ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ಹೆಚ್ಚುತ್ತಿದೆ ಕೋವಿಡ್‌

ಗಾಳಿಯ ಮೂಲಕ, ಶೌಚಾಲಯದ ಕೊಳವೆ ಮೂಲಕ ಸೋಂಕು ಹರಡುವ ಸಾಧ್ಯತೆ
Last Updated 2 ಆಗಸ್ಟ್ 2021, 23:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಮೂರಕ್ಕಿಂತ ಹೆಚ್ಚು ಕೋವಿಡ್‌ ಪ್ರಕರಣಗಳು ಇರುವ ಒಟ್ಟು 136 ಪ್ರದೇಶಗಳನ್ನು ಕಂಟೈನ್‌ಮೆಂಟ್‌ ವಲಯಗಳೆಂದು ಗುರುತಿಸಲಾಗಿದೆ. ಇವುಗಳಲ್ಲಿ ಶೇ 25ಕ್ಕೂ ಅಧಿಕ ಕಂಟೈನ್ಮೆಂಟ್‌ ವಲಯಗಳು ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲೇ ಇವೆ.

ಬಿಬಿಎಂಪಿ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ಕೋವಿಡ್‌ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿರುವ 35 ಕಂಟೈನ್‌ಮೆಂಟ್‌ ವಲಯಗಳಲ್ಲಿ 13 ಅಪಾರ್ಟ್‌ಮೆಂಟ್‌ ಸಮುಚ್ಚಯಗಳು. ಇನ್ನುಳಿದ ಕಂಟೈನ್‌ಮೆಂಟ್‌ ವಲಯಗಳು ಬಡಾವಣೆಗಳಲ್ಲಿ, ಸೈನಿಕರ ವಸತಿಗಳಲ್ಲಿವೆ.

ನಗರದಲ್ಲಿ ಒಂದೇ ಕಡೆ ಮೂರಕ್ಕಿಂತ ಹೆಚ್ಚು ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲೇ ಹೆಚ್ಚು. ಸೋಂಕಿತರಲ್ಲಿ ಕೆಲವರು, ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ಪ್ರಯಾಣ ಬೆಳೆಸಿದ್ದರು ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

‘ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ಕೋವಿಡ್‌ ಕಾಣಿಸಿಕೊಂಡರೆ, ಅಲ್ಲಿನ ಇತರ ನಿವಾಸಿಗಳಿಗೂ ಸೋಂಕು ಪಸರಿಸುವ ಅಪಾಯವಿದೆ. ಏಕೆಂದರೆ ಇಂತಹ ಕಟ್ಟಡಗಳಲ್ಲಿ ಒಂದೇ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಜನ ವಾಸಿಸುತ್ತಾರೆ. ಕೆಲವು ಕಟ್ಟಡಗಳಲ್ಲಿ ವಾತಾಯನ ವ್ಯವಸ್ಥೆಯೂ ಸಮರ್ಪಕವಾಗಿರುವುದಿಲ್ಲ’ ಎನ್ನುತ್ತಾರೆ ತಜ್ಞರು.

ಪಶ್ಚಿಮ ವಲಯದ ನಿರ್ದಿಷ್ಟ ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ಕೆಲವೊಂದು ಘಟಕಗಳಲ್ಲಿ ಗಾಳಿಯ ಮೂಲಕವೂ ಸೋಂಕು ಹರಡಿರುವ ಶಂಕೆ ಇದೆ. ಇತರ ಬಹುಮಹಡಿ ವಸತಿಗಳಲ್ಲೂ ಇದೇ ಮಾದರಿಯಲ್ಲಿ ಸೋಂಕು ಹರಡಬಹುದು ಎಂಬ ಆತಂಕ ಇದರಿಂದ ಸೃಷ್ಟಿಯಾಗಿದೆ.

ಬೊಮ್ಮನಹಳ್ಳಿ ವಲಯದಲ್ಲಿ ಐದು ಕಡೆ ಅತಿಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ ನಾಲ್ಕು ಅಪಾರ್ಟ್‌ಮೆಂಟ್‌ ಸಮುಚ್ಚಯಗಳು. ಯಲಹಂಕ ವಲಯದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿರುವ ನಾಲ್ಕು ಕಂಟೈನ್‌ಮೆಂಟ್‌ ವಲಯಗಳಲ್ಲಿ ಎರಡು ಅಪಾರ್ಟ್‌ಮೆಂಟ್‌ ಸಮುಚ್ಚಯಗಳು ಸೇರಿವೆ. ಮಹದೇವಪುರ ವಲಯದಲ್ಲಿ ಅತಿ ಹೆಚ್ಚು ಪ್ರಕರಣಗಳಿರುವ ಐದು ಕಂಟೈನ್‌ಮೆಂಟ್‌ ವಲಯಗಳಲ್ಲಿ ಎರಡು ಅಪಾರ್ಟ್‌ಮೆಂಟ್‌ ಸಮುಚ್ಚಯಗಳು. ಆರ್‌.ಆರ್‌.ನಗರ ವಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಸೋಂಕು ಇರುವ ಐದು ಕಂಟೈನ್‌ಮೆಂಟ್‌ ವಲಯಗಳಲ್ಲಿ ಒಂದು ಅಪಾರ್ಟ್‌ಮೆಂಟ್‌ ಸಮುಚ್ಚಯ. ಪಶ್ಚಿಮ ವಲಯದಲ್ಲಿ 21 ಪ್ರಕರಣಗಳು ಒಂದೇ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಕಾಣಿಸಿಕೊಂಡಿದೆ. ಇಲ್ಲಿ ಒಟ್ಟು ನಾಲ್ಕು ಕಂಟೈನ್‌ಮೆಂಟ್‌ ವಲಯಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚು ಇದೆ.

‘ಪಶ್ಚಿಮ ವಲಯದ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರಲ್ಲಿ ಗಾಳಿಯ ಮೂಲಕ ವೈರಸ್‌ ಹರಡಿದೆ ಎನ್ನಲಾದ ಪ್ರಕರಣವನ್ನು ಹೆಚ್ಚಿನ ಅಧ್ಯಯನಕ್ಕೆ ಒಳಪಡಿಸಬೇಕಾದ ಅಗತ್ಯ ಇದೆ. ಏಕೆಂದರೆ 2003ರಲ್ಲಿ ಸಾರ್ಸ್‌–1 ವೈರಾಣು ಕಾಣಿಸಿಕೊಂಡ ಸಮಯದಿಂದಲೂ ಎಲ್ಲೂ ಇಂತಹ ಪ್ರಕರಣ ವರದಿಯಾಗಿಲ್ಲ’ ಎನ್ನುತ್ತಾರೆ ತ್ರಿವೇದಿ ಬಯೋಸೈನ್ಸ್‌ ಸ್ಕೂಲ್‌ನ ವೈರಾಣು ತಜ್ಞ ಡಾ.ಶಾಹಿದ್‌ ಜಮೀಲ್‌.

‘ಹಾಂಕ್‌ಕಾಂಗ್‌ನ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರಲ್ಲಿ ಶೌಚಾಲಯದ ಕೊಳವೆ ಮೂಲಕ ವೈರಾಣು ಹರಡಿತ್ತು. ಕೊರೋನಾ ವೈರಾಣು ಕಾಣಿಸಿಕೊಂಡ ಎಲ್ಲೂ ಗಾಳಿಯ ಮೂಲಕ ಸೋಂಕು ಹರಡಿದ ಉದಾಹರಣೆ ಇಲ್ಲ. ಬೆಂಗಳೂರಿನ ಈ ಪ್ರಕರಣ ಹೊಸತು’ ಎಂದು ಅವರು ಅಭಿಪ್ರಾಯಪಟ್ಟರು.

ಬೆಂಗಳೂರು ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ಸಂಘಟನೆಯ ಸದಸ್ಯ ವಿಕ್ರಮ್‌ ರೈ, ‘ಈ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ಗಾಳಿಯ ಮೂಲಕ ಅಥವಾ ಶೌಚಾಲಯದ ಕೊಳವೆ ಮೂಲಕ ಸೋಂಕು ಹರಡುವ ಸಾಧ್ಯತೆ ಇದೆಯೇ ಎಂಬ ಬಗ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರ ಬಳಿ ಕೋವಿಡ್‌ ಎರಡನೇ ಅಲೆ ಆರಂಭವಾದ ಸಂದರ್ಭದಲ್ಲೇ ವಿವರಣೆ ಕೇಳಿದ್ದೇವೆ. ಆದರೆ, ಅವರಿಂದ ತೃಪ್ತಿದಾಯಕ ಉತ್ತರ ಸಿಕ್ಕಿಲ್ಲ’ ಎಂದರು.

‘ಗಾಳಿಯ ಮೂಲಕ ಅಥವಾ ಶೌಚಾಲಯದ ಕೊಳವೆ ಮೂಲಕ ಸೋಂಕು ಹರಡಿರುವುದನ್ನು ಬಿಬಿಎಂಪಿ ದೃಢಪಡಿಸಿಲ್ಲ. ಒಂದು ವೇಳೆ ಶೌಚಾಲಯದ ಕೊಳವೆಗಳ ಮೂಲಕವೂ ಸೋಂಕು ಹರಡುತ್ತದೆ ಎಂದಾದರೆ ಖಂಡಿತ ಅದರಿಂದ ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ನಿವಾಸಿಗಳಿಗೆ ಅಪಾಯ ಇದೆ ಎಂದೇ ಅರ್ಥ’ ಎಂದು ಕಳವಳ ವ್ಯಕ್ತಪಡಿಸಿದರು.

'ಮಾಹಿತಿ ಮುಚ್ಚಿಡುವ ಆರ್‌ಡಬ್ಲ್ಯುಎಗಳು'

‘ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ಸೋಂಕು ವೇಗವಾಗಿ ಹರಡುತ್ತಿರುವುದನ್ನು ಪಾಲಿಕೆ ಅಧಿಕಾರಿಗಳೂ ಗಂಭೀರವಾಗಿ ಪರಿಗಣಿಸಿದ್ದಾರೆ. ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (ಆರ್‌ಡಬ್ಲ್ಯುಎ) ಕೋವಿಡ್‌ ಪತ್ತೆಯಾದ ಬಗ್ಗೆ ಪಾಲಿಕೆಗೆ ಮಾಹಿತಿ ನೀಡಲು ಹಿಂದೇಟು ಹಾಕುತ್ತವೆ. ಒಂದು ವೇಳೆ ಅವರು ಆರಂಭಿಕ ಹಂತದಲ್ಲೇ ಮಾಹಿತಿ ನಿಡದಿದ್ದರೆ ಅವರಿ‌ಗೇ ಅದು ತಿರುಗುಬಾಣವಾಗಲಿದೆ. ಸೋಂಕಿತರ ಸಂಖ್ಯೆ ಹೆಚ್ಚಳವಾದಾಗ ಅಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಿ.ರಂದೀಪ್‌ ತಿಳಿಸಿದರು.

‘ಕೆಲವು ಅಪಾರ್ಟ್‌ಮೆಂಟ್‌ ಸಮುಚ್ಚಗಳ ಆರ್‌ಡಬ್ಲ್ಯುಎಗಳು ಕೋವಿಡ್‌ ಕುರಿತು ಸರಿಯಾಗಿ ಮಾಹಿತಿ ನೀಡುತ್ತಿರಲಿಲ್ಲ. ಕೆಲವರು ಆಸ್ಪತ್ರೆಗಳಲ್ಲಿ ಗುಟ್ಟಾಗಿ ಕೋವಿಡ್‌ ಪರೀಕ್ಷೆ ನಡೆಸುತ್ತಿದ್ದರು. ಸೋಂಕು ಪತ್ತೆಯಾದರೂ ಬಿಬಿಎಂಪಿಗೆ ಮಾಹಿತಿ ನೀಡದಂತೆ ಒತ್ತಾಯಿಸುತ್ತಿದ್ದರು. ಇದನ್ನು ತಪ್ಪಿಸುವ ಸಲುವಾಗಿ ಪ್ರಯೋಗಾಲಯಗಳು ಹಾಗೂ ಆಸ್ಪತ್ರೆಗಳು ಎಲ್ಲ ಕೋವಿಡ್‌ ಪರೀಕ್ಷೆಗಳ ಫಲಿತಾಂಶದ ಬಗ್ಗೆ ಬಿಬಿಎಂಪಿಗೆ ಮಾಹಿತಿ ನೀಡುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT