ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಲಸಿಕೆ: ತಾಲೀಮಿಗೆ ತಾಂತ್ರಿಕ ಸಮಸ್ಯೆ ಅಡ್ಡಿ

Last Updated 8 ಜನವರಿ 2021, 19:38 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 8 ಹಾಗೂ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ 11 ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್‌ ಲಸಿಕೆಯ ತಾಲೀಮು (ಡ್ರೈ ರನ್‌) ಶುಕ್ರವಾರ ನಡೆಯಿತು. ಕೆಲವೆಡೆ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಕಾರಣ ತಾಲೀಮಿನ ವೇಳಾಪಟ್ಟಿಯಲ್ಲಿ ವ್ಯತ್ಯಯವಾಯಿತು.

ಸಪ್ತಗಿರಿ ವೈದ್ಯಕೀಯ ಕಾಲೇಜು, ಹಲಸೂರು ರೆಫರಲ್ ಆಸ್ಪತ್ರೆ, ಕೆ.ಆರ್. ಪುರ ಸರ್ಕಾರಿ ಆಸ್ಪತ್ರೆ, ಕೆಂಗೇರಿ ಸಮುದಾಯ ಆರೋಗ್ಯ ಕೇಂದ್ರ, ಕಿಮ್ಸ್ ವೈದ್ಯಕೀಯ ಕಾಲೇಜು, ಬೆಂಗಳೂರು ವೈದ್ಯಕೀಯ ಕಾಲೇಜು, ಆಸ್ಟರ್ ಸಿಎಂಐ ಆಸ್ಪತ್ರೆ, ಸಿಂಗಸಂದ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ವಿವಿಧೆಡೆ ಲಸಿಕೆಯ ತಾಲೀಮು ನಡೆಸಲಾಯಿತು. ಬೆಳಿಗ್ಗೆ 9ರಿಂದ 11 ಗಂಟೆಯವರೆಗೆ ಬಿಬಿಎಂಪಿ ಹಾಗೂ ಆರೋಗ್ಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ವಿವಿಧ ಪ್ರಕ್ರಿಯೆಗಳನ್ನು ನಡೆಸಲಾಯಿತು. ಲಸಿಕೆಯ ಫಲಾನುಭವಿಗಳಾಗಿ ಪ್ರತಿ ಆರೋಗ್ಯ ಕೇಂದ್ರದಲ್ಲಿ ತಲಾ 25 ಆರೋಗ್ಯ ಕಾರ್ಯಕರ್ತರನ್ನು ಗುರುತಿಸಲಾಗಿತ್ತು.

ಬಹುತೇಕ ಕೇಂದ್ರಗಳಲ್ಲಿ ‘ಕೋ–ವಿನ್’ ಮಾದರಿ ಆ್ಯಪ್‌ ಸಮರ್ಪಕವಾಗಿ ಕಾರ್ಯನಿರ್ವಹಿಸಲಿಲ್ಲ. ಇದರಿಂದಾಗಿ ಆರೋಗ್ಯ ಕಾರ್ಯಕರ್ತರ ಮೊಬೈಲ್ ಸಂಖ್ಯೆಗೆ ಸಂದೇಶ ರವಾನೆಯಾಗಲಿಲ್ಲ. ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡ ಕಾರಣ ಕೆಲವೆಡೆ 9 ಗಂಟೆಗೆ ಪ್ರಾರಂಭವಾಗಬೇಕಾದ ಪ್ರಕ್ರಿಯೆ 10 ಗಂಟೆಗೆ ಪ್ರಾರಂಭವಾಯಿತು. ಪರಿಣಾಮ ಆರೋಗ್ಯ ಕಾರ್ಯಕರ್ತರು ಕೇಂದ್ರಗಳಲ್ಲಿಯೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಒಟಿಪಿ (ಒನ್ ಟೈಮ್ ಪಾಸ್‌ವರ್ಡ್) ಸಹ ಮೊಬೈಲ್ ಸಂಖ್ಯೆಗೆ ಕೆಲವರಿಗೆ ರವಾನೆಯಾಗದ ಕಾರಣ ಗೊಂದಲ ಸೃಷ್ಟಿಯಾಗಿತ್ತು.

ಸಿಬ್ಬಂದಿಗೆ ತರಬೇತಿ: ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ದಾಖಲಾತಿಗಳ ಪರಿಶೀಲನೆ, ಹೆಸರು ನೋಂದಣಿ, ಲಸಿಕೆ ವಿತರಣೆ, ಪೋರ್ಟಲ್‌ನಲ್ಲಿ ವಿವರ ನಮೂದನೆ ಸೇರಿದಂತೆ ವಿವಿಧ ಪ್ರಕ್ರಿಯೆ ಬಗ್ಗೆ ಸಿಬ್ಬಂದಿಗೆ ತಿಳಿಸಿಕೊಡಲಾಯಿತು.

‘ಕೋ–ವಿನ್ ಆ್ಯಪ್‌ನಲ್ಲಿ ಒಟಿಪಿಯನ್ನು ಒಮ್ಮೆಯೂ ಸ್ವೀಕರಿಸಲಿಲ್ಲ. ಗುರುತಿಸಲ್ಪಟ್ಟ 25 ಮಂದಿಯನ್ನು ಮಾತ್ರ ತಾಲೀಮಿಗೆ ಒಳಪಡಿಸಿದ ಕಾರಣ ಸಮಸ್ಯೆಯಾಗಲಿಲ್ಲ. ಅಧಿಕೃತವಾಗಿ ಲಸಿಕೆ ವಿತರಣೆ ಪ್ರಾರಂಭವಾದ ಬಳಿಕ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಲ್ಲಿ ಲಸಿಕೆ ‍ಪಡೆಯಲು ಬಂದವರು ಗೊಂದಲಕ್ಕೆ ಒಳಗಾಗಬೇಕಾಗುತ್ತದೆ. ಗಂಟೆಗೆಟ್ಟಲೆ ಕಾದು ತೆರಳಬೇಕಾಗುತ್ತದೆ’ ಎಂದು ಆಸ್ಟರ್ ಆಸ್ಪತ್ರೆಯ ನೋಡಲ್ ಅಧಿಕಾರಿ ಹೇಮಂತ್ ಕುಮಾರ್ ತಿಳಿಸಿದರು.

ಸಪ್ತಗಿರಿ ವೈದ್ಯಕೀಯ ಕಾಲೇಜಿನ ಸಮುದಾಯ ಔಷಧ ವಿಭಾಗದ ಮುಖ್ಯಸ್ಥ ಡಾ. ಮಹೇಶ್ವರನ್ ಆರ್., ‘ಕೋ–ವಿನ್ ಆ್ಯಪ್ ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ. ತುಂಬಾ ನಿಧಾನವಾಗಿತ್ತು. ಏಕಕಾಲದಲ್ಲಿ ದೇಶದ ಎಲ್ಲೆಡೆ ಲಾಗ್‌ ಇನ್ ಮಾಡಲು ಪ್ರಯತ್ನಿಸಿದ ಕಾರಣ ಈ ಸಮಸ್ಯೆ ಕಾಣಿಸಿಕೊಂಡಿರಬೇಕು. 25 ಆರೋಗ್ಯ ಕಾರ್ಯಕರ್ತರ ಆಧಾರ್ ಕಾರ್ಡ್‌ ಹಾಗೂ ಪ್ಯಾನ್‌ ಕಾರ್ಡ್‌ ಅನ್ನು ಪರಿಶೀಲಿಸಿ, ಪ್ರಕ್ರಿಯೆ ನಡೆಸಲಾಯಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT