ಮಂಗಳವಾರ, ಮಾರ್ಚ್ 21, 2023
25 °C
ನಗರದಲ್ಲಿ ಮುನ್ನೆಚ್ಚರಿಕೆ ಡೋಸ್‌ಗೆ ಮತ್ತೆ ಬೇಡಿಕೆ ಕುಸಿತ

ಬೆಂಗಳೂರು: ಲಸಿಕೆ ಕಾಯ್ದಿರಿಸುವವರ ಸಂಖ್ಯೆ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆ ಹಾಗೂ ರೂಪಾಂತರಿ ವೈರಾಣು ಬಗೆಗಿನ ಕಳವಳ ದೂರವಾಗಿರುವುದರಿಂದ ಲಸಿಕೆಯ ಮುನ್ನೆಚ್ಚರಿಕೆ ಡೋಸ್‌ಗೆ ಮತ್ತೆ ಬೇಡಿಕೆ ಕುಸಿದಿದೆ. ಕೋವಿನ್ ಪೋರ್ಟಲ್‌ ಮೂಲಕ ಲಸಿಕೆ ಕಾಯ್ದಿರಿಸುವವರ ಸಂಖ್ಯೆ ಇಳಿಕೆ ಕಂಡಿದೆ. 

ಚೀನಾ ಸೇರಿ ಕೆಲವೆಡೆ ಕೋವಿಡ್ ಪ್ರಕರಣಗಳ ಹೆಚ್ಚಳ ಹಾಗೂ ಇಲ್ಲಿಯೂ ರೂಪಾಂತರಿ ವೈರಾಣು ಕಾಣಿಸಿಕೊಳ್ಳುವ ಬಗ್ಗೆ ವೈದ್ಯಕೀಯ ತಜ್ಞರ ಕಳವಳದಿಂದ ಕಳೆದ ತಿಂಗಳು ಮುನ್ನೆಚ್ಚರಿಕೆ ಡೋಸ್‌ಗೆ ಬೇಡಿಕೆ ಹೆಚ್ಚಿತ್ತು. ಕೋವಿಶೀಲ್ಡ್‌ ಲಸಿಕೆಯ ದಾಸ್ತಾನು ಖಾಲಿಯಾಗಿ, ಕೆಲವರು ಕೋವಿಲ್ ಪೋರ್ಟಲ್‌ನಲ್ಲಿ ಕಾಯ್ದಿರಿಸಿದ್ದರೂ ಲಸಿಕೆ ದೊರೆತಿರಲಿಲ್ಲ. ಈಗ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿ, 150ರ ಗಡಿಯೊಳಗೆ ಇದೆ. ಇದರಿಂದಾಗಿ ಲಸಿಕೆಯ ಮುನ್ನೆಚ್ಚರಿಕೆ ಡೋಸ್‌ಗೆ ಬೇಡಿಕೆ ತಗ್ಗಿದ್ದು, ಕೋವಿನ್ ಪೋರ್ಟಲ್‌ನಲ್ಲಿ ಖಾಸಗಿ ಆಸ್ಪತ್ರೆಗಳು ನಿಗದಿಪಡಿಸಿದ ಬಹುತೇಕ ಸ್ಲಾಟ್‌ಗಳು ಖಾಲಿ ಉಳಿದಿವೆ. 

ಬಿಬಿಎಂಪಿ ವ್ಯಾಪ್ತಿಯಲ್ಲಿ 95.07 ಲಕ್ಷ ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 14.79 ಲಕ್ಷ ಮಂದಿ ಮುನ್ನೆಚ್ಚರಿಕೆ ಡೋಸ್ ಹಾಕಿಸಿಕೊಂಡಿದ್ದಾರೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ 14.86 ಲಕ್ಷ ಮಂದಿ ಎರಡನೇ ಡೋಸ್ ಹಾಗೂ 3.39 ಲಕ್ಷ ಮಂದಿ ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆದಿದ್ದಾರೆ. 

ಕೇಂದ್ರಗಳು ಸ್ಥಗಿತ: ಸದ್ಯ 173 ಸರ್ಕಾರಿ ಕೇಂದ್ರಗಳು ಹಾಗೂ 31 ಖಾಸಗಿ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಕಳೆದ ತಿಂಗಳು 50ಕ್ಕೂ ಅಧಿಕ ಖಾಸಗಿ ಕೇಂದ್ರಗಳು ಮುನ್ನೆಚ್ಚರಿಕೆ ಡೋಸ್ ಲಸಿಕೆ ವಿತರಿಸುತ್ತಿದ್ದವು. ಲಸಿಕೆಗೆ ಈಗ ಬೇಡಿಕೆ ಕಡಿಮೆಯಾಗಿರುವುದರಿಂದ 20ಕ್ಕೂ ಅಧಿಕ ಕೇಂದ್ರಗಳು ಲಸಿಕೆ ವಿತರಣೆಯನ್ನು ಸ್ಥಗಿತಗೊಳಿಸವೆ. 

ಕೋವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್ ಲಸಿಕೆಯ ಮುನ್ನೆಚ್ಚರಿಕೆ ಡೋಸ್‌ಗಳನ್ನು ಲಸಿಕೆ ತಯಾರಿಕಾ ಕಂಪನಿಗಳು ₹ 225ಕ್ಕೆ ಖಾಸಗಿ ಆಸ್ಪತ್ರೆಗಳಿಗೆ ಒದಗಿಸುತ್ತಿವೆ. ಸೇವಾ ಶುಲ್ಕ ಸಹಿತ ಒಂದು ಡೋಸ್‌ ಲಸಿಕೆಗೆ ಆಸ್ಪತ್ರೆಗಳು ₹ 386 ಪಡೆಯುತ್ತಿವೆ. 

ಪ್ರಕ್ರಿಯಾ ಆಸ್ಪತ್ರೆ, ಅಪೋಲೊ ಕ್ಲಿನಿಕ್, ನಾರಾಯಣ ಹೃದಯಾಲಯ, ಕೊಲಂಬಿಯಾ ಏಷ್ಯಾ ಆಸ್ಪತ್ರೆ, ಸುಗುಣಾ, ಮಣಿಪಾಲ್, ಫೋರ್ಟಿಸ್ ಸೇರಿ ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿ ಮುನ್ನೆಚ್ಚರಿಕೆ ಡೋಸ್‌ ಕಾಯ್ದಿರಿಸುವಿಕೆಗೆ ನಿಗದಿಪಡಿಸಲಾದ ಸ್ಲಾಟ್‌ಗಳಲ್ಲಿ ಹೆಚ್ಚಿನ ಸ್ಲಾಟ್‌ಗಳು ಖಾಲಿ ಉಳಿದಿವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು