ಸೋಮವಾರ, ಜೂನ್ 1, 2020
27 °C
ಪ್ರಧಾನಿ ಕರೆಗೆ ಓಗೊಟ್ಟ ಮಹಾನಗರ ಜನ * ಹಣತೆ ಬೆಳಗಿ ಒಗ್ಗಟ್ಟು ಪ್ರದರ್ಶನ * ಕೊರೊನಾ ಹೊಡೆದೋಡಿಸಲು ದೇವರಿಗೆ ಮೊರೆ

ನಗರದಲ್ಲಿ ಬೆಳಗಿತು ಸದಾಶಯದ ದೀಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಕರೆಯ ಮೇರೆಗೆ ದೀಪ ಬೆಳಗುವ ಮೂಲಕ ಕೊರೊನಾ ಸೋಂಕಿನ ವಿರುದ್ಧ ಜನರು ಒಗ್ಗಟ್ಟು ಪ್ರದರ್ಶಿಸಿದರು. ಸುಮಾರು ಹತ್ತು ನಿಮಿಷ ದೀಪಗಳ ಬೆಳಕಿನಲ್ಲಿ ಕಂಗೊಳಿಸಿದ ನಗರ ದೀಪಾವಳಿಯನ್ನು ನೆನಪಿಸಿತು.

ಸರಿಯಾಗಿ ರಾತ್ರಿ 9 ಗಂಟೆಗೆ ವಿದ್ಯುತ್‌ ದೀಪ ಆರಿಸಿದ ಜನ ದೀಪ, ಮೇಣದ ಬತ್ತಿ, ಟಾರ್ಚ್‌ ಅಥವಾ ಮೊಬೈಲ್‌ ಲೈಟ್‌ ಬೆಳಗುವ ಮೂಲಕ ಕೊರೊನಾ ವಿರುದ್ಧ ದೇಶವನ್ನು ರಕ್ಷಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು. 9.15 ಆದರೂ ಜನ ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ, ಪ್ರಧಾನಿ ನರೇಂದ್ರ ಮೋದಿಯವರೆಗೆ ಜೈಕಾರ ಹಾಕುತ್ತಲೇ ಇದ್ದರು. ಭಾರತ್‌ ಮಾತಾ ಕಿ ಜೈ ಘೋಷಣೆ ಮುಗಿಲು ಮುಟ್ಟಿತ್ತು.

ದೇವಸ್ಥಾನ, ಅಪಾರ್ಟ್‌ಮೆಂಟ್‌ ಸಮುಚ್ಚಯ, ಮನೆ, ಕಚೇರಿ, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಕಟ್ಟಡಗಳ ಎದುರು ದೀಪ ಬೆಳಗಲಾಯಿತು. 

ಕೆಲವರು ಮನೆಯ ತಾರಸಿಯಿಂದ ಹಾರುವ ದೀಪಗಳನ್ನು ಬಿಟ್ಟರು. ಆಕಾಶದಲ್ಲಿ ಕೆಲಕಾಲ ಪ್ರಕಾಶಿಸಿದ ಈ ದೀಪಗಳು ನಂತರ ಮರೆಯಾದವು. ಇನ್ನೂ ಕೆಲವರು ಪಟಾಕಿ ಸಿಡಿಸಿದರು, ಹಲವರು ಚಪ್ಪಾಳೆ ತಟ್ಟಿದರು.

ಏಕತೆಯ ಸಂದೇಶ
ಬಹುತೇಕರು ಮನೆಬಾಗಿಲಲ್ಲಿ ರಂಗೋಲಿ ಹಾಕಿ, ಅದರ ಮಧ್ಯೆ ದೀಪ ಇಟ್ಟು ಬೆಳಗಿದರು. ಸರ್ವೇ ಜನ ಸುಖೀನೋಭವಂತು, ವಸುದೈವಕುಟುಂಬಕಂ, ನಾವೆಲ್ಲರೂ ಒಂದೇ, ಒಟ್ಟಾಗಿ ಕೊರೊನಾ ವಿರುದ್ಧ ಹೋರಾಡೋಣ ಎಂಬ ಬರಹಗಳನ್ನು ಬರೆದಿದ್ದರು. ಕೆಲವು ಬಡಾವಣೆಗಳಲ್ಲಿ ಭಾರತದ ನಕ್ಷೆ ಬರೆದು, ಅದರ ಸುತ್ತಲೂ ಹಣತೆ ಇಟ್ಟು ಬೆಳಗಲಾಯಿತು. ವಾಟ್ಸ್‌ಆ್ಯಪ್‌ ಡಿಪಿಯಲ್ಲಿ, ಸ್ಟೇಟಸ್‌ನಲ್ಲಿ ಹಣತೆ ಬೆಳಗುವ ಫೋಟೊಗಳು ಮತ್ತು ದೃಶ್ಯಗಳನ್ನು ಜನ ಹಾಕಿಕೊಂಡಿದ್ದರು.

ದೀಪ ಬೆಳಗಿದ ಗಣ್ಯರು
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ, ಉಪಮುಖ್ಯಮಂತ್ರಿಗಳಾದ ಸಿ.ಎಸ್. ಅಶ್ವತ್ಥ್‌ನಾರಾಯಣ, ಗೋವಿಂದ ಕಾರಜೋಳ, ಜೆಡಿಎಸ್‌ ಶಾಸಕ ಎಚ್.ಡಿ. ರೇವಣ್ಣ ಸೇರಿದಂತೆ ಅನೇಕ ಸಚಿವರು, ಶಾಸಕರು, ಸಂಸದರು, ಮೇಯರ್, ಬಿಬಿಎಂಪಿ ಸದಸ್ಯರು ದೀಪ ಬೆಳಗಿ ಪ್ರಾರ್ಥಿಸಿದರು. ವಿವಿಧ ಮಠಗಳ ಮಠಾಧೀಶರು, ಸಿನಿ ತಾರೆಯರು ಕೂಡ ಹಣತೆ ಬೆಳಗುವ ಮೂಲಕ ದೇಶದಲ್ಲಿ ಕೊರೊನಾ ಸೋಂಕು ನಿರ್ಮೂಲನೆಯಾಗಲಿ ಎಂದು ಪ್ರಾರ್ಥಿಸಿದರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು