ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರ ಕೊರತೆಯಿಂದ ಸೇವೆಯಲ್ಲಿ ವ್ಯತ್ಯಯ: ಡಾ.ಆರ್. ರವೀಂದ್ರ

ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನಿರಾಕರಣೆ
Last Updated 15 ಜುಲೈ 2020, 19:35 IST
ಅಕ್ಷರ ಗಾತ್ರ

ಬೆಂಗಳೂರು: ‘ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಪೂರ್ಣ ಪ್ರಮಾಣದಲ್ಲಿ ಸಜ್ಜಾಗದ ಕಾರಣದಿಂದ ಹಾಗೂ ಮಾನವ ಸಂಪನ್ಮೂಲ ಕೊರತೆಯಿಂದ ಕೋವಿಡ್ ಸೇವೆಯಲ್ಲಿ ವ್ಯತ್ಯಯವಾಯಿತು’ ಎಂದುಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್‍ಗಳ ಅಸೋಸಿಯೇಷನ್ (ಫಾನಾ) ಅಧ್ಯಕ್ಷ ಡಾ.ಆರ್. ರವೀಂದ್ರ ತಿಳಿಸಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವಂತೆ ಸರ್ಕಾರ ಜೂ.23ರಂದು ಸೂಚಿಸಿತು. ಆದರೆ, ನಮ್ಮ ಆಸ್ಪತ್ರೆಗಳು ಚಿಕಿತ್ಸೆಗೆ ಸೂಕ್ತ ರೀತಿಯಲ್ಲಿಸಜ್ಜಾಗಿರಲಿಲ್ಲ. ಕೆಲ ಆಸ್ಪತ್ರೆಗಳಲ್ಲಿ ಮೂಲಸೌಕರ್ಯವಿಲ್ಲ. ಇನ್ನೊಂದೆಡೆ, ಯಾರನ್ನು ದಾಖಲಿಸಿಕೊಳ್ಳಬೇಕು ಎಂಬ ಗೊಂದಲವಿತ್ತು‘ ಎಂದರು.

‘ಫಾನಾ ಅಡಿಯಲ್ಲಿ 384 ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಈ ಆಸ್ಪತ್ರೆಗಳಿಂದ ಒಟ್ಟು 10,500 ಹಾಸಿಗೆಗಳು ಇವೆ. ಕೋವಿಡ್ ರೋಗಿಗಳಿಗೆ 4,500 ಹಾಸಿಗೆಗಳನ್ನು ಮೀಸಲಿಡಲಾಗಿದೆ. 50ಕ್ಕಿಂತ ಕಡಿಮೆ ಹಾಸಿಗೆಗಳು ಇರುವ ಆಸ್ಪತ್ರೆಗಳಲ್ಲಿ ಶೇ 50ಷ್ಟು ಹಾಸಿಗೆಗಳನ್ನು ಒದಗಿಸುವುದು ಕಷ್ಟ. ಕೆಲವು ಸಣ್ಣ ಆಸ್ಪತ್ರೆಗಳನ್ನು ಪೂರ್ಣ ‍ಪ್ರಮಾಣದಲ್ಲಿ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲು ನಿರ್ಧರಿಸಿದ್ದೇವೆ‘ ಎಂದರು.

ಶೇ 30 ರಷ್ಟು ವೈದ್ಯರ ಕೊರತೆ: ‘ಖಾಸಗಿ ಆಸ್ಪತ್ರೆಗಳಲ್ಲಿ ಶೇ 30 ರಷ್ಟು ವೈದ್ಯರ ಕೊರತೆ ಇದೆ. ಇದರಿಂದಾಗಿ ಸಮರ್ಪಕವಾಗಿ ಕಾರ್ಯನಿರ್ವಹಿಸುವುದು ಸವಾಲಾಗಿದೆ. 50 ವರ್ಷದ ಮೇಲ್ಪಟ್ಟ ವೈದ್ಯರಿಗೆ ಅಪಾಯ ಇರುವುದರಿಂದ ಅವರನ್ನು ಕೋವಿಡೇತರ ಸೇವೆಗೆ ಬಳಸಿಕೊಳ್ಳಬೇಕಾಗುತ್ತದೆ. ಶೇ 50 ರಷ್ಟು ಶುಶ್ರೂಷಕರು, ಗ್ರೂಪ್ ಡಿ ಸಿಬ್ಬಂದಿ ಹಾಗೂ ಸ್ವಚ್ಛತಾ ಸಿಬ್ಬಂದಿಯ ಕೊರತೆಯಿದೆ. ಕೆಲವರು ಐಸೋಲೇಷನ್ ವಾರ್ಡ್‌ಗಳಲ್ಲಿ ಕಾರ್ಯನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಇನ್ನೂ ಕೆಲವರು ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಿದ್ದಾರೆ. ಇದರಿಂದ ಸಮಸ್ಯೆ ಆಗಿದೆ‘ ಎಂದರು.

58 ಆಸ್ಪತ್ರೆಗಳು ಬಂದ್
‘ಆರ್ಥಿಕ ಸಮಸ್ಯೆ, ಮೂಲಸೌಕರ್ಯದ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದ ನಗರದಲ್ಲಿ 58 ಸಣ್ಣ ಆಸ್ಪತ್ರೆಗಳು ಬಂದ್ ಆಗಿವೆ. 40 ಹೆರಿಗೆ ಆಸ್ಪತ್ರೆಗಳು, 20 ಕಣ್ಣಿನ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಅಲ್ಲಿ ಕೋವಿಡ್‌ ಚಿಕಿತ್ಸೆ ನೀಡಲು ಸಾಧ್ಯವಿಲ್ಲ’ ಎಂದು ಡಾ.ಆರ್. ರವೀಂದ್ರ ಮಾಹಿತಿ ನೀಡಿದರು.

‘ಕೋವಿಡೇತರ ರೋಗಿಗಳಿಗೆ ಕೂಡ ಸಮಸ್ಯೆಯಾಗದಂತೆ ಚಿಕಿತ್ಸೆ ಒದಗಿಸಬೇಕಾದ ಸವಾಲು ನಮ್ಮ ಮುಂದಿದೆ. ಯಾರು ಕೂಡ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಅಧಿಕ ಹಣವನ್ನು ಪಡೆಯಬಾರದು ಎಂದು ಸೂಚಿಸಿದ್ದೇವೆ. ಮಧುಮೇಹ, ಅಧಿಕ ರಕ್ತದೊತ್ತಡ, ಮೂತ್ರಪಿಂಡ ಸಮಸ್ಯೆ ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಹೆಚ್ಚಿನ ಚಿಕಿತ್ಸೆ ಒದಗಿಸಬೇಕಾಗುತ್ತದೆ. ಅಂಥವರಿಗೆ ಕೂಡ ಸುವರ್ಣ ಸುರಕ್ಷಾ ಟ್ರಸ್ಟ್‌ ನಿಗದಿಪಡಿಸಿದ ದರದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT