ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟರಿಗೆ ಲಸಿಕೆ ನಿರಾಕರಣೆ: ಹರಿಪ್ರಸಾದ್‌ ಆರೋಪ

ಪ್ರತಿಭಟನೆ ನಡೆಸಿದ್ದರೂ ಕ್ರಮ ತೆಗೆದುಕೊಳ್ಳಲು ಹಿಂದೇಟು
Last Updated 2 ಜೂನ್ 2021, 21:33 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯ ಬಿಜೆಪಿ ಸರ್ಕಾರ ಜಾತಿ ಆಧಾರದಲ್ಲಿ ಕೋವಿಡ್‌ ಲಸಿಕೆ ಹಾಕಲು ಹೊರಟಿದೆ. ಮಲ್ಲೇಶ್ವರದ ಬಾಲಕಿಯರ ಪ್ರೌಢಶಾಲೆಯಲ್ಲಿ ಪರಿಶಿಷ್ಟರಿಗೆ ಮಂಗಳವಾರ ಲಸಿಕೆ ನಿರಾಕರಿಸಲಾಗಿದೆ’ ಎಂದು ವಿಧಾನ ಪರಿಷತ್‌ನ ಕಾಂಗ್ರೆಸ್‌ ಸದಸ್ಯ ಬಿ.ಕೆ. ಹರಿಪ್ರಸಾದ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ನಿಮಗೆ ಇಲ್ಲಿ ಲಸಿಕೆ ಹಾಕಲ್ಲ, ಬಿಬಿಎಂಪಿಗೆ ಹೋಗಿ ಎಂದು ಪರಿಶಿಷ್ಟರಿಗೆ ಹೇಳಿದ್ದಾರೆ. ಈ ಬಗ್ಗೆ ಪ್ರತಿಭಟನೆ ನಡೆಸಲಾಗಿದೆ. ಆದರೆ, ಕ್ರಮ ತೆಗೆದುಕೊಳ್ಳಲು ಪೊಲೀಸರು ಹಿಂಜರಿಯುತ್ತಿದ್ದಾರೆ’ ಎಂದರು.

‘ಸರ್ಕಾರದ ಇಂಥ ವರ್ತನೆಯ ವಿರುದ್ಧ ಬೀದಿಗಿಳಿದು ನಾವು ಪ್ರತಿಭಟನೆ ನಡೆಸುತ್ತೇವೆ. ಜೈಲಿಗೆ ಹೋಗಲು ಕೂಡಾ ಸಿದ್ಧರಿದ್ದೇವೆ. ಹಾಸಿಗೆ ಬ್ಲಾಕಿಂಗ್ ಪ್ರಕರಣದಲ್ಲಿ ಯಾರ ಮೇಲೆ ಕೇಸು ಹಾಕಿದ್ದಾರೆ. ಈಗ ಪರಿಶಿಷ್ಟರ ಬಗ್ಗೆ ಯಾರು ಧ್ವನಿ ಎತ್ತುತ್ತಾರೆ’ ಎಂದು ಪ್ರಶ್ನಿಸಿದ ಅವರು, ‘ಇದು ಉಳ್ಳವರ ಸರ್ಕಾರ’ ಎಂದು ವಾಗ್ದಾಳಿ ನಡೆಸಿದರು.

‘ಪೊಲೀಸರ ನಿಷ್ಠೆ ರಾಷ್ಟ್ರ ಧ್ವಜಕ್ಕೆ ಇರಬೇಕು, ಅವರು ಸಂವಿಧಾನಕ್ಕೆ ನಿಷ್ಠರಾಗಿರಬೇಕು, ಯಾವುದೇ ಪಕ್ಷದ ಪರವಾಗಿ ಇರಬಾರದು. ಲಸಿಕೆ ನೀಡಲು ವಾಪಸ್‌ ಕಳುಹಿಸಿದ ಬಗ್ಗೆ ಕೇಸ್ ದಾಖಲು ಮಾಡಬೇಕು’ ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ವಿರುದ್ಧವೂ ವಾಗ್ದಾಳಿ ನಡೆಸಿದ ಹರಿಪ್ರಸಾದ್‌, ‘ಮೋದಿ ಅಂದರೆ ಬ್ಯುಸಿನೆಸ್ ಎನ್ನಲಾಗುತ್ತಿತ್ತು. ಇವತ್ತು ಮೋದಿ ಅಂದರೆ ಕ್ರೈಸಿಸ್ ಎನ್ನಲಾಗುತ್ತಿದೆ.ಇವರ ಸಾಧನೆ ಹೊರಗೆ ಸಿಂಗಾರ, ಒಳಗೆ ಗೋಣಿ ಸೊಪ್ಪಿನಂತಾಗಿದೆ’
ಎಂದರು.

‘ಮುಗ್ದ ಜನರ ರಕ್ತದ ಕಣ್ಣೀರು ದೇಶದಲ್ಲಿ‌ ಹರಿದಿದೆ. ಜನರ ಸಂಕಷ್ಟಗಳಿಗೆ ಸರ್ಕಾರ ಸ್ಪಂದಿಸಬೇಕು. ಆದರೆ, ಅದ್ಯಾವುದನ್ನೂ ಮೋದಿ ಮಾಡುತ್ತಿಲ್ಲ. ಪ್ರಜಾಪ್ರಭುತ್ವದ ಮೇಲೆ ಇವರಿಗೆ ನಂಬಿಕೆಯಿಲ್ಲ. ಪ್ರಧಾನಿ ವರ್ಚಸ್ಸು ಕಾಪಾಡುವುದೇ 70 ಸಚಿವರ ಗುರಿಯಾಗಿದೆ. ಇವತ್ತು ಕೋವಿಡ್‌ ಸೋಂಕಿನಲ್ಲಿ ದೇಶ ಮೊದಲ ಸ್ಥಾನಕ್ಕೆ ಬಂದಿದೆ. ದೇಶವನ್ನು ಸಂಪೂರ್ಣ ಹಾಳು ಮಾಡಿದ ಕೀರ್ತಿ ಮೋದಿಗೆ ಸಲ್ಲುತ್ತದೆ’ ಎಂದು
ಟೀಕಿಸಿದರು.

‘ಕೇಂದ್ರ ಸರ್ಕಾರ ಎಲ್ಲರ ಜನಧನ ಖಾತೆಗೆ ತಲಾ ₹ 10 ಸಾವಿರ ಹಾಕಬೇಕು. ಕಾರ್ಮಿಕ, ಬಡವರಿಗೆ ಹಣ ಸಹಾಯ ಮಾಡಬೇಕು’ ಎಂದೂ
ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT