ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಪಾಲಿಗೆ ಅಂಟಾದ ಹಲಸು

Last Updated 26 ಮೇ 2021, 21:47 IST
ಅಕ್ಷರ ಗಾತ್ರ

ದಾಬಸ್ ಪೇಟೆ: ಲಾಕ್‌ಡೌನ್ ಪರಿಣಾಮ ಹಲಸಿನ ಹಣ್ಣಿನ ವ್ಯಾಪಾರಕ್ಕೂ ಪೆಟ್ಟು ಬಿದ್ದಿದೆ.

ಸೋಂಪುರ ಹೋಬಳಿಯ ಉದ್ದಕ್ಕೂ ಸಾವಿರಾರು ಹಲಸಿನ ಮರಳಿದ್ದು, ರೈತರಿಗೆ ಮುಂಗಾರು ಆರಂಭಕ್ಕೆ ಒಂದಷ್ಟು ಆದಾಯ ತಂದು ಕೊಡುತ್ತಿದ್ದವು. ಆದರೆ, ಕಳೆದ ಬಾರಿ ಹಾಗೂ ಈ ಬಾರಿ ಹಣ್ಣು ಬರುವ ವೇಳೆಗೆ ಲಾಕ್‌ಡೌನ್ ಆಗಿದ್ದು ಆ ಆದಾಯಕ್ಕೂ ಕುತ್ತು ತಂದಿದೆ.

’ಮನೆ ಬಾಗಿಲಿಗೆ ಬಂದು ಹಲಸಿನ ಕಾಯಿ ಕೊಳ್ಳುತ್ತಿದ್ದ ವ್ಯಾಪಾರಿಗಳು ಯಾರೊಬ್ಬರು ಮುಂದೆ ಬರುತ್ತಿಲ್ಲ. ಮರದಲ್ಲೇ ಹಣ್ಣಾಗಿ ಕೊಳೆಯುತ್ತಿವೆ. ಹಲಸಿನ ಮಾರಾಟದಿಂದ ಬರುತ್ತಿದ್ದ ಅಲ್ಪ ಆದಾಯವೂ ಇಲ್ಲದಂತಾಗಿದೆ’ ಎಂದು ಅಳಲು ತೋಡಿಕೊಂಡರು ರೈತ ಗಂಗಣ್ಣ.

ರಾಸಾಯನಿಕ ಬಾಧೆಗೆ ಒಳಗಾಗದ, ಔಷಧಗಳ ಸಿಂಪಡಣೆಯಾಗದ ಹಲಸು ಆರೋಗ್ಯಕ್ಕೆ ಹಿತಕರವೆನ್ನುವ ಗುಟ್ಟು ಗೊತ್ತಿರುವುದರಿಂದ ಹಳ್ಳಿಗಳಲ್ಲಿ ಬೆಳೆಯುವ ಹಲಸಿಗೆ ನಗರಗಳಲ್ಲಿ ಬಹುದೊಡ್ಡ ಮಾರುಕಟ್ಟೆಯಿದ್ದರೂ, ಲಾಕ್ ಡೌನ್ ಆಗಿದ್ದೇ ತಡ ಹಲಸು ಕೊಳ್ಳಲು ವ್ಯಾಪಾರಿಗಳು ಹಳ್ಳಿಗಳತ್ತ ಮುಖ ಮಾಡುತ್ತಿಲ್ಲ ಎಂದು ಅವರು ಹೇಳಿದರು.

ಏಪ್ರಿಲ್ ತಿಂಗಳ ಮಧ್ಯದಿಂದ ಹಿಡಿದು ಜುಲೈ ತಿಂಗಳ ಕೊನೆಯವರೆಗೆ ದಾಬಸ್ ಪೇಟೆಗೆ ಹೊಂದಿಕೊಂಡಂತೆ ರಾಷ್ಟೀಯ ಹೆದ್ದಾರಿ ನಾಲ್ಕರಲ್ಲಿ ಒಂದು ಕಿಲೋ ಮೀಟರ್‌ ಉದ್ದಕ್ಕೂ ಹಾಗೂ ಪಟ್ಟಣದಲ್ಲಿ ಹಲಸಿನ ಹಣ್ಣುಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದರುದೂರುದೂರುಗಳಿಂದ ಬರುತ್ತಿದ್ದ ಪ್ರಯಾಣಿಕರು ಕೊಂಡೊಯ್ಯುತ್ತಿದ್ದರು. ಈಗ ರಸ್ತೆ ಬದಿ ಬಿಕೋ ಎನ್ನುತ್ತಿದೆ.

ದಿನನಿತ್ಯ ಬಿಡುವಿಲ್ಲದೇ ಹಳ್ಳಿಗಳಲ್ಲಿರುವ ಹಲಸಿನ ತೊಳೆಗಳ ರುಚಿಯನ್ನು ದಾಬಸ್ ಪೇಟೆ ಪಟ್ಟಣದ ಮೂಲಕ ಹಾದುಹೋಗುವ ಪ್ರಯಾಣಿಕರಿಗೆ ತಲುಪಿಸುತ್ತಿದ್ದ ವ್ಯಾಪಾರಸ್ಥರು ಕೈಕಟ್ಟಿ ಕೂತಿದ್ದಾರೆ.

’ಹಲಸಿನ ಹಣ್ಣಿನ ಸೀಸನ್ ನಲ್ಲಿ ದಿನನಿತ್ಯ ಒಂದು ಸಾವಿರ ಸಂಪಾದನೆ ಮಾಡುತ್ತಿದ್ದೆವು. ಆದರೆ, ಎರಡು ವರ್ಷದಿಂದ ಅದು ಇಲ್ಲ. ಈಗ ಬದುಕಿಗೆ ಬೇರೆ ದಾರಿ ಕಂಡುಕೊಳ್ಳಬೇಕಿದೆ‘ ಎಂದು ತಿಳಿಸಿದರು ಹಲಸಿನ ತೊಳೆ ವ್ಯಾಪಾರಸ್ಥ ಗಿರೀಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT