ಗುರುವಾರ , ಜೂನ್ 24, 2021
25 °C
ಹಾಸಿಗೆ ಹಂಚಿಕೆ ತೇಜಸ್ವಿ ಸೂರ್ಯ ಸೂಚಿಸಿದ ಪರಿಹಾರಕ್ಕೆ ಆಕ್ಷೇಪ * ಇದರಿಂದ ಸಾವಿನ ಸಂಖ್ಯೆ ಹೆಚ್ಚಲಿದೆ– ಅಧಿಕಾರಿಗಳ ಕಳವಳ

ತುರ್ತು ಹಾಸಿಗೆ ಪಡೆಯಲು ಇನ್ನು ಸರದಿಗಾಗಿ ಕಾಯಬೇಕು!

ಪ್ರವೀಣ್‌ ಕುಮಾರ್‌ ಪಿ.ವಿ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್‌ ರೋಗಿಗಳಿಗೆ ಸರ್ಕಾರಿ ಕೋಟಾದಡಿ ಹಾಸಿಗೆ ಹಂಚಿಕೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಕೇವಲ 100 ಘಂಟೆಗಳಲ್ಲಿ ಮಹತ್ವದ ಸುಧಾರಣೆಗಳನ್ನು ತರಲಾಗಿದೆ. ಇನ್ನಷ್ಟು ಸುಧಾರಣೆಗಳು 100 ಗಂಟೆಗಳಲ್ಲಿ ಜಾರಿಯಾಗಲಿವೆ’ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.

ಆದರೆ, ಹಾಸಿಕೆ ಹಂಚಿಕೆಯ ಕೇಂದ್ರೀಕೃತ ವ್ಯವಸ್ಥೆಯ (ಸಿಎಚ್‌ಬಿಎಂಎಸ್‌) ತಂತ್ರಾಂಶ ಸುಧಾರಣೆಗಾಗಿ ಸರ್ಕಾರ ರಚಿಸಿದ್ದ ತಾಂತ್ರಿಕ ಸಲಹಾ ಸಮಿತಿಯು ಈ ಕೆಲವು ಬದಲಾವಣೆಗಳ ಕುರಿತು ಸಹಮತ ಹೊಂದಿರಲಿಲ್ಲ. ಈ ಸಮಿತಿಯಲ್ಲಿದ್ದ ಕೆಲವರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಗೊತ್ತಾಗಿದೆ. 

ಹಾಸಿಗೆ ಹಂಚಿಕೆ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡ ಸುಧಾರಣೆಗಳ ಬಗ್ಗೆ ತೇಜಸ್ವಿ ಸೂರ್ಯ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದರು. ‘ಈ ಬದಲಾವಣೆಗಳಿಂದ ಶಾಸಕರು, ಸಂಸದರು, ನ್ಯಾಯಾಧೀಶರು, ಅಧಿಕಾರಿಗಳು ಹಾಗೂ ಉದ್ಯಮಿಗಳಂತಹವರ ಪ್ರಭಾವ ಬಳಸಲಾಗದ ಸಾಮಾನ್ಯ ವ್ಯಕ್ತಿಯೂ ನೇರವಾಗಿ ಹಾಸಿಗೆ ಬುಕ್‌ ಮಾಡಬಹುದು’ ಎಂದು ಅವರು ಪ್ರತಿಪಾದಿಸಿದರು.

‘ಇನ್ನು ಹಾಸಿಗೆ ಕಾಯ್ದಿರಿಸಲು ಸರದಿ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ. ಶಾಸಕ, ಸಂಸದ, ಜಿಲ್ಲಾಧಿಕಾರಿ, ನ್ಯಾಯಾಧೀಶರು, ಉದ್ಯಮಿಗಳು ಪ್ರಭಾವ ಬೀರಿದರೆಂದು ಹಾಸಿಗೆ ಹಂಚಿಕೆ ಮಾಡಲು ಸಾಧ್ಯವಾಗದು. ಲಕ್ಷಾಂತರ ರೂಪಾಯಿ ಕೊಟ್ಟು ಹಾಸಿಗೆ ಕಾಯ್ದಿರಿಸಲು ಸಾಧ್ಯವಾಗದು. ಯಾರೇ ಹಾಸಿಗೆ ಪಡೆಯ ಬೇಕಿದ್ದರೂ ಸರದಿಗಾಗಿ ಕಾಯಬೇಕು. ಸಮಾನ್ಯ ಹಾಸಿಗೆಯಿಂದ ಎಚ್‌ಡಿಯು, ಐಸಿಯು ಅಥವಾ ವೆಂಟಿಲೇಟರ್ ಸೌಲಭ್ಯದ ಹಾಸಿಗೆಯನ್ನೂ ಸರದಿಯ ಪ್ರಕಾರವೇ ಹಂಚಿಕೆ ಮಾಡಬೇಕು. ಮನೆಯಲ್ಲೇ ಪ್ರತ್ಯೇಕವಾಸದಲ್ಲಿದ್ದು ಆರೈಕೆಗೆ ಒಳಗಾಗುವವರು ಆಸ್ಪತ್ರೆಗೆ ದಾಖಲಾಗಬೇಕಾದರೆ ವೈದ್ಯರಿಂದ ಪ್ರಮಾಣಪತ್ರ ಹಾಜರುಪಡಿಸಬೇಕಾಗುತ್ತದೆ’ ಎಂದು ತೇಜಸ್ವಿ ಸೂರ್ಯ ತಿಳಿಸಿದರು.

ಬಿಬಿಎಂಪಿ ಸೇರಿದಂತೆ ವಲಯವಾರು ಸಹಾಯವಾಣಿಗಳಿಗೆ ಕರೆ ಮಾಡುವ ರೋಗಿಗಳ ವಿವರಗಳನ್ನು ಪುಸ್ತಕದಲ್ಲಿ ದಾಖಲಿಸಲಾಗುತ್ತಿತ್ತು. ಪಾರದರ್ಶಕವಲ್ಲದ ಈ ವಿಧಾನವು ಹಲವು ಹಸ್ತಕ್ಷೇಪಗಳಿಗೆ ಕಾರಣವಾಗಿತ್ತು.ಇದನ್ನು ತಡೆಗಟ್ಟಲು  ಸಿ.ಎಚ್.ಬಿ.ಎಂ.ಎಸ್ ವೆಬ್ಬ್‌ಸೈಟ್‌ನಲ್ಲಿ ತರಲಾಗುವ ಡಿಜಿಟಲ್ ಸರದಿ ಪದ್ಧತಿ ನೆರವಾಗಲಿದೆ. ಹಾಸಿಗೆ ಹಂಚಿಕೆಯಲ್ಲಿ ಪಾರದರ್ಶಕತೆಗೆ ಕಾಯ್ದುಕೊಳ್ಳಲು ವಿವರಗಳನ್ನು ಡ್ಯಾಶ್ ಬೋರ್ಡ್ ಮೂಲಕ ಸಾರ್ವಜನಿಕವಾಗಿ ಹಂಚಿಕೊಳ್ಳಲಾಗುತ್ತದೆ’ ಎಂದರು. 

ಇನ್ನಷ್ಟು ಜೀವ ಬಲಿ?
‘ಸರದಿ ವ್ಯವಸ್ಥೆ ಜಾರಿಗೊಳಿಸುವುದಕ್ಕೆ ನಮ್ಮ ಸಹಮತ ಇರಲಿಲ್ಲ. ಯಾರಿಗೆ ತುರ್ತು ಅಗತ್ಯವಿದೆಯೋ ಅವರಿಗೆ ಆದ್ಯತೆ ಮೇರೆಗೆ ಹಾಸಿಗೆ ಹಂಚಿಕೆ ಆಗಬೇಕೇ ಹೊರತು, ಯಾರು ಮೊದಲು ಕಾಯ್ದಿರಿಸಿದರು ಎಂಬ ಆಧಾರದಲ್ಲಿ ಅಲ್ಲ. ಈ ವ್ಯವಸ್ಥೆ ಜಾರಿಯಾದರೆ, ತುರ್ತಾಗಿ ಐಸಿಯು ಅಥವ ವೆಂಟಿಲೇಟರ್‌ ಹಾಸಿಗೆ ಪಡೆಯುವುದಕ್ಕೂ ರೋಗಿಗಳು ತಮ್ಮ ಸರದಿಗಾಗಿ ಕಾಯಬೇಕಾಗುತ್ತದೆ. ತುರ್ತು ಚಿಕಿತ್ಸೆ ಅಗತ್ಯವಿದ್ದವರು ತಮ್ಮ ಸರದಿ ಬರುವಷ್ಟರಲ್ಲಿ ಜೀವ ಕಳೆದುಕೊಳ್ಳಬೇಕಾದೀತು’ ಎಂದು ಹಾಸಿಗೆ ಹಂಚಿಕೆ ವ್ಯವಸ್ಥೆ ಸುಧಾರಣೆಯ ತಾಂತ್ರಿಕ ಸಮಿತಿಯಲ್ಲಿದ್ದ ಅಧಿಕಾರಿಯೊಬ್ಬರು ಕಳವಳ ವ್ಯಕ್ತಪಡಿಸಿದರು.

‘ಸರದಿ ವ್ಯವಸ್ಥೆ ಜಾರಿಗೆ ತಂದರೆ ಆಗಲಿರುವ ಅಪಾಯದ ಬಗ್ಗೆ ನಾವು ಮನವರಿಕೆ ಮಾಡಿದರೂ ಅದಕ್ಕೆ ಕಿವಿಗೊಟ್ಟಿಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಇದಕ್ಕೆ ದನಿಗೂಡಿಸಿದ ಬಿಬಿಎಂಪಿಯ ಹಿರಿಯ ಅಧಿಕಾರಿಯಬ್ಬರು, ‘ಬಿಬಿಎಂಪಿಯನ್ನು ಹೆಚ್ಚಿನವರು ಸಂಪರ್ಕಿಸುತ್ತಿರುವುದೇ  ತುರ್ತಾಗಿ ಐಸಿಯು ಹಾಸಿಗೆಗಾಗಿ. ಐಸಿಯು ಅಥವಾ ವೆಂಟಿಲೇಟರ್‌ ಹಾಸಿಗೆಗಳು ಲಭ್ಯವಿದ್ದರೆ ತಾನೆ ಅವುಗಳನ್ನು ಹಂಚಿಕೆ ಮಾಡಲು ಸಾಧ್ಯ. ಐಸಿಯು ಹಾಗೂ ವೆಂಟಿಲೇಟರ್‌ ಹಾಸಿಗೆಗಳ ಸಂಖ್ಯೆಯನ್ನೇ ಹೆಚ್ಚಿಸದೇ ವಾರ್‌ ರೂಂನಲ್ಲಿ ಸುಧಾರಣೆ ತಂದೂ ಪ್ರಯೋಜನವಾಗದು’ ಎಂದು ಅಭಿಪ್ರಾಯಪಟ್ಟರು.

‘ಮನೆಯಲ್ಲೇ ಆರೈಕೆ ಪಡೆಯುತ್ತಿರುವ ಕೋವಿಡ್‌ ರೋಗಿಗೆ ಉಸಿರಾಟದ ಏರುಪೇರಾಗಿ ಸಮಸ್ಯೆ ಎದುರಾದಾಗ ಅವರನ್ನು ತುರ್ತಾಗಿ ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ. ಆಗ ಪ್ರಮಾಣಪತ್ರ ಪಡೆಯಲು ವೈದ್ಯರನ್ನು ಹುಡುಕುತ್ತಾ ಕೂರಲು ಸಾಧ್ಯವೇ’ ಎಂದು ಅವರು ಪ್ರಶ್ನಿಸಿದರು.

‘ಹಾಸಿಗೆ ಹಂಚಿಕೆ ಕುರಿತು ಇನ್ನು ರೋಗಿಗಳ ಕಡೆಯವರಿಗೆ ಮಾಹಿತಿ ಹೋಗುತ್ತಿರಲಿಲ್ಲ. ಆಸ್ಪತ್ರೆಗಳು ತಮಗೆ ಮಾಹಿತಿ ಬಂದಿಲ್ಲ ಎಂದು ತಗಾದೆ ತೆಗೆಯುತ್ತಿದ್ದರು. ಇನ್ನೂ ಹಾಸಿಗೆ ಹಂಚಿಕೆ ಮಾಡಿದ ತಕ್ಷಣವೇ ಈ ಮಾಹಿತಿಯ ಎಸ್.ಎಂ.ಎಸ್ ನೇರವಾಗಿ ರೋಗಿಯ ಕಡೆಯವರ ಮೊಬೈಲ್‌ಗೆ ಹಾಗೂ ಆಸ್ಪತ್ರೆಯ ನೋಡಲ್‌ ಅಧಿಕಾರಿಗೆ ರವಾನೆ ಆಗಲಿದೆ’ ಎಂದು ತೇಜಸ್ವಿ ಸೂರ್ಯ ತಿಳಿಸಿದರು. 

ಈ ವ್ಯವಸ್ಥೆಯು ಹಿಂದೆಯೂ ಇತ್ತು. ಹಾಸಿಗೆ ಹಂಚಿಕೆ ಆದ ತಕ್ಷಣವೇ ರೋಗಿಯ ಕಡೆಯವರಿಗೆ ಹಾಗೂ ಆಸ್ಪತ್ರೆಗೆ ಮಾಹಿತಿ ರವಾನೆ ಆಗುತ್ತಿತ್ತು.  

ಸುಧಾರಣಾ ಸೂತ್ರ ತಂದೊಡ್ಡುವ ಸಮಸ್ಯೆಗಳು

ಹಾಸಿಗೆ ಹಂಚಿಕೆ ವ್ಯವಸ್ಥೆಯಲ್ಲಿ ತರಲಾಗುತ್ತಿರುವ ಸುಧಾರಣೆಗಳಿಂದ ಏನೆಲ್ಲ ಸಮಸ್ಯೆಗಳು ಎದುರಾಗಲಿವೆ ಎಂಬ ವಿಶ್ಲೇಷಣೆ ಇಲ್ಲಿದೆ.

ಸುಧಾರಣೆ: ಒಬ್ಬ ರೋಗಿಗೆ ಒಮ್ಮೆ ಹಾಸಿಗೆ ಕಾಯ್ದಿರಿಸಿದ ಬಳಿಕ ಅದನ್ನು ಮ್ಯಾನುವಲ್ ಆಗಿ ಅನ್‌ಬ್ಲಾಕ್‌ ಮಾಡುವ ಪದ್ಧತಿ ಕೈಬಿಡಲಾಗಿದೆ. ಹಾಸಿಗೆ ಹಂಚಿಕೆಯಾಗಿರುವ ಬಗ್ಗೆ ನೇರವಾಗಿ ರೋಗಿಗಳಿಗೆ ಎಸ್.ಎಂ.ಎಸ್ ಮೂಲಕ ಮಾಹಿತಿ ರವಾನೆ ಆಗುವಂತೆ ಮಾಡಿದ್ದೇವೆ.

ಸಂಸದರು ನೀಡಿದ ಕಾರಣ: ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆಯಾದವರ ಹಾಗೂ ಸತ್ತವರ ಹೆಸರಿನಲ್ಲೂ ಹಾಸಿಗೆಯನ್ನು ಅಕ್ರಮವಾಗಿ ಬುಕ್‌ ಮಾಡುವುದಕ್ಕೆ ಕಡಿವಾಣ ಬೀಳಲಿದೆ.

ಆಗಲಿರುವ ಸಮಸ್ಯೆ: ಹಾಸಿಗೆ ಬುಕ್‌ ಮಾಡಿದ ತುಸು ಹೊತ್ತಿನಲ್ಲೇ ರೋಗಿ ಸತ್ತರೂ ಅಂತಹ ಹಾಸಿಗೆಯನ್ನು ಅನ್‌ಬ್ಲಾಕ್‌ ಮಾಡಿ ತುರ್ತು ಅಗತ್ಯ ಇರುವ ಬೇರೆ ರೋಗಿಗಳಿಗೆ ತಕ್ಷಣ ಹಂಚಿಕೆ ಮಾಡಲು ಸಾಧ್ಯವಿಲ್ಲ. ಒಬ್ಬರ ಜೀವ ಉಳಿಸಲು ಬಳಕೆಯಾಗಬೇಕಾದ ಐಸಿಯುವಿನಂತಹ ಹಾಸಿಗೆ ವೃಥಾ ತಾಸುಗಟ್ಟಲೆ ಖಾಲಿ ಉಳಿಯಲಿದೆ.

ಸುಧಾರಣೆ: ಹಾಸಿಗೆ ಕಾಯ್ದಿರಿಸಿದ ಬಳಿಕ 10 ಗಂಟೆ ಒಳಗೆ ರೋಗಿಯನ್ನು ಸಂಬಂಧಪಟ್ಟ ಆಸ್ಪತ್ರೆಗೆ ದಾಖಲಿಸಲಿದ್ದರೆ ಬುಕಿಂಗ್‌ ತನ್ನಿಂದ ತಾನೆ ರದ್ದಾಗುತ್ತಿತ್ತು. ಇನ್ನು ರೋಗಿ ದಾಖಲಾಗದಿದ್ದರೆ ನಾಲ್ಕೇ ಗಂಟೆಗಳಲ್ಲೇ ಹಂಚಿಕೆ ರದ್ದಾಗಲಿದೆ.

ತೇಜಸ್ವಿ ಸೂರ್ಯ ನೀಡಿದ ಕಾರಣ: 10 ಗಂಟೆ ಕಾಲಾವಕಾಶವನ್ನು ಬಳಸಿಕೊಂಡು ಕೆಲವರು ಖಾಸಗಿ ಆಸ್ಪತ್ರೆಗಳ ಜೊತೆ ವ್ಯಾಪಾರ ಕುದುರಿಸುತ್ತಿದ್ದರು. ಇದಕ್ಕೆ ಕಡಿವಾಣ ಬೀಳಲಿದೆ.

ಎದುರಾಗುವ ಸಮಸ್ಯೆ: ಸಾಮಾನ್ಯ ಹಾಸಿಗೆಯಲ್ಲಿದ್ದ ರೋಗಿಯನ್ನು ಕೆಲವೊಮ್ಮೆ ತುರ್ತಾಗಿ ಐಸಿಯುಗೆ ವರ್ಗಾಯಿಸಬೇಕಾಗುತ್ತದೆ. ಐಸಿಯು ಹಾಸಿಗೆಯನ್ನು ಬಿಬಿಎಂಪಿ ಹಂಚಿಕೆ ಮಾಡಿದರೂ, ರೋಗಿ ದಾಖಲಾಗಿದ್ದ ಆಸ್ಪತ್ರೆಯಿಂದ ಬಿಡುಗಡೆ ಪ್ರಕ್ರಿಯೆ ಪೂರ್ಣಗೊಳಿಸಲು ಸಮಯ ತಗಲುತ್ತದೆ. ರೋಗಿಯನ್ನು ಸ್ಥಳಾಂತರಿಸುವುದಕ್ಕೆ ತಕ್ಷಣಕ್ಕೆ ಆಂಬುಲೆನ್ಸ್‌ ಲಭಿಸುವುದಿಲ್ಲ. ಹಾಗಾಗಿ ನಾಲ್ಕು ತಾಸಿನ ಒಳಗೆ ರೋಗಿಯನ್ನು ಮತ್ತೊಂದು ಆಸ್ಪತ್ರೆಗೆ ದಾಖಲಿಸಲು ಸಾಧ್ಯವಾಗಲಿದ್ದರೆ ಹಂಚಿಕೆ ರದ್ದಾಗುತ್ತದೆ. ಅಂತಹ ರೋಗಿಗಳ ಜೀವವೇ ಅಪಾಯಕ್ಕೆ ಸಿಲುಕುವ ಅಪಾಯವಿದೆ. ಐಸಿಯುಗೆ ರೋಗಿಯನ್ನು ಸಾಗಿಸಲು ಆಮ್ಲಜನಕ ವ್ಯವಸ್ಥೆಯುಳ್ಳ ಆಂಬುಲೆನ್ಸ್‌ಗಳು ಬೇಕು. ತಾಸುಗಟ್ಟಲೆ ಕಾದರೂ ಇಂತಹ ಆಂಬುಲೆನ್ಸ್‌ ಲಭಿಸದ ಸ್ಥಿತಿ ನಗರದಲ್ಲಿದೆ.

ಸ್ವಾಗತಾರ್ಹ ಸುಧಾರಣೆಗಳು

* ರೋಗಿಗಳನ್ನು ದಾಖಲಿಸಿಕೊಳ್ಳುವಾಗ ಹಾಗೂ ಬಿಡುಗಡೆ ಮಾಡುವಾಗ ಆಧಾರ್ ಸಂಯೋಜಿತ ಬಯೋಮೆಟ್ರಿಕ್ ಅಥವಾ ಓಟಿಪಿ ಬಳಕೆ ವ್ಯವಸ್ಥೆ ಜಾರಿಯಾಗಲಿದೆ. ರೋಗಿ ಬಿಡುಗಡೆಯಾದ ತಕ್ಷಣ ಆ ಮಾಹಿತಿಯನ್ನು ಡ್ಯಾಶ್‌ಬೋರ್ಡ್‌ನಲ್ಲಿ ತೋರಿಸದೆ, ಆ ಹಾಸಿಗೆಯನ್ನು ಖಾಸಗಿಯಾಗಿ ದಾಖಲಾದ ರೋಗಿಗಳಿಗೆ ಆಸ್ಪತ್ರೆಯವರು ಗುಟ್ಟಾಗಿ ಬಳಸಿಕೊಳ್ಳುವುದನ್ನು ಇದು ತಡೆಯಲಿದೆ.

* ಈ ಹಿಂದೆ ವಾರ್‌ ರೂಂನ ಯಾವ ಸಿಬ್ಬಂದಿ ಯಾರಿಗೆ ಹಾಸಿಗೆ ಕಾಯ್ದಿರಿಸಿದ್ದಾರೆ ಎಂಬುದು ಯಾರಿಗೂ ತಿಳಿಯುತ್ತಿರಲಿಲ್ಲ. ಅಕ್ರಮ ನಡೆದಾಗ ಪತ್ತೆ ಹಚ್ಚುವುದು ಕಷ್ಟವಾಗುತ್ತಿತ್ತು. ಇನ್ನು ಹಾಸಿಗೆ ಬುಕ್‌ ಮಾಡಿದ ಸಿಬ್ಬಂದಿಯ ಹೆಸರು ರೋಗಿಯ ಹೆಸರಿನ ಜೊತೆ ನಮೂದಾಗಲಿದೆ.

* ರೋಗಿ ದಾಖಲಾಗಿ 15 ದಿನಗಳ ಬಳಿಕವೂ ಅದೇ ವ್ಯಕ್ತಿಯ ಹೆಸರಿನಲ್ಲೇ ಹಾಸಿಗೆ ಬಳಕೆಯಾಗುತ್ತಿದ್ದರೆ, ಮಾಹಿತಿ ಡ್ಯಾಶ್‌ಬೋರ್ಡ್‌ನಲ್ಲೇ ಕಾಣಿಸಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು