ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಕೋವಿಡ್‌ ಪರೀಕ್ಷೆಯಲ್ಲಿ 100ರಲ್ಲಿ 10 ಮಂದಿಗೆ ಸೋಂಕು

Last Updated 3 ಜುಲೈ 2020, 5:42 IST
ಅಕ್ಷರ ಗಾತ್ರ

ಬೆಂಗಳೂರು: ಹತ್ತು ದಿನಗಳಿಂದ ಈಚೆಗೆ ನಗರದಲ್ಲಿ ಕೋವಿಡ್‌ ಪರೀಕ್ಷೆಗೊಳಪಟ್ಟ ಪ್ರತಿ 100 ಮಂದಿಯಲ್ಲಿ 10 ಮಂದಿಗೆ ಸೋಂಕು ದೃಢಪಟ್ಟಿದೆ. ಇದುವರೆಗಿನ ಒಟ್ಟು ಪ್ರಕರಣಗಳಿಗೆ ಹೋಲಿಸಿದರೆ ಈ ಪ್ರಮಾಣ ಶೇ 5.33ರಷ್ಟಿದೆ.

ಲಾಕ್‌ಡೌನ್‌ ಜಾರಿಯಲ್ಲಿದ್ದ ಮೇ 31ರವರೆಗೂ ಈ ಪ್ರಮಾಣ ಶೇ 1.17ರಷ್ಟಿತ್ತು. 24 ಗಂಟೆಗಳಲ್ಲಿ ನಗರದ 15 ವಾರ್ಡ್‌ಗಳಲ್ಲಿ 10ಕ್ಕೂ ಅಧಿಕ ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ. ಪೂರ್ವ ವಲಯದ ಶಾಂತಲಾ ನಗರ ವಾರ್ಡ್‌ನಲ್ಲಿ ಅತ್ಯಧಿಕ (30) ಪ್ರಕರಣಗಳು ಪತ್ತೆಯಾಗಿವೆ. ಬೊಮ್ಮನಹಳ್ಳಿ ವಲಯದ ಸಿಂಗಸಂದ್ರ ವಾರ್ಡ್ ಎರಡನೇ ಸ್ಥಾನದಲ್ಲಿದೆ (29). ದಕ್ಷಿಣ ವಲಯದ ಜಯನಗರ ವಾರ್ಡ್‌ನಲ್ಲಿ 22 ಪ್ರಕರಣಗಳು ದೃಢಪಟ್ಟಿವೆ. ಬೊಮ್ಮನಹಳ್ಳಿ ಮತ್ತು ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್‌ಗಳಲ್ಲಿ ತಲಾ 21 ಪ್ರಕರಣಗಳು, ವಿದ್ಯಾಪೀಠ ವಾರ್ಡ್‌ನಲ್ಲಿ 20 ಪ್ರಕರಣಗಳು ಕಂಡು ಬಂದಿವೆ.

ಏಳು ದಿನಗಳಲ್ಲಿ ನಗರದಲ್ಲಿ4,388 ಸೋಂಕು ಪ್ರಕರಣಗಳು ಪತ್ತೆಯಾಗಿವೆ. ನಿತ್ಯವೂ 500ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿರುವುದರಿಂದ ಆ ಪ್ರದೇಶಗಳಲ್ಲಿ ಸೋಂಕು ನಿವಾರಕ ಸಿಂಪಡಿಸುವ ಹಾಗೂ ಸೋಂಕಿತರ ನೇರ ಸಂಪರ್ಕ ಹೊಂದಿದವರನ್ನು ಕ್ವಾರಂಟೈನ್‌ ಮಾಡುವ ಕಾರ್ಯಗಳೂ ವಿಳಂಬವಾಗುತ್ತಿವೆ. ಹಾಗಾಗಿ ಒಂದು ವಾರದಿಂದ ಕಂಟೈನ್‌ಮೆಂಟ್‌ ಪ್ರದೇಶಗಳ ವಿವರವನ್ನು ಪ್ರಕಟಿಸುವುದನ್ನು ಬಿಬಿಎಂಪಿ ವಾರ್‌ ರೂಂ ಸ್ಥಗಿತಗೊಳಿಸಿದೆ.

‘ವಿಲ್ಸನ್‌ ಗಾರ್ಡನ್‌ನ ಮನೆಯೊಂದರಲ್ಲಿ ತಾಯಿ ಮತ್ತು ಮಗುವಿಗೆ ಸೋಂಕು ಇರುವುದು ಬುಧವಾರ ದೃಢಪಟ್ಟಿದೆ. ಇನ್ನೂ ಈ ಪ್ರದೇಶಕ್ಕೆ ಸೋಂಕು ನಿವಾರಕ ಸಿಂಪಡಿಸಿಲ್ಲ. ಅವರ ಮನೆಯ ಮುಂದಿನ ರಸ್ತೆಯಲ್ಲೂ ಬ್ಯಾರಿಕೇಡ್‌ ಅಳವಡಿಸಿ ವಾಹನ ಸಂಚಾರವನ್ನೂ ನಿರ್ಬಂಧಿಸಿಲ್ಲ’ ಎಂದು ಸ್ಥಳೀಯರೊಬ್ಬರು ತಿಳಿಸಿದರು.

ಹಜ್‌ ಭವನ ಮತ್ತು ಶ್ರೀಶ್ರೀ ರವಿಶಂಕರ್‌ ಆಯುರ್ವೇದ ಆಸ್ಪತ್ರೆಯ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಸಜ್ಜುಗೊಳಿಸಿದ್ದ ಎಲ್ಲ ಹಾಸಿಗೆಗಳು ನಾಲ್ಕು ದಿನಗಳ ಹಿಂದೆಯೇ ಭರ್ತಿಯಾಗಿವೆ. ಮೂರು ದಿನಗಳಿಂದೀಚೆಗೆ 2,127 ಮಂದಿಯಲ್ಲಿ ಸೋಂಕು ಕಂಡುಬಂದಿದ್ದರೂ 164 ಮಂದಿಯನ್ನು ಮಾತ್ರ ಜಿಕೆವಿಕೆ ಪ್ರಾಂಗಣದ ಹಾಸ್ಟೆಲ್‌ನಲ್ಲಿ ಆರಂಭಿಸಿರುವ ಕೋವಿಡ್‌ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಇಲ್ಲಿ ಇನ್ನೂ 553 ಹಾಸಿಗೆಗಳು ಲಭ್ಯ ಇವೆ.

‘ಶುಕ್ರವಾರ ಸಂಜೆ ಒಳಗೆ ವಿವಿಧ ಆರೈಕೆ ಕೇಂದ್ರಗಳಲ್ಲಿ ಮತ್ತೆ 900 ಹಾಸಿಗೆಗಳ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ನಿಲಯದಲ್ಲಿ 400 ಹಾಗೂ ಕೆಂಗೇರಿಯ ಮೆಡ್‌ಸೋಲ್‌ ಆಸ್ಪತ್ರೆಯಲ್ಲಿ 200 ಹಾಸಿಗೆಗಳ ವ್ಯವಸ್ಥೆ ಶನಿವಾರದೊಳಗೆ ಸಿದ್ಧವಾಗಲಿದೆ’ ಎಂದು ಆರೈಕೆ ಕೇಂದ್ರಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ರಾಜೇಂದರ್‌ ಕುಮಾರ್‌ ಕಟಾರಿಯಾ ಮಾಹಿತಿ ನೀಡಿದರು.

ರೋಗಿಯನ್ನು ದಾಖಲಿಸಿಕೊಳ್ಳದ ಆಸ್ಪತ್ರೆಗಳ ವಿರುದ್ಧ ಎಫ್‌ಐಆರ್‌

‘ಮೂರು ದಿನಗಳ ಹಿಂದೆ ಕೋವಿಡ್‌ ರೋಗಿಯೊಬ್ಬರನ್ನು ದಾಖಲಿಸಿಕೊಳ್ಳಲು ನಗರದ ವಿವಿಧ ಆಸ್ಪತ್ರೆಗಳು ನಿರಾಕರಿಸಿದ್ದವು. ಇಂತಹ ಒಂಬತ್ತು ಆಸ್ಪತ್ರೆಗಳನ್ನು ಗುರುತಿಸಿ ಅವುಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲು ಕ್ರಮಕೈಗೊಂಡಿದ್ದೇವೆ’ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ತಿಳಿಸಿದರು.

ಮಾಗಡಿ ರಸ್ತೆ ಬಳಿಯ ನಿವಾಸಿ ಟೈಲರ್‌ ಒಬ್ಬರಿಗೆ ಸೋಂಕು ದೃಢಪಟ್ಟು ಮೂರು ದಿನಗಳು ಕಳೆದರೂ ಅವರನ್ನು ಕೋವಿಡ್‌ ಆಸ್ಪತ್ರೆಗೆ ದಾಖಲಿಸಿರಲಿಲ್ಲ. ಬಿಬಿಎಂಪಿಯಿಂದ ಆಂಬ್ಯುಲೆನ್ಸ್‌ ಬರಬಹುದು ಎಂದು ಕಾದಿದ್ದ ಅವರ ಕುಟುಂಬಸ್ಥರು ಕೊನೆಗೆ ಖಾಸಗಿ ಆಂಬುಲೆನ್ಸ್‌ನಲ್ಲಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು. ‘ಈ ವಿಚಾರ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ’ ಎಂದು ಆಯುಕ್ತರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT