ಶುಕ್ರವಾರ, ಜೂನ್ 18, 2021
27 °C
ಅಂಗಡಿ ಮಾಲೀಕರಿಗೆ, ಕೆಲಸಗಾರರಿಗೆ ಲಾಠಿ ಏಟು

ಬೆಂಗಳೂರು: ಕರ್ಫ್ಯೂಗೆ ಭಾನುವಾರವೂ ಉತ್ತಮ ಸ್ಪಂದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಸೋಂಕು ಹರಡುವಿಕೆ ತಡೆಗಾಗಿ ಜಾರಿಗೆ ತರಲಾಗಿದ್ದ ವಾರಾಂತ್ಯದ ಕರ್ಫ್ಯೂಗೆ ಭಾನುವಾರವೂ ನಗರದ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಶುಕ್ರವಾರ ರಾತ್ರಿಯಿಂದಲೇ ಜಾರಿಯಾಗಿದ್ದ ಕರ್ಫ್ಯೂನಿಂದಾಗಿ ವಾಣಿಜ್ಯ ಚಟುವಟಿಕೆ ಬಂದ್ ಮಾಡಲಾಗಿತ್ತು. ನಗರದ ಅಂಗಡಿ, ಮಳಿಗೆ, ಹೋಟೆಲ್, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು ಬಾಗಿಲು ಮುಚ್ಚಿದ್ದವು. ನಗರದಲ್ಲಿ ಸಾರ್ವಜನಿಕರ ಓಡಾಟವನ್ನೂ ನಿರ್ಬಂಧಿಸಲಾಗಿತ್ತು. ಶನಿವಾರವೂ ಅದೇ ಸ್ಥಿತಿ ಇತ್ತು.

ಭಾನುವಾರ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ವಾರಾಂತ್ಯದಲ್ಲಿ ಬಾಡೂಟ ಸವಿಯುತ್ತಿದ್ದ ಬಹುತೇಕರು, ಮಾಂಸದಂಗಡಿ ಎದುರು ಸಾಲುಗಟ್ಟಿ ನಿಂತಿದ್ದು ಕಂಡುಬಂತು. ತರಕಾರಿ ಹಾಗೂ ಹಾಲು ಮಾರಾಟ ಮಳಿಗೆ ಎದುರು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು.

ಶ್ರೀರಾಮಪುರ, ಯಶವಂತಪುರ, ಶಿವಾಜಿನಗರ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಬೆಳಿಗ್ಗೆ 10 ಗಂಟೆ ನಂತರವೂ ಅಂಗಡಿಗಳನ್ನು ತೆರೆಯಲಾಗಿತ್ತು. ಅಂಥ ಸ್ಥಳಗಳಲ್ಲಿ ಗಸ್ತು ತಿರುಗಿದ ಪೊಲೀಸರು, ಮಾಲೀಕರಿಗೆ ಹಾಗೂ ಕೆಲಸಗಾರರಿಗೆ ಲಾಠಿ ರುಚಿ ತೋರಿಸಿ ಅಂಗಡಿ ಮುಚ್ಚಿಸಿದರು.

ಶಿವಾಜಿನಗರದಲ್ಲಿ ಕೋಳಿ ಮಾಂಸ ಮಾರಾಟ ಮಳಿಗೆಗಳು ತೆರೆದಿದ್ದವು. ಪೊಲೀಸರು ಸ್ಥಳಕ್ಕೆ ಹೋದಾಗ, ‘ಮಾರಾಟಕ್ಕೆ ಸಿದ್ಧಪಡಿಸಿದ್ದ ಮಾಂಸ ಉಳಿದಿದೆ. ಗ್ರಾಹಕರು ಇರುವುದರಿಂದ ಕತ್ತರಿಸಿ ಕೊಡುತ್ತಿದ್ದೇವೆ’ ಎಂದು ಮಳಿಗೆ ಮಾಲೀಕರು ಹೇಳಿದರು. ‘ಬೆಳಿಗ್ಗೆ 10ಕ್ಕೆ ಮಳಿಗೆ ಮುಚ್ಚಬೇಕು’ ಎಂದು ಪೊಲೀಸರು ತಾಕೀತು ಮಾಡಿ ಗ್ರಾಹಕರನ್ನು ವಾಪಸು ಕಳುಹಿಸಿ ಅಂಗಡಿ ಬಂದ್ ಮಾಡಿದರು.

ಯಶವಂತಪುರದ ಮೀನು ಮಾರುಕಟ್ಟೆಯಲ್ಲೂ ನಿಗದಿತ ಸಮಯದ ನಂತರವೂ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಪೊಲೀಸರು ಲಾಠಿ ಬೀಸಿ ಜನರನ್ನು ಚದುರಿಸಿದರು.

ಪ್ರಮುಖ ರಸ್ತೆ ಹಾಗೂ ಮೇಲ್ಸೇತುವೆಗಳನ್ನು ಬಂದ್ ಮಾಡಲಾಗಿತ್ತು. ಬಸ್‌ಗಳ ಸಂಚಾರಕ್ಕೆ ಅವಕಾಶವಿದ್ದರೂ ಮೆಜೆಸ್ಟಿಕ್ ನಿಲ್ದಾಣಗಳಲ್ಲಿ ಬಸ್ ಹಾಗೂ ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆ ಇತ್ತು.

ತುಮಕೂರು ರಸ್ತೆ, ಮೈಸೂರು ರಸ್ತೆ, ಕನಕಪುರ ರಸ್ತೆ, ಹಳೇ ಮದ್ರಾಸ್ ರಸ್ತೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ವಾಹನಗಳ ತಪಾಸಣೆ ನಡೆಸಲಾಯಿತು. ಕಾರುಗಳ ಸಂಚಾರವೂ ಕಂಡುಬಂತು. ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದರು. ವಾಹನ ಜಪ್ತಿ ವೇಳೆಯಲ್ಲೇ ಪೊಲೀಸರು ಹಾಗೂ ಚಾಲಕರ ನಡುವೆ ವಾಗ್ವಾದವೂ ನಡೆಯಿತು.

ಬೈಕ್ ಸವಾರರಿಗೆ ಲಾಠಿ ಏಟು: ಭಾನುವಾರ ಅನಗತ್ಯವಾಗಿ ರಸ್ತೆಯಲ್ಲಿ ಓಡಾಡುವವರ ಸಂಖ್ಯೆಯೂ ಹೆಚ್ಚಿತ್ತು. ಬೈಕ್‌ನಲ್ಲಿ ಬಂದಿದ್ದ ಸವಾರರನ್ನು ತಡೆದ ಪೊಲೀಸರು, ಲಾಠಿ ಏಟು ನೀಡಿದರು.

ಬೈಕ್‌ಗಳನ್ನು ಜಪ್ತಿ ಮಾಡಿ ಸವಾರರ ವಿರುದ್ಧ ಪ್ರಕರಣ ದಾಖಲಿಸಿಕೊಂಡರು. ಜಪ್ತಿ ಮಾಡಲಾದ ವಾಹನಗಳ ಸವಾರರು, ಠಾಣೆಗೆ ಹೋಗಿ ವಾಹನಗಳನ್ನು ಬಿಡಿಸಿಕೊಳ್ಳಲು ಯತ್ನಿಸಿದ್ದರು. ಅಂಥವರಿಗೆ ಪೊಲೀಸರು ನೋಟಿಸ್‌ ಕೊಟ್ಟು ಕಳುಹಿಸಿದರು.

ಬೈಕ್‌ನಲ್ಲಿ ಮಧುಮಗ; ಆಮಂತ್ರಣ ಪತ್ರಿಕೆ ಕೇಳಿದ ‍ಪೊಲೀಸರು
ಕರ್ಫ್ಯೂ ಸಮಯದಲ್ಲೇ ಬೈಕ್‌ನಲ್ಲಿ ಮದುವೆಗೆ ಹೊರಟಿದ್ದ ಮಧುಮಗ, ಪೊಲೀಸರ ಕೈಗೆ ಸಿಕ್ಕಿಬಿದ್ದು ವಿಚಾರಣೆ ಎದುರಿಸಬೇಕಾಯಿತು.

ಮಾಗಡಿ ರಸ್ತೆಯಲ್ಲಿ ಚೆಕ್‌ಪೋಸ್ಟ್‌ ತೆರೆದು ಪೊಲೀಸರು ವಾಹನಗಳ ತಪಾಸಣೆ ಮಾಡುತ್ತಿದ್ದರು. ಮಧುಮಗ, ಸ್ನೇಹಿತನ ಜೊತೆ ಬೈಕ್‌ನಲ್ಲಿ ಸ್ಥಳಕ್ಕೆ ಬಂದಿದ್ದರು.

ಬೈಕ್ ತಡೆದಿದ್ದ ಪೊಲೀಸರು, ‘ಕರ್ಫ್ಯೂ ಇದೆ. ಏಕೆ ಹೊರಗೆ ಬಂದಿದ್ದೀರಾ’ ಎಂದು ಪ್ರಶ್ನಿಸಿದರು. ಮಧುಮಗ, ‘ಸರ್. ದೇವಸ್ಥಾನದಲ್ಲಿ ನನ್ನ ಮದುವೆ ಇದೆ. ಅದಕ್ಕಾಗಿ ಹೊರಟಿರುವೆ. ದಯವಿಟ್ಟು ಬಿಟ್ಟುಬಿಡಿ, ಮುಹೂರ್ತಕ್ಕೆ ತಡವಾಗಿದೆ’ ಎಂದರು.

ಅದಕ್ಕೆ ಒಪ್ಪದ ಪೊಲೀಸರು, ‘ಸುಳ್ಳು ಹೇಳುತ್ತಿದ್ದಿಯಾ? ಎಲ್ಲಿ ಮದುವೆ ಆಮಂತ್ರಣ ಪತ್ರ ತೋರಿಸು’ ಎಂದರು. ಮಧುಮಗ ಆಮಂತ್ರಣ ಪತ್ರಿಕೆ ತೋರಿಸಿದರು. ನಂತರವೇ ಪೊಲೀಸರು, ಮದುವೆ ಶುಭಾಶಯ ಹೇಳಿ ಅವರನ್ನು ಬಿಟ್ಟು ಕಳುಹಿಸಿದರು.

ಮಧುಮಗ, ‘ಸಂಬಂಧಿಕರು, ಸ್ನೇಹಿತರ ಸಮ್ಮುಖದಲ್ಲಿ ಮದುವೆ ಆಗುವ ಆಸೆ ಇತ್ತು. ಆದರೆ, ಕೊರೊನಾ ಬಂದು ಸಂಭ್ರಮವನ್ನೇ ಕಿತ್ತುಕೊಂಡಿದೆ. ದೇವಸ್ಥಾನದಲ್ಲಿ ಸರಳವಾಗಿ ಮದುವೆ ಮಾಡಿಕೊಳ್ಳುತ್ತಿದ್ದೇವೆ. ಕಾರಿನಲ್ಲಿ ಹೋಗುವ ಬದಲು ಬೈಕ್‌ನಲ್ಲಿ ತೆರಳುತ್ತಿದ್ದೇನೆ’ ಎಂದೂ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು