ಗುರುವಾರ , ಮೇ 6, 2021
22 °C
ಆಸ್ಪತ್ರೆಗಳಿಗೆ ಅಲೆದಾಟ ನಡೆಸಲಾರಂಭಿಸಿದ ಕೋವಿಡ್ ಪೀಡಿತರು

ಖಾಸಗಿ ಆಸ್ಪತ್ರೆ: ಮುಂದುವರಿದ ಆಮ್ಲಜನಕದ ಅಭಾವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕದ (ಆಕ್ಸಿಜನ್) ಕೊರತೆ ಮುಂದುವರಿದಿದ್ದು, ಕೋವಿಡ್‌ ಪೀಡಿತರು ಆಮ್ಲಜನಕ ಸಹಿತ ಹಾಸಿಗೆಗಾಗಿ ಭಾನುವಾರ ಕೂಡ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ ನಡೆಸಿದರು. 

ಸರ್ಕಾರಿ ಆಸ್ಪತ್ರೆಗಳಲ್ಲಿ ಬಹುತೇಕ ಹಾಸಿಗೆಗಳು ಭರ್ತಿಯಾಗಿರುವ ಕಾರಣ ನೇರವಾಗಿ ಖಾಸಗಿ ಆಸ್ಪತ್ರೆಗೆ ತೆರಳುವವರ ಸಂಖ್ಯೆ ಕೂಡ ಏರಿಕೆಯಾಗಿದೆ. ಅದೇ ರೀತಿ, ಸರ್ಕಾರಿ ಆಸ್ಪತ್ರೆಗಳು ಆಮ್ಲಜನಕ ಸಂಪರ್ಕ ಸಹಿತ ಹಾಸಿಗೆಯಿಲ್ಲ ಎಂಬ ಕಾರಣ ನೀಡಿ, ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾರಂಭಿಸಿವೆ. ಸದ್ಯ ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1 ಲಕ್ಷದ ಗಡಿ (97,897) ಸಮೀಪಿಸಿದೆ. ಅದೇ ರೀತಿ, ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾಗುವವರ ಸಂಖ್ಯೆ ಕೂಡ ಏರಿಕೆ ಕಂಡಿದೆ. ಸದ್ಯ 134 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 

ಖಾಸಗಿ ಆಸ್ಪತ್ರೆಗಳು ಸರ್ಕರಿ ಆಸ್ಪತ್ರೆಗಳು ಶಿಫಾರಸು ಮಾಡುವ ಸೋಂಕಿತರಿಗಾಗಿ ಮೀಸಲಿಟ್ಟಿದ್ದ 1,749 ಹಾಸಿಗೆಗಳಲ್ಲಿ 1,239 ಹಾಸಿಗೆಗಳು ಭರ್ತಿಯಾಗಿವೆ. ಸದ್ಯ 510 ಹಾಸಿಗೆಗಳು ಮಾತ್ರ ಖಾಲಿಯಿವೆ. ಅದೇ ರೀತಿ, ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ 2,084 ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅಲ್ಲಿ 1,135 ಹಾಸಿಗೆಗಳು ಖಾಲಿಯಿವೆ. ಈಗ ಆಕ್ಸಿಜನ್‌ ಕೊರತೆ ಉದ್ಭವವಾದ ಕಾರಣ ಕೆಲ ಖಾಸಗಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳು ಸೋಂಕಿತರನ್ನು ದಾಖಲಿಸಿಕೊಳ್ಳಲು ಹಿಂದೇಟು ಹಾಕಲಾರಂಭಿಸಿವೆ. ಇನ್ನೂ ಕೆಲವರು ಆಸ್ಪತ್ರೆಗಳು ಅಗತ್ಯತೆಗೆ ಅನುಸಾರ ಆಮ್ಲಜನಕ ಪೂರೈಕೆಯಾಗದ ಕಾರಣ ರೋಗಿಗಳನ್ನು ಸ್ಥಳಾಂತರಿಸಲು ಮುಂದಾಗುತ್ತಿವೆ.

ಪೂರೈಕೆಯಾಗದಿದ್ದಲ್ಲಿ ಸಮಸ್ಯೆ

‘ಆಮ್ಲಜನಕ ಪೂರೈಕೆ ಒಂದು ದಿನದ ಕಾರ್ಯಕ್ರಮವಲ್ಲ. ಪ್ರತಿನಿತ್ಯ ಅಗತ್ಯ ಪ್ರಮಾಣದಲ್ಲಿ ದೊರೆಯದಿದ್ದಲ್ಲಿ ರೋಗಿಗಳಿಗೆ ಸಮಸ್ಯೆಯಾಗಲಿದೆ. ಭಾನುವಾರ ಪೂರೈಕೆ ಆಗಿರುವ ಆಮ್ಲಜನಕವು ಸೋಮವಾರ ಮಧ್ಯಾಹ್ನದವರೆಗೆ ಸಾಕಾಗಲಿದೆ. ಮತ್ತೆ ಪೂರೈಕೆಯಲ್ಲಿ ವ್ಯತ್ಯಾಸವಾದಲ್ಲಿ ಚಿಕಿತ್ಸೆ ಒದಗಿಸುವುದು ಕಷ್ಟವಾಗಲಿದೆ. ದೊಡ್ಡ ಗಾತ್ರದ 8–10 ಆಸ್ಪತ್ರೆಗಳು ಮಾತ್ರ ಆಕ್ಸಿಜನ್ ಘಟಕ ಹೊಂದಿವೆ. ಉಳಿದವು ದೈನಂದಿನ ಪೂರೈಕೆಯನ್ನೇ ಅವಲಂಬಿಸಿವೆ. ಎಲ್ಲ ಖಾಸಗಿ ಆಸ್ಪತ್ರೆಗಳೂ ಪೂರೈಕೆದಾರರಿಗೆ ಹಣ ಪಾವತಿಸಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಆಸ್ಪತ್ರೆ ಪೂರೈಕೆದಾರರಿಗೆ ಬಾಕಿ ಇರಿಸಿಕೊಳ್ಳುವುದಿಲ್ಲ’ ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (ಫಾನಾ) ಅಧ್ಯಕ್ಷ ಡಾ. ಪ್ರಸನ್ನ ಎಚ್‌.ಎಂ. ತಿಳಿಸಿದರು.

‘ಕೋವಿಡ್ ಪೀಡಿತರ ಸಂಖ್ಯೇ ವೇಗವಾಗಿ ಹೆಚ್ಚಳವಾಗುತ್ತಿದೆ. ಇದರಿಂದಾಗಿ ಐಸಿಯು ದಾಖಲಾತಿ ಕೂಡ ಹೆಚ್ಚಳವಾಗಿದೆ. ಈಗಾಗಲೇ ಆಕ್ಸಿಜನ್ ಸಮಸ್ಯೆಯಿಂದ ಹಾಗೂ ಐಸಿಯು ಹಾಸಿಗೆ ಸಿಗದೆ ಕೋವಿಡ್ ಪೀಡಿತರ ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರವು ಅಗತ್ಯ ಪ್ರಮಾಣದಲ್ಲಿ ಆಕ್ಸಿಜನ್ ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು’ ಎಂದು ಹೆಬ್ಬಾಳದ ರೈನ್ ಬೋ ಮಕ್ಕಳ ಆಸ್ಪತ್ರೆಯ ಡಾ. ಶ್ರೀಧರ್ ಎಂ.ಎಸ್. ಆಗ್ರಹಿಸಿದ್ದಾರೆ.

‘ಸರ್ಕಾರಿ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆಯಿಲ್ಲ. ಖಾಸಗಿ ಆಸ್ಪತ್ರೆಗಳು ಅಗತ್ಯಕ್ಕೆ ಅನುಗುಣವಾಗಿ ಆಕ್ಸಿಜನ್ ಸಿಲಿಂಡರ್‌ಗಳನ್ನು ಇರಿಸಿಕೊಂಡಿಲ್ಲ. ಸರ್ಕಾರದಿಂದ ಆಕ್ಸಿಜನ್ ಪೂರೈಕೆ ಮಾಡುವ ಪ್ರಸ್ತಾಪವಿಲ್ಲ‘ ಎಂದು ಬೆಂಗಳೂರು ನಗರ ಜಿಲ್ಲೆ ಆರೋಗ್ಯಾಧಿಕಾರಿ ಡಾ.ಜಿ. ಶ್ರೀನಿವಾಸ್ ತಿಳಿಸಿದರು.

‘ಆರೋಗ್ಯ ಕ್ಷೇತ್ರದಲ್ಲಿ ತುರ್ತು ಪರಿಸ್ಥಿತಿ’

‘ಬೇಡಿಕೆಗೆ ಅನುಸಾರ ಆಮ್ಲಜನಕ ಪೂರೈಕೆ ಆಗುತ್ತಿಲ್ಲ. ಇದರಿಂದಾಗಿ ಚಿಕಿತ್ಸೆ ಒದಗಿಸುವುದು ಹೇಗೆ ಎಂಬ ಆತಂಕ ಶುರುವಾಗಿದೆ. ಸಮಯಕ್ಕೆ ಸರಿಯಾಗಿ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆಯಾಗದಿದ್ದಲ್ಲಿ ರೋಗಿಗಳಿಗೆ ಸಮಸ್ಯೆಯಾಗಲಿದೆ. ಈ ಸಂದರ್ಭದಲ್ಲಿ ಆಸ್ಪತ್ರೆಗಳು ಪೂರೈಕೆದಾರರಿಗೆ ಪಾವತಿಸಬೇಕಾದ ಮೊತ್ತವನ್ನು ಬಾಕಿ ಇರಿಸಿಕೊಳ್ಳುವುದಿಲ್ಲ. ನಾವು ಸಮಯಕ್ಕೆ ಸರಿಯಾಗಿ ಪೂರೈಕೆದಾರರಿಗೆ ಹಣ ಪಾವತಿಸಿದ್ದೇವೆ. ಆದರೆ, ನಮಗೆ ಕೊರತೆ ಎದುರಾಗಿದೆ. ಆಮ್ಲಜನಕ ಬಳಕೆಯು ಮೂರುಪಟ್ಟು ಜಾಸ್ತಿಯಾಗಿದೆ. ನಮಗೆ ದಿನಕ್ಕೆ 4 ಸಿಲಿಂಡರ್ ಬೇಕಾಗಿತ್ತು. ಆದರೆ, ಈಗ 11 ಸಿಲಿಂಡರ್ ಬೇಕಾಗುತ್ತಿದೆ’ ಎಂದು ಸುಗುಣ ಆಸ್ಪತ್ರೆಯ ಮುಖ್ಯಸ್ಥ ಡಾ.ಆರ್‌. ರವೀಂದ್ರ ತಿಳಿಸಿದರು.

‘ಸಣ್ಣ ಆಸ್ಪತ್ರೆಗಳಿಗೆ ಆಮ್ಲಜನಕದ ಸಮಸ್ಯೆ ಎದುರಾಗಿದೆ. ಇದರಿಂದಾಗಿ ಚಿಕಿತ್ಸೆ ಒದಗಿಸಲು ಅವರಿಗೆ ಸಮಸ್ಯೆಯಾಗುತ್ತಿದೆ. ನಮ್ಮ ಆಸ್ಪತ್ರೆಯಲ್ಲಿ ಆಮ್ಲಜನಕ ಘಟಕ ಹೊಂದಿದ್ದ ಕಾರಣ ಸದ್ಯಕ್ಕೆ ಕೊರತೆ ಕಾಣಿಸಿಲ್ಲ’ ಎಂದು ಜಯನಗರದ ಅಪೋಲೊ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಗೋವಿಂದಯ್ಯ ಯತೀಶ್ ಹೇಳಿದರು.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು