷರ ಗಾತ್ರ

ಬೆಂಗಳೂರು: ‘ಕುಟುಂಬದವರೆಲ್ಲದೂರದ ಊರಿನಲ್ಲಿರುವುದರಿಂದಕೊರೊನಾ ಸೇವೆ ಮಾಡಲು ನನಗೆ ಆತಂಕವಿಲ್ಲ. ಆದರೆ, ಈಗಿನ ಪರಿಸ್ಥಿತಿಯಿಂದ ಹೆದರಿರುವ ನನ್ನ ತಾಯಿ ಪ್ರತಿದಿನವೂ ಕರೆ ಮಾಡಿ ಯೋಗಕ್ಷೇಮ ವಿಚಾರಿಸುತ್ತಾರೆ. ‘ಕೆಲಸ ಬಿಟ್ಟು ಮನೆಗೆ ಬಾ’ ಎಂದೂ ಆಗಾಗ ಗದರುತ್ತಾರೆ. ಅವರಿಗೆ ಧೈರ್ಯ ತುಂಬಿ ಕೆಲಸಕ್ಕೆ ತೆರಳುತ್ತೇನೆ’.

ಇದು, ನಗರದ ಖಾಸಗಿ ಆಸ್ಪತ್ರೆಯಲ್ಲಿಕೊರೊನಾ ಸೇವೆಯಲ್ಲಿ ತೊಡಗಿರುವ ಆರೋಗ್ಯ ಸಿಬ್ಬಂದಿ ಡಿ.ಬಿಂದು ಅವರ ಅಂತರಂಗದ ಮಾತು.

‘ಕಳೆದ ವರ್ಷ ಹಾಗೂ ಸದ್ಯದ ಪರಿಸ್ಥಿತಿಯಲ್ಲಿನ ಮಾತು ಕೊರೊನಾ ಆಗಿದ್ದರೂ, ಪರಿಸ್ಥಿತಿಗಳು ಭಿನ್ನವಾಗಿವೆ. ಕಳೆದ ವರ್ಷ ಈಗಿನಂತೆ ಆಮ್ಲಜನಕದ ಕೊರತೆ ಎದುರಾಗಿರಲಿಲ್ಲ. ಸಾವಿನ ಪ್ರಮಾಣವೂ ಕಡಿಮೆ ಇತ್ತು. ಈಗ ತದ್ವಿರುದ್ಧದ ವಾತಾವರಣ’.

‘ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವ ತಂದೆಯ ಚಿಂತೆ ಕರ್ತವ್ಯದ ವೇಳೆಯೂ ಕಾಡುತ್ತದೆ. ಈಗ ಊರಿಗೆ ಹೋಗಲೂ ಸಾಧ್ಯವಿಲ್ಲ. ಇಲ್ಲಿನ ರೋಗಿಗಳ ಆರೈಕೆಯಿಂದಲೇ ಅಲ್ಲಿನ ತಂದೆಯ ಆರೋಗ್ಯ ಕ್ಷೇಮ ಎಂದುಕೊಳ್ಳುತ್ತೇನೆ’.

‘ಆಸ್ಪತ್ರೆಯವರೇನನಗೆ ವಸತಿ ವ್ಯವಸ್ಥೆ ಕಲ್ಪಿಸಿದ್ದಾರೆ. ಕೋಣೆಯಲ್ಲಿ ಒಬ್ಬಳೇ ಇರುವುದರಿಂದ ಒಂದು ರೀತಿಯಲ್ಲಿ ಕ್ವಾರೆಂಟೈನ್‌ ಜೀವನ. ಹಾಗಾಗಿ, ನನ್ನಿಂದ ಇತರರಿಗೆ ಸೋಂಕು ಹರಡುವುದಿಲ್ಲ ಎಂಬ ನಂಬಿಕೆಯಲ್ಲಿ ಹೆಜ್ಜೆ ಇಡುತ್ತೇನೆ. ಆದರೆ, ಆಸ್ಪತ್ರೆಗೆ ಬರುವ ಸೋಂಕಿತರನ್ನು ನಿರ್ವಹಿಸುವಾಗ ಎಷ್ಟೇ ಜಾಗ್ರತೆಯಿಂದ ಇದ್ದರೂ ಸೋಂಕು ತಗುಲುವ ಸಾಧ್ಯತೆ ಇರುತ್ತದೆ’.

‘ಸೋಂಕಿತರನ್ನು ನಿಭಾಯಿಸುವುದು ಸವಾಲಿನ ಕೆಲಸ. ಪ್ರತಿಯೊಬ್ಬರ ಮನಸ್ಥಿತಿ ವಿಭಿನ್ನವಾಗಿರುತ್ತವೆ. ಅವರಷ್ಟೇ ಒತ್ತಡ ನಮಗೂ ಇರುತ್ತದೆ. ಅದನ್ನು ಕೆಲವೇ ಮಂದಿ ಅರ್ಥ ಮಾಡಿಕೊಳ್ಳುತ್ತಾರೆ. ಆಸ್ಪತ್ರೆಗೆ ಬಂದ ಮೇಲೆ ಕುಟುಂಬದವರಿಂದ ದೂರವಿರಲು ಸಾಧ್ಯವಾಗದೆ, ಗೋಳಾಡುತ್ತಾರೆ. ಮನೆಗೆ ಹೋಗಬೇಕು, ತನ್ನವರನ್ನು ಕಾಣಬೇಕು ಎಂದು ಹಠ ಮಾಡುತ್ತಾರೆ. ಆಗ ಬೇರೆ ದಾರಿ ಕಾಣದೆ, ವಿಡಿಯೊ ಕರೆ ಮಾಡಿಸಿ, ಕುಟುಂಬದವರನ್ನು ಸಂಪರ್ಕಿಸುತ್ತೇವೆ. ಇದಾದ ಬಳಿಕ ರೋಗಿಗಳು ಸಮಾಧಾನದಿಂದ ವರ್ತಿಸುತ್ತಾರೆ’.

‘ಸೋಂಕಿನ ಲಕ್ಷಣಗಳು ಕಂಡು ಬಂದರೆ ಭಯಗೊಳ್ಳಬೇಡಿ. ಆರಂಭಿಕ ಹಂತದಲ್ಲಿರುವವರು ಆಸ್ಪತ್ರೆಗೆ ದಾಖಲಾಗುವ ಬದಲು ಮನೆಯಲ್ಲೇ ಗುಣಮುಖವಾಗಬಹುದು. ಸೋಂಕು ಲಕ್ಷಣ ಕಾಣಿಸಿಕೊಂಡರೆ, ಮನೆಯಲ್ಲೇ ಪ್ರತ್ಯೇಕಗೊಂಡು, ಚಿಕಿತ್ಸೆಗೆ ಪಡೆಯಿರಿ. ಈಗ ರೋಗಿಗಳಿಗೆ ಹಾಸಿಗೆ ಸಮಸ್ಯೆ ಇರುವುದರಿಂದ ತುರ್ತು ಅಗತ್ಯವಿದ್ದವರಿಗೂ ಸಕಾಲದ ಚಿಕಿತ್ಸೆ ಸಿಗಬಹುದು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT