ಶನಿವಾರ, ಜೂನ್ 12, 2021
24 °C
10 ದಿನಕ್ಕಿಂತ ಹೆಚ್ಚಿನ ಅವಧಿಗೆ ಆಸ್ಪತ್ರೆಯಲ್ಲಿರುವ ವಿಚಾರದಲ್ಲಿ ಗೊಂದಲ ಸೃಷ್ಟಿ

ಕೋವಿಡ್‌: ಆಸ್ಪತ್ರೆ–ಬಿಬಿಎಂಪಿಗೆ ಅಲೆದಾಡುವ ಸಮಸ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಬಿಎಂಪಿ–ಸಾಂದರ್ಭಿಕ ಚಿತ್ರ

ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಅನಗತ್ಯವಾಗಿ ನಿಗದಿಗಿಂತ ಹೆಚ್ಚು ದಿನ ಇರುತ್ತಿದ್ದ ರೋಗಿಗಳನ್ನು ನಿಯಂತ್ರಿಸುವ ಉದ್ದೇಶದಿಂದ ಬಿಬಿಎಂಪಿ ನೀಡಿದ್ದ ಆದೇಶಕ್ಕೆ ಖಾಸಗಿ ಆಸ್ಪತ್ರೆಗಳು ಭಿನ್ನ ಮಾರ್ಗ ಕಂಡುಕೊಂಡಿರುವುದರಿಂದ ರೋಗಿಗಳ ಸಂಬಂಧಿಕರು ಪರದಾಡಬೇಕಾಗಿದೆ.

ಕೊರೊನಾ ಸೋಂಕು ದೃಢಪಟ್ಟು ಆಸ್ಪತ್ರೆಗೆ ದಾಖಲಾಗುವ ವ್ಯಕ್ತಿಗೆ 10 ದಿನಗಳಿಗಿಂತ ಹೆಚ್ಚಿನ ಚಿಕಿತ್ಸೆ ಅವಶ್ಯಕ ಎಂದು ಕಂಡುಬಂದರೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಪೋರ್ಟಲ್‍ಗೆ ಅಥವಾ ಪಾಲಿಕೆಗೆ ಆಯಾ ಆಸ್ಪತ್ರೆಯಿಂದ ಅರ್ಜಿ ಸಲ್ಲಿಸಬೇಕು ಎನ್ನುವ ನಿಯಮವನ್ನು ಬಿಬಿಎಂಪಿ ರೂಪಿಸಿತ್ತು.

ಕೆಲವು ಖಾಸಗಿ ಆಸ್ಪತ್ರೆಗಳು 20 ದಿನವಾದರೂ ಕೊರೊನಾ ಸೋಂಕಿತರ ಗುಣಮುಖ ವಿವರ ಅಥವಾ ಬಿಡುಗಡೆಯ ಮಾಹಿತಿ ನೀಡದೆ ಇರುವುದು ಹಾಗೂ ನಿರ್ದಿಷ್ಟ ವ್ಯಕ್ತಿ ಗುಣಮುಖರಾದರೂ ಹಾಸಿಗೆ ಖಾಲಿ ಆಗಿರುವ ಬಗ್ಗೆ ವಿವರ ನೀಡದೆ ಇರುವ ಬಗ್ಗೆ ದೂರುಗಳು ಕೇಳಿ ಬಂದಿದ್ದರಿಂದ ಬಿಬಿಎಂಪಿ ಈ ಕ್ರಮ ಕೈಗೊಂಡಿತ್ತು.

ಆದರೆ, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ನೀವೇ ಬಿಬಿಎಂಪಿಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಿರಿ ಎಂದು ಕೆಲವು ಖಾಸಗಿ ಆಸ್ಪತ್ರೆಗಳು ರೋಗಿಗಳ ಕಡೆಯವರಿಗೆ ಹೇಳುತ್ತಿರುವುದರಿಂದ ಸಮಸ್ಯೆಯಾಗಿದೆ.

ಪೋರ್ಟಲ್ ಮೂಲಕ ಸಲ್ಲಿಸಬಹುದಾದ ಅರ್ಜಿಯನ್ನು ಭೌತಿಕವಾಗಿ ನೀಡಿ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಅಥವಾ ಪಾಲಿಕೆಯಿಂದ ಅನುಮತಿ ಪಡೆದುಕೊಂಡು ಬರುವಂತೆ ಕೆಲವು ಖಾಸಗಿ ಆಸ್ಪತ್ರೆಗಳು ಒತ್ತಾಯಿಸುತ್ತಿವೆ ಎಂದು ರೋಗಿಯ ಸಂಬಂಧಿಕರೊಬ್ಬರು ಹೇಳಿದರು. 

ಈ ಸಂಬಂಧ ಪ್ರತಿಕ್ರಿಯಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ’ಕೋವಿಡ್‌ ದೃಢಪಟ್ಟು 10 ದಿನ ಆಸ್ಪತ್ರೆಯಲ್ಲಿದ್ದ ಯಾರಿಗಾದರೂ ಆರೋಗ್ಯ ಸುಧಾರಿಸದೆ ಹೆಚ್ಚಿನ ಆರೋಗ್ಯ ಸೇವೆ ಅವಶ್ಯಕತೆ ಇದ್ದರೆ, ಆಯಾ ಆಸ್ಪತ್ರೆಯ ಆಡಳಿತ ಮಂಡಳಿಯಿಂದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಪೋರ್ಟಲ್‍ಗೆ ಅಥವಾ ಪಾಲಿಕೆಗೆ ಅರ್ಜಿ ಸಲ್ಲಿಸಬೇಕು. ಇದರಲ್ಲಿ ಕೊರೊನಾ ಸೋಂಕಿತರ ಕುಟುಂಬದವರ ಯಾವುದೇ ಪಾತ್ರ ಇರುವುದಿಲ್ಲ‘ ಎಂದು ಸ್ಪಷ್ಟಪಡಿಸಿದರು.

’ನಿರ್ದಿಷ್ಟ ವ್ಯಕ್ತಿಯ ಆರೋಗ್ಯ ಪರಿಸ್ಥಿತಿ ಆಧಾರದ ಮೇಲೆ ಯಾವುದೇ ಆಸ್ಪತ್ರೆಯು ಅರ್ಜಿ ಸಲ್ಲಿಸಬಹುದು. ಈ ವಿಚಾರದಲ್ಲಿ ಅನವಶ್ಯಕ ಗೊಂದಲ ಸೃಷ್ಟಿ ಮಾಡುವ ಅವಶ್ಯಕತೆ ಇಲ್ಲ‘ ಎಂದರು. 

’ಕೊರೊನಾ ಸೋಂಕಿತರ ಕುಟುಂಬದವರಿಗೆ ಕಿರುಕುಳ ನೀಡುವುದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು‘ ಎಂದೂ ಅವರು ಎಚ್ಚರಿಕೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು