ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಮ್‌ನಲ್ಲಿ ಹೆಣ, ಹಾಲ್‌ನಲ್ಲಿ ಹೆಂಡತಿ, ಕಾರಿನಲ್ಲಿ ಬಾಮೈದ...

‘ಫೇಸ್‌ಬುಕ್‌’ನಲ್ಲಿ ಕೋವಿಡ್‌ ಸನ್ನಿವೇಶವೊಂದನ್ನು ಹಂಚಿಕೊಂಡ ಸಚಿವ ಸುರೇಶ್‌ಕುಮಾರ್‌
Last Updated 17 ಏಪ್ರಿಲ್ 2021, 8:08 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ವಿಷಯದಲ್ಲಿ ಜನರು ನಿರ್ಲಕ್ಷ್ಯ ವಹಿಸಿ, ಜೀವಕ್ಕೆ ಅಪಾಯ ತಂದುಕೊಂಡ ಹಲವು ನಿದರ್ಶನಗಳಿವೆ. ಅಂತಹ ಒಂದು ಸನ್ನಿವೇಶವೊಂದನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ತಮ್ಮ ‘ಫೇಸ್‌ಬುಕ್‌’ ಪೋಸ್ಟ್​ನಲ್ಲಿ ಹಂಚಿಕೊಂಡಿದ್ದಾರೆ.

ಕನಕಪುರ ರಸ್ತೆಯ ತಲಘಟ್ಟಪುರದ ಸಮೀಪದ ಹಳ್ಳಿಯೊಂದರಲ್ಲಿ ವಾಸವಿದ್ದ ದಂಪತಿಯ ಕುರಿತು ಸಚಿವರು ಮಾಹಿತಿ ನೀಡಿದ್ದಾರೆ. ಗಂಡನಿಗೆ ಕೋವಿಡ್ ಬಂದು ಮನೆಯಲ್ಲೇ ಮೃತಪಟ್ಟಿದ್ದರು. ಆದರೆ, ಅಂತ್ಯಸಂಸ್ಕಾರ ಮಾಡಲು ಯಾರೂ ಇರಲಿಲ್ಲವಂತೆ. ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಶವ ಇರಿಸಿ, ಪತ್ನಿ ಮತ್ತು ಉಳಿದವರು ದಿಕ್ಕು ತೋಚದಂತೆ ಆಗಿಬಿಟ್ಟಿದ್ದರು ಎಂದು ಸಚಿವರಿಗೆ ಅವರ ಮಿತ್ರರೊಬ್ಬರು ತಿಳಿಸಿದ್ದರು.

ಇಡೀ ಘಟನೆಯನ್ನು ಸುರೇಶ ಕುಮಾರ್‌ ‘ಫೇಸ್‌ ಬುಕ್‌’ನಲ್ಲಿ ಬರೆದುಕೊಂಡಿದ್ದಾರೆ.

***

ನಿನ್ನೆ ನಡೆದ ಘಟನೆಯಿದು.

ಕನಕಪುರ ರಸ್ತೆಯ ತಲಘಟ್ಟಪುರ ಹತ್ತಿರದ ಒಂದು ಹಳ್ಳಿಯಲ್ಲಿ ಗಂಡ ಹೆಂಡತಿ ವಾಸವಾಗಿದ್ದರು. ಅದರಲ್ಲಿ ಗಂಡನಿಗೆ ಕೋವಿಡ್ ಬಂದು ತೀರಿ ಹೋಗಿದ್ದಾರೆ. ಅಂತ್ಯಸಂಸ್ಕಾರ ಮಾಡಲು ಯಾರು ಇಲ್ಲ. ಈ ಮಾಹಿತಿಯನ್ನು ನನ್ನ ಪತ್ರಕರ್ತ ಗೆಳೆಯರೊಬ್ಬರು ನನಗೆ ತಿಳಿಸಿದರು. ತಕ್ಷಣವೇ ರಾಜಾಜಿನಗರದ ನಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ಮಾಡಿ ವಿಷಯ ತಿಳಿಸಿ ಅಗತ್ಯ ನೆರವು ನೀಡಲು ತಿಳಿಸಿದೆ.

ನಮ್ಮ ಕಾರ್ಯಕರ್ತರು ವಿಚಾರಿಸಿದಾಗ ಆ ವ್ಯಕ್ತಿಗೆ ಜ್ವರ ಬಂದ ಕಾರಣ ಸ್ಥಳೀಯ ಆಸ್ಪತ್ರೆಗೆ ಕಳೆದ ವಾರ ಹೋಗಿ ಪರೀಕ್ಷೆ ಮಾಡಿಸಿರುವ ವಿಚಾರ ತಿಳಿದುಬಂದಿದೆ. ಅಲ್ಲಿ ಅವರಿಗೆ ಕೋವಿಡ್ ಪಾಸಿವಿಟ್ ಎಂದು ತಿಳಿಯುತ್ತದೆ. ಅವರು ನೇರವಾಗಿ ಮನೆಗೆ ಬಂದು ಕೋಣೆಯಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿ ಮಲಗುತ್ತಾರೆ. ಮೊನ್ನೆ ಸಂಜೆ ಅವರ ಹೆಂಡತಿ ಕೋಣೆಗೆ ಹೋಗಿ ನೋಡಿದರೆ ಗಂಡ ಮರಣ ಹೊಂದಿರುವುದು ತಿಳಿಯುತ್ತದೆ. ಇದರಿಂದ ಹೆಂಡತಿಯು ಗಾಬರಿಯಾಗಿ ಏನು ಮಾಡಬೇಕೆಂದು ತಿಳಿಯದೆ ದಿಗ್ಬ್ರಮೆಯಾಗುತ್ತದೆ.

ನಂತರ ಅಕ್ಕ ಪಕ್ಕದ ಮನೆಯವರಿಗೆ ವಿಷಯ ತಿಳಿದು ಅವರು ಮೈಸೂರಿನಲ್ಲಿರುವ ಗಂಡನ ಬಾಮೈದನಿಗೆ ಕರೆ ಮಾಡಿ ತಿಳಿಸುತ್ತಾರೆ. ಮೈಸೂರಿನಿಂದ ಕಾರಿನಲ್ಲಿ ಬಂದ ಅವರು, ಕೊroನಾ ಕಾರಣದಿಂದ ಮನೆಯ ಒಳಗೆ ಹೋಗದೆ ಹೊರಗಡೆ ಕಾರಿನಲ್ಲೇ ರಾತ್ರಿ ಪೂರ್ತಿ ಮಲಗುತ್ತಾರೆ.

ಒಂದು ಕಡೆ ರೂಮ್‌ನಲ್ಲಿ ಹೆಣ, ಹಾಲ್‌ನಲ್ಲಿ ಹೆಂಡತಿ, ಹೊರಗಡೆ ಕಾರಿನಲ್ಲಿ ಬಾಮೈದ.... ಯಾರಿಗೂ ಮುಂದೆ ಏನು ಮಾಡಬೇಕೆಂದು ತಿಳಿದಿಲ್ಲ.

ನಿನ್ನೆ (ಏ. 16) ನಮ್ಮ ರಾಜಾಜಿನಗರ ಕಾರ್ಯಕರ್ತರು ಸ್ಥಳೀಯ ಆರೋಗ್ಯಾಧಿಕಾರಿ ಅವರನ್ನು ಸಂಪರ್ಕಿಸಿ ಅವರಿಂದ ಡೆತ್ ಸರ್ಟಿಫಿಕೇಟ್ ಪಡೆದು ಕೆಂಗೇರಿಯ ಚಿತಗಾರದಲ್ಲಿ ಶವದ ಅಂತಿಮ ಕಾರ್ಯಕ್ಕೆ ವ್ಯವಸ್ಥೆ ಮಾಡಿ ಮುಗಿಸಿದರು. ಅಲ್ಲಿ ಶವದ ಪರವಾಗಿ ಅವರ ಒಬ್ಬ ಸಂಬಂಧಿ ಬಿಟ್ಟು ಯಾರು ಸಹ ಇರಲಿಲ್ಲ. ಅವರು ಶವದ ಹತ್ತಿರವಿರಲಿ,ಅದರ ವಾಹನ ಹತ್ತಿರ ಬರಲು ಹೆದರುತ್ತಿದ್ದರು. ಮೃತದೇಹದ ಪೂಜಾಕಾರ್ಯಯೂ ಮಾಡಲಿಲ್ಲ.

ಅಂತಿಮವಾಗಿ ನಮ್ಮ ಕಾರ್ಯಕರ್ತರೆ ಅಂತಿಮ ಸಂಸ್ಕಾರ ಮಾಡಿ ಬಂದರು. ಧೈರ್ಯದಿಂದ, ಒಳ್ಳೆ ಮನಸ್ಸಿನಿಂದ, ಯಾವುದೇ ಫಲಾಪೇಕ್ಷೆ ಇಲ್ಲದೆ ಆ ಕಾರ್ಯ ಮಾಡಿದ ನಮ್ಮ ಕಾರ್ಯಕರ್ತರಾದ ಗಿರೀಶ್, ಲಿಂಗರಾಜು, ಉಮೇಶ್ ಹಾಗೂ ಪ್ರವೀಣ್ ಅವರಿಗೆ ನನ್ನ ನಮನಗಳು.

***
ಸಚಿವರ ಈ ಪೋಸ್ಟ್​ಗೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ಸಚಿವರ ಕಾಳಜಿಗೆ ಪ್ರಶಂಸೆಯೂ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT