ಶುಕ್ರವಾರ, ಜೂನ್ 25, 2021
30 °C
ಕೋವಿಡ್ ಗೆದ್ದು ಬಂದ 53 ವರ್ಷದ ನರ್ಸ್‌ ಪ್ರೇಮಲತಾ

‘ಸಕಾರಾತ್ಮಕ ಆಲೋಚನೆಯೇ ಕೊರೊನಾಗೆ ಮೊದಲ ಮದ್ದು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಸ್. ಪ್ರೇಮಲತಾ

ಬೆಂಗಳೂರು: ‘ರೋಗಿಗಳಿಗೆ ಆರೈಕೆ ಮಾಡುವ ವೇಳೆ ಅವರ ನಕಾರಾತ್ಮಕ ವಿಷಯಗಳನ್ನು ಹೊಡೆದೊಡಿಸಲು ಪ್ರಯತ್ನಿಸಿ, ಆತ್ಮಸ್ಥೈರ್ಯ ತುಂಬುತ್ತೇವೆ. ಆದರೆ, ಕೋವಿಡ್‌ ಕಾಯಿಲೆ ನನಗೂ ಬಂದಿದೆ ಎಂಬುದು ತಿಳಿದಾಗ ಭಯ ಆದದ್ದು ನಿಜ. ನಾನು ಆಸ್ಪತ್ರೆಯಲ್ಲಿ ಚಿಂತೆ ಮಾಡುತ್ತಾ ಸಮಯ ಕಳೆದಿದ್ದರೆ ಇಷ್ಟು ಬೇಗ ಗುಣಮುಖಳಾಗಿ, ಪುನಃ ಸೇವೆಗೆ ಹಾಜರಾಗಲು ಸಾಧ್ಯವಾಗುತ್ತಿರಲಿಲ್ಲ’.

ಇದು ಕೋವಿಡ್ ಜಯಿಸಿ ಬಂದ ಎಚ್. ಸಿದ್ದಯ್ಯ ರೆಫರಲ್ ಆಸ್ಪತ್ರೆಯ 53 ವರ್ಷದ ನರ್ಸ್‌ ಎಸ್. ಪ್ರೇಮಲತಾ ಅವರ ಅನುಭವದ ಮಾತುಗಳು. ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರಿಗೆ ಆರೈಕೆ ಮಾಡುವ ವೇಳೆ ಅವರಿಗೆ ಸೋಂಕು ಹರಡಿತ್ತು. ಜಯನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ 10 ದಿನಗಳು ಚಿಕಿತ್ಸೆ ಪಡೆದು ಪುನಃ ಸೇವೆಗೆ ಹಾಜರಾಗಿದ್ದಾರೆ. ಸೋಂಕಿತರಾದಾಗ ಉಸಿರಾಟದ ಸಮಸ್ಯೆ ಸಹ ಅವರಿಗೆ ಕಾಣಿಸಿಕೊಂಡಿತ್ತು. ನ್ಯೂಮೋನಿಯಾ ದಿಂದ ಬಳಲಿದ ಅವರಿಗೆ, ಮಧುಮೇಹ ಸಮಸ್ಯೆ ಕೂಡ ಇತ್ತು. ಆಸ್ಪತ್ರೆಗೆ ದಾಖಲಾದ ಎರಡೇದಿನಗಳಲ್ಲಿ ಚೇತರಿಸಿಕೊಂಡು, ಉಳಿದ ಸೋಂಕಿತರಿಗೆ ಧೈರ್ಯ ತುಂಬಿದ್ದಾರೆ. 

‘ಜೂ. 22ರಂದು ಜ್ವರದ ಲಕ್ಷಣಗಳು ಕಾಣಿಸಿಕೊಂಡಿತು. ಬಳಿಕ ಉಸಿರಾಟದ ಸಮಸ್ಯೆ ಶುರುವಾಯಿತು. ಜೂ.25 ರಂದು ಸೋಂಕಿತರಾಗಿರುವುದು ದೃಢಪಟ್ಟಿತ್ತು.ನನ್ನನ್ನು ಕೂಡಲೇ ಶ್ರೀ ಶ್ರೀ ರವಿಶಂಕರ್ ಗುರೂಜಿ ಆಶ್ರಮದ ಕೋವಿಡ್ ಆರೈಕೆ ಕೇಂದ್ರಕ್ಕೆ ಕರೆದೊಯ್ಯಲಾಯಿತು. ನ್ಯೂಮೋನಿಯಾ ಇದ್ದ ಕಾರಣ ಅದೇ ದಿನ ರಾತ್ರಿ ಜಯನಗರ ಸಾರ್ವಜನಿಕ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಯಿತು. ನಾನು ಗುಣಮುಖಳಾಗಿ ವಾಪಸ್ ಬರುತ್ತೇನೆಯೋ ಇಲ್ಲವೋ ಎಂಬ ಭಯವಿತ್ತು. ಒಂದು ದಿನ ಕಳೆದ ಬಳಿಕ ಇದು ಕೂಡ ಸಾಮಾನ್ಯ ಜ್ವರ ಎಂದು ಅರಿವಿಗೆ ಬಂತು’ ಎಂದು ಎಸ್. ಪ್ರೇಮಲತಾ ತಿಳಿಸಿದರು. 

‘ಪತಿ ಮತ್ತು ಪುತ್ರ ಕೂಡ ಭಯಕ್ಕೆ ಒಳಗಾಗಿದ್ದರು. ಒಣ ಹಣ್ಣು ಸೇರಿದಂತೆ ರೋಗನಿರೋಧಕ ಶಕ್ತಿ ವೃದ್ಧಿಗೆ ಪೂರಕವಾದ ತಿನಿಸು, ಕಷಾಯದ ಪುಡಿಗಳನ್ನು ಆಸ್ಪತ್ರೆಗೆ ಕಳುಹಿಸುತ್ತಿದ್ದರು. ನ್ಯುಮೋನಿಯಾ ಹಾಗೂ ಮಧುಮೇಹ ಇದ್ದ ಕಾರಣ ಚುಚ್ಚುಮದ್ದನ್ನು ನೀಡಲಾಗುತ್ತಿತ್ತು. ಎರಡು ದಿನಗಳಲ್ಲಿಯೇ ಚೇತರಿಸಿಕೊಂಡೆ. 10 ದಿನಗಳ ಬಳಿಕ ಮನೆಗೆ ಕಳುಹಿಸಿದರು‘ ಎಂದರು. ’ಕೊರೊನಾ ದುರ್ಬಲ ಸೋಂಕು. ಇದರ ಬಗ್ಗೆ ಹೊರಗಡೆ ತಪ್ಪಾಗಿಬಿಂಬಿಸಿ, ಭಯ ಸೃಷ್ಟಿಸಲಾಗುತ್ತದೆ. ರೋಗನಿರೋಧಕ ಶಕ್ತಿ ವೃದ್ಧಿಗೆ ಪೂರಕವಾದ ಆಹಾರ ಸೇವಿಸಬೇಕು. ಮನೋರಂಜನಾ ಕಾರ್ಯಕ್ರಗಳನ್ನು ವೀಕ್ಷಿಸಬೇಕು’ ಎಂದು ವಿವರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು