ಗುರುವಾರ , ಏಪ್ರಿಲ್ 15, 2021
21 °C
ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ.ಗಿರಿಧರ್ ಬಾಬು ಎಚ್ಚರಿಕೆ

ಕೋವಿಡ್: ಬೆಂಗಳೂರಿನಲ್ಲಿ ಏ.20ರ ವೇಳೆಗೆ ದಿನಕ್ಕೆ 6,500 ಪ್ರಕರಣ–ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರೊನಾ ವೈರಸ್‌ ಸೋಂಕು–ಪ್ರಾತಿನಿಧಿಕ ಚಿತ್ರ

ಬೆಂಗಳೂರು: ‘ನಗರದಲ್ಲಿ ಏ.20ರ ವೇಳೆಗೆ ದಿನಕ್ಕೆ 6,500 ಪ್ರಕರಣಗಳು ವರದಿಯಾಗುವ ಸಾಧ್ಯತೆಯಿದೆ. ಅವರಲ್ಲಿ ಶೇ 10 ರಷ್ಟು ಮಂದಿ ಆಸ್ಪತ್ರೆಗೆ ದಾಖಲಾದರೂ ಆರೋಗ್ಯ ವ್ಯವಸ್ಥೆಯಲ್ಲಿ ಏರುಪೇರಾಗಲಿದೆ’ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ. ಗಿರಿಧರ್ ಬಾಬು ಎಚ್ಚರಿಸಿದ್ದಾರೆ.

ಈ ಬಗ್ಗೆ ಅವರು ಸರಣಿ ಟ್ವೀಟ್ ಮಾಡಿದ್ದಾರೆ. ‘ನಗರದಲ್ಲಿ ಸದ್ಯ ಪ್ರತಿನಿತ್ಯ 3 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ. ಕಳೆದ ಎರಡು ವಾರಗಳಿಂದ ಪ್ರಕರಣಗಳ ಸಂಖ್ಯೆ ಏರುಗತಿ ಪಡೆದುಕೊಂಡಿದೆ. ಇದನ್ನು ಆಧರಿಸಿ ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ವಿವಿಧ ರಾಷ್ಟ್ರ ಮಟ್ಟದ ಸಂಸ್ಥೆಗಳ ವಿಜ್ಞಾನಿಗಳು ಅಧ್ಯಯನ ನಡೆಸಿ, ಪ್ರಕರಣಗಳ ಸಂಖ್ಯೆ ಎಷ್ಟು ತಲುಪಬಹುದು ಎಂಬ ಬಗ್ಗೆ ಊಹೆ ಮಾಡಿದ್ದಾರೆ. ಅವರ ಅನುಸಾರ ಸೋಂಕು ದೃಢ ಪ್ರಮಾಣ ಇದೇ ವೇಗದಲ್ಲಿ ಏರಿಕೆ ಕಂಡಲ್ಲಿ ಮುಂದಿನ 15 ದಿನಗಳ ವೇಳೆಗೆ ಗರಿಷ್ಠ ಸಂಖ್ಯೆ ತಲುಪಲಿದೆ. ಹಾಗಾಗಿ, ಈಗಿನಿಂದಲೇ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಮಹಾರಾಷ್ಟ್ರದ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಲಿದೆ’ ಎಂದು ತಿಳಿಸಿದ್ದಾರೆ.

‘ಲಾಕ್‌ಡೌನ್ ಜಾರಿ ಪರಿಹಾರವಲ್ಲ. ಬದಲಾಗಿ ನಾಲ್ಕು ಗೋಡೆಗಳ ಮಧ್ಯೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದನ್ನು ತಡೆಯಬೇಕು. ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕು. ಸಿನಿಮಾ ಮಂದಿರ, ವಿವಾಹ ಸಭಾಂಗಣ, ಜಿಮ್, ಶಾಲಾ–ಕಾಲೇಜು ಸೇರಿದಂತೆ ವಿವಿಧೆಡೆ ನಾಲ್ಕು ಗೋಡೆಗಳ ಮಧ್ಯ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಮುಂದಿನ ಎರಡು ಮೂರು ವಾರ ಕಾರ್ಯಕ್ರಮಗಳನ್ನು ನಿರ್ಬಂಧಿಸಿ, ಕೆಲವೊಂದನ್ನು ಸ್ಥಗಿತ ಮಾಡಬೇಕು. ಆಗ ಸೋಂಕು ಹರಡುವಿಕೆ ತಡೆಯಬಹುದು’ ಎಂದು ಹೇಳಿದ್ದಾರೆ.


ಡಾ. ಗಿರಿಧರ್ ಬಾಬು

ಹಾಸಿಗೆ ಸಮಸ್ಯೆ: ‘ಶೇ 10ರಷ್ಟು ಮಂದಿಗೆ ಸೋಂಕಿನ ಲಕ್ಷಣಗಳು ಬಹಿರಂಗವಾಗಿ ಗೋಚರಿಸಿ, ಅವರು ಆಸ್ಪತ್ರೆಗೆ ದಾಖಲಾದಲ್ಲಿ ಸಮಸ್ಯೆಯಾಗುತ್ತದೆ. ಪ್ರತಿನಿತ್ಯ 6 ಸಾವಿರ ಪ್ರಕರಣಗಳು ವರದಿಯಾಗಿ, 500ರಿಂದ 600 ಮಂದಿ ಆಸ್ಪತ್ರೆ ಸೇರಿದಲ್ಲಿ ಹಾಸಿಗೆ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಳ್ಳಲಿದೆ. ಒಂದು ವಾರದಲ್ಲಿ ಆರೋಗ್ಯ ವ್ಯವಸ್ಥೆ ಸಂಪೂರ್ಣ ತಲೆಕೆಳಗಾಗಲಿದೆ. ಈಗ ಕಚೇರಿಗೆ ಹೋಗುತ್ತಿರುವವರು, ಶಾಲಾ–ಕಾಲೇಜುಗಳಿಗೆ ಹೋಗುತ್ತಿರುವವರು, ಸಾರ್ವಜನಿಕ ಸ್ಥಳದಲ್ಲಿ ಓಡಾಡುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಾಗುತ್ತಿದ್ದಾರೆ. ಇವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇದ್ದವರಿಗೆ ಸಮಸ್ಯೆಯಾಗುತ್ತದೆ. ಅದೇ ರೀತಿ, ಅವರಿಂದ ಮನೆಯ ಹಿರಿಯ ಸದಸ್ಯರು ಕೂಡ ಸೋಂಕಿತರಾಗುವ ಸಾಧ್ಯತೆ ಇರುತ್ತದೆ’ ಎಂದರು.

‘ಎಲ್ಲರೂ ಕೋವಿಡ್‌ ಲಸಿಕೆ ಪಡೆದುಕೊಳ್ಳಬೇಕು. ಎರಡು ಡೋಸ್‌ ಪಡೆದ ಬಳಿಕ ಸಾವು ಸಂಭವಿಸುವುದಿಲ್ಲ ಎಂಬ ದಾಖಲೆಗಳಿವೆ. ಆದರೆ, ಸೋಂಕು ತಗುಲಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಕೋವಿಡ್ ಪೀಡಿತರಾದರೂ ರೋಗದ ತೀವ್ರತೆ ಕಡಿಮೆ ಇರುತ್ತದೆ. ಮುಖಗವಸು ಧರಿಸುವಿಕೆ, ಅಂತರ ಕಾಯ್ದುಕೊಳ್ಳುವಿಕೆ ಸೇರಿದಂತೆ ವಿವಿಧ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಮನವಿ ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು