ಶನಿವಾರ, ಮೇ 15, 2021
25 °C
ಚಿತಾಗಾರದ ಮುಂದೆ ಹೆಣ ಹೊತ್ತ ಆಂಬುಲೆನ್ಸ್‌ಗಳ ಸಾಲು * ಮೇಡಿ ಅಗ್ರಹಾರದಲ್ಲಿ ಒಂದೇ ದಿನ 42 ಮೃತದೇಹ ದಹನ

ಮುಂಜಾನೆ 5.30ವರೆಗೂ ಅಂತ್ಯಕ್ರಿಯೆ: ಚಿತಾಗಾರದ ಮುಂದೆ ಆಂಬುಲೆನ್ಸ್‌ಗಳ ಸಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಂಗಳವಾರ ಬಂದ ಹೆಣಗಳ ಅಂತ್ಯಕ್ರಿಯೆ ಮುಗಿಸುವಾಗ ಬುಧವಾರ ಬೆಳಿಗ್ಗೆ 5.30 ಆಗಿತ್ತು. ಬುಧವಾರ ಮತ್ತೆ 8 ಗಂಟೆಯಿಂದ ಮತ್ತೆ ಹೆಣ ಸುಡುವ ಕೆಲಸ ಶುರು.

ಇದು ಯಲಹಂಕ ವಲಯದ ಮೇಡಿ ಅಗ್ರಹಾರ ಚಿತಾಗಾರದ ಪರಿಸ್ಥಿತಿ. ಇಲ್ಲಿ ಮಂಗಳವಾರ ಒಂದೇ ದಿನ 42 ಮೃತದೇಹಗಳ ಅಂತ್ಯಕ್ರಿಯೆ ನಡೆಸಲಾಗಿದೆ. ಬುಧವಾರವೂ ಇಲ್ಲಿ ಶವಗಳನ್ನು ಹೊತ್ತ ಆಂಬುಲೆನ್ಸ್‌ಗಳು ದಿನವಿಡೀ ಸಾಲುಗಟ್ಟಿ ನಿಂತಿದ್ದವು. ಇದು ಮೇಡಿ ಅಗ್ರಹಾರ ಚಿತಾಗಾರವೊಂದರ ಪರಿಸ್ಥಿತಿ ಮಾತ್ರವಲ್ಲ. ಕೋವಿಡ್‌ನಿಂದ ಸತ್ತವರ ಅಂತ್ಯಕ್ರಿಯೆಗೆ ಗೊತ್ತುಪಡಿಸಲಾ‌ದ ಇನ್ನುಳಿದ ಆರು (ಸುಮನಹಳ್ಳಿ, ಕೂಡ್ಲು, ಪಣತ್ತೂರು, ಪೀಣ್ಯ, ಬನಶಂಕರಿ ಹಾಗೂ ಕೆಂಗೇರಿ) ಚಿತಾಗಾರದ ಸಿಬ್ಬಂದಿಗೂ ಕಳೆದ 10 ದಿನಗಳಿಂದ ಹೆಣಗಳನ್ನು ಎಡೆಬಿಡದೆ ಸುಡುವ ಕಾಯಕ ತಪ್ಪಿಲ್ಲ.

‘ಕೋವಿಡ್‌ನಿಂದ ಸತ್ತವರ ಮೃತದೇಹಗಳ ಅಂತ್ಯಕ್ರಿಯೆ ನಡೆಸಲು ಗೊತ್ತುಪಡಿಸಲಾದ ಬಿಬಿಎಂಪಿಯ ಏಳು ಚಿತಾಗಾರಗಳ ಪೈಕಿ ಆರರಲ್ಲಿ ಐದು ದಿನಗಳಲ್ಲಿ 565 ಮಂದಿಯ (ಪಣತ್ತೂರು ಚಿತಾಗಾರದ ವಿವರ ಅಲಭ್ಯ) ಅಂತ್ಯಕ್ರಿಯೆ ನಡೆಸಲಾಗಿದೆ. ಈ ಎಲ್ಲ ಚಿತಾಗಾರಗಳ ಸಿಬ್ಬಂದಿ ತಡರಾತ್ರಿವರೆಗೂ ನಿರಂತರವಾಗಿ ಕೆಲಸ ಮಾಡಿದ್ದಾರೆ. ವಿದ್ಯುತ್‌ ಚಿತಾಗಾರದ ಬೆಂಕಿಯ ಬೇಗೆಯ ನಡುವೆ ಹಗಲೂ ರಾತ್ರಿ ಕೆಲಸ ಮಾಡಿದರೆ ಕಾರ್ಮಿಕರ ಆರೋಗ್ಯದ ಸ್ಥಿತಿ ಏನಾಗಬೇಡ’ ಎಂದು ಪ್ರಶ್ನಿಸುತ್ತಾರೆ ಅಂಬೇಡ್ಕರ್‌ ದಲಿತ ಸಂಘರ್ಷ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅ.ಸುರೇಶ.

‘ನಮಗೆ ಊಟ ಮಾಡುವುದಕ್ಕೂ ಪುರುಸೊತ್ತು ಇಲ್ಲ. ಅಷ್ಟೊಂದು ಕೆಲಸದ ಹೊರೆ ಇದೆ. ನಾವು ಇದುವರೆಗೆ (ರಾತ್ರಿ 10 ಗಂಟೆ) 18 ಶವಗಳನ್ನು ಸುಟ್ಟಿದ್ದೇವೆ. ಇನ್ನೂ 18 ಶವಗಳು ಬಾಕಿ ಇವೆ. ಇವುಗಳಲ್ಲಿ ಮೂರರ ಅಂತ್ಯಕ್ರಿಯೆಯನ್ನು ಮಾತ್ರ ಬುಧವಾರ ನಡೆಸಿ ಇನ್ನುಳಿದವುಗಳ ಅಂತ್ಯಕ್ರಿಯೆ ಗುರುವಾರ ನಡೆಸಲು ನಿರ್ಧರಿಸಿದ್ದೇವೆ’ ಎಂದು ಕೂಡ್ಲು ಚಿತಾಗಾರದ ಸಿಬ್ಬಂದಿ ಚಂದ್ರು ತಿಳಿಸಿದರು.  

‘ಅಂತ್ಯಕ್ರಿಯೆ ನಡೆಸುವಾಗ ಬೆಂಕಿಯ ತಾಪಕ್ಕೆ ಹಾಗೇ ಸುಮ್ಮನೆ ನಿಲ್ಲುವುದಕ್ಕೂ ಆಗುವುದಿಲ್ಲ. ಆದರೆ, ನಾವು ಹಗಲೂ ರಾತ್ರಿ ಚಿತಾಗಾರದಲ್ಲಿ ಕೆಲಸ ಮಾಡಬೇಕಿದೆ. ಬಿಬಿಎಂಪಿಯವರು ಏನಾದರೂ ಪರ್ಯಾಯ ವ್ಯವಸ್ಥೆ ಮಾಡಬೇಕು’ ಎಂದು ಒತ್ತಾಯಿಸಿದರು.

ಚಿತಾಗಾರ ಸಿಬ್ಬಂದಿಯ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲು ‘ಪ್ರಜಾವಾಣಿ’ ಏ. 18ರ ಸಂಚಿಕೆಯಲ್ಲಿ ‘ತಡರಾತ್ರಿವರೆಗೂ ಶವ ಸುಡುವ ಚಿತಾಗಾರ ಕಾರ್ಮಿಕರು’ ಎಂಬ ವಿಶೇಷ ವರದಿ ಪ್ರಕಟಿಸಿತ್ತು. ಮರುದಿನ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಮೇಡಿ ಅಗ್ರಹಾರ ಚಿತಾಗಾರಕ್ಕೆ ತೆರಳಿ ಅಲ್ಲಿನ ಸಿಬ್ಬಂದಿಯ ಸಮಸ್ಯೆಗಳನ್ನು ಆಲಿಸಿದ್ದರು. ಎಲ್ಲ ಚಿತಾಗಾರಗಳಲ್ಲೂ ಪಾಳಿ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದರು. ಅದಿನ್ನೂ ಜಾರಿಯಾಗಿಲ್ಲ. ಆದರೆ, ಕಾರ್ಮಿಕರಿಗೆ ತಿಂಗಳಾನುಗಟ್ಟಲೆ ಬಾಕಿ ಇದ್ದ ಸಂಬಳ ಬಿಡುಗಡೆಗೆ ಬಿಬಿಎಂಪಿ ಕ್ರಮ ಕೈಗೊಂಡಿದೆ.

ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಗುರುವಾರದಿಂದ ತನ್ನ ವ್ಯಾಪ್ತಿಯ ಎಲ್ಲ 12 ವಿದ್ಯುತ್‌ ಚಿತಾಗಾರಗಳಲ್ಲೂ ನಡೆಸಲು ಬಿಬಿಎಂಪಿ ಕ್ರಮ ಕೈಗೊಂಡಿದೆ. ಇದರಿಂದ ಯಲಹಂಕ ವಲಯದ ಹೆಬ್ಬಾಳ ಕೆಂಪಾಪುರ, ಪೂರ್ವ ವಲಯದ ಕಲ್ಲಹಳ್ಳಿ, ದಕ್ಷಿಣ ವಲಯದ ವಿಲ್ಸನ್‌ ಗಾರ್ಡನ್‌ ಹಾಗೂ ಪಶ್ಚಿಮ ವಲಯದ ಹರಿಶ್ಚಂದ್ರ ಘಾಟ್‌ ಮತ್ತು ಮೈಸೂರು ರಸ್ತೆ ಚಿತಾಗಾರಗಳು ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಹೆಚ್ಚುವರಿಯಾಗಿ ಲಭಿಸಲಿವೆ. ಇದರಿಂದಲಾದರೂ ಚಿತಾಗಾರ ಸಿಬ್ಬಂದಿ ಮೇಲೆ ಒತ್ತಡ ಕಡಿಮೆಯಾಗುತ್ತದೆಯೋ ಕಾದುನೋಡಬೇಕಿದೆ.

***

ಚಿತಾಗಾರ ಸಿಬ್ಬಂದಿ ಎದುರಿಸುತ್ತಿರುವ ಒತ್ತಡ ನಿವಾರಿಸಲು ಬಿಬಿಎಂಪಿ ಮುಂದಾಗದಿದ್ದರೆ, ಎಲ್ಲ ಚಿತಾಗಾರಗಳ ಸಿಬ್ಬಂದಿ ಇನ್ನೆರಡು ದಿನಗಳಲ್ಲಿ ಕೆಲಸ ಸ್ಥಗಿತಗೊಳಿಸಲಿದ್ದಾರೆ.

- ಅ.ಸುರೇಶ. ಅಂಬೇಡ್ಕರ್‌ ದಲಿತ ಸಂಘರ್ಷ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ

***

‘ಒಂದೊಂದು ಆಂಬುಲೆನ್ಸ್‌ನಲ್ಲಿ ಎರಡು ಮೂರು ಹೆಣ’

‘ಚಿತಾಗಾರಗಳಿಗೆ ಬರುವ ಒಂದೊಂದು ಆಂಬುಲೆನ್ಸ್‌ಗಳಲ್ಲಿ ಎರಡು ಮೂರು ಹೆಣಗಳನ್ನು ಅಂತ್ಯಕ್ರಿಯೆಗೆ ತರಲಾಗುತ್ತಿದೆ. ಹೀಗೆ ಮಾಡಬೇಡಿ ಎಂದರೂ ಕೇಳುತ್ತಿಲ್ಲ. ಸ್ಮಶಾನಕ್ಕೆ ಬಂದ ಹೆಣವನ್ನು ಮರಳಿ ಕಳುಹಿಸಲು ಮನಸ್ಸಾಗುವುದಿಲ್ಲ. ಎಷ್ಟೇ ಒತ್ತಡವಾದರೂ ನಾವು ನಮ್ಮ ಕಾಯಕವನ್ನು ಶ್ರದ್ಧೆಯಿಂದ ಮಾಡುತ್ತಿದ್ದೇವೆ. ಜನರೂ ನಮ್ಮ ಕಷ್ಟವನ್ನು ಅರ್ಥಮಾಡಿಕೊಳ್ಳಬೇಕು’ ಎಂದು ಚಿತಾಗಾರ ಸಿಬ್ಬಂದಿಯೊಬ್ಬರು ತಿಳಿಸಿದರು.

‘ಅಂತ್ಯಕ್ರಿಯೆಗೂ ಪ್ರಭಾವ ಬಳಸದಿರಿ‌’

‘ತಮಗೆ ಬೇಕಾದ ಕುಟುಂಬದ ಸದಸ್ಯರೊಬ್ಬರ ಅಂತ್ಯಕ್ರಿಯೆಯನ್ನು ತಕ್ಷಣವೇ ಕೈಗೊಳ್ಳುವಂತೆ ಪ್ರಭಾವಿ ವ್ಯಕ್ತಿಯೊಬ್ಬರು ಬಿಬಿಎಂಪಿ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರು. ಹಾಗಾಗಿ ನಾವು ಸರದಿ ತಪ್ಪಿಸಿ ಅಂತ್ಯಕ್ರಿಯೆ ನಡೆಸಬೇಕಾಯಿತು. ತಮ್ಮ ಬಂಧುಗಳ ಅಂತ್ಯಕ್ರಿಯೆಗಾಗಿ ಸರದಿಯಲ್ಲಿ ಕಾಯುತ್ತಿದ್ದವರೆಲ್ಲ ಸಿಟ್ಟಿಗೆದ್ದು ನಮ್ಮ ಮೇಲೆ ಹಲ್ಲೆಗೇ ಮುಂದಾದರು. ಈ ಪರಿಸ್ಥಿತಿ ಸಂಭಾಳಿಸಲು ನಾವು ಬಹಳ ಕಷ್ಟ ಪಡಬೇಕಾಯಿತು’ ಎಂದು ಸುಮನಹಳ್ಳಿ ಚಿತಾಗಾರದ ಸಿಬ್ಬಂದಿ ಎನ್‌.ರವಿ ತಿಳಿಸಿದರು.

‘ಸಾವು ಎಲ್ಲರಿಗೂ ಒಂದೇ ಎಂಬುದನ್ನು ಪ್ರಭಾವಶಾಲಿ ವ್ಯಕ್ತಿಗಳು ಅರ್ಥ ಮಾಡಿಕೊಳ್ಳಬೇಕು. ಅಂತ್ಯಕ್ರಿಯೆಗೂ ಪ್ರಭಾವ ಬಳಸುವುದನ್ನು ನಿಲ್ಲಿಸಬೇಕು’ಎಂದು ಅವರು ಕೋರಿದರು.

ಚಿತಾಗಾರ ಕಾರ್ಮಿಕರ ಬೇಡಿಕೆಗಳು

* ಪ್ರತಿ ತಿಂಗಳೂ ಸರಿಯಾಗಿ ಸಂಬಳ ನೀಡಬೇಕು

* ಚಿತಾಗಾರ ಸಿಬ್ಬಂದಿಯ ಊಟ– ತಿಂಡಿಗೆ ವ್ಯವಸ್ಥೆ ಮಾಡಬೇಕು

* ಕೋವಿಡ್‌ ಲಸಿಕೆ ಹಾಕಿಸಬೇಕು

* ಕೋವಿಡ್‌ನಿಂದ ಸತ್ತರೆ ವಿಮೆ ಸೌಕರ್ಯ ಒದಗಿಸಬೇಕು

* ಸಿಬ್ಬಂದಿಗೆ ಕೋವಿಡ್‌ ತಗುಲಿದರೆ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ತಕ್ಷಣ ಹಾಸಿಗೆ ವ್ಯವಸ್ಥೆ ಕಲ್ಪಿಸಬೇಕು

* ಸುರಕ್ಷತಾ ಸಾಮಗ್ರಿಗಳನ್ನು ಒದಗಿಸಬೇಕು

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು