ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಹೆಚ್ಚಿದ ಕೊಲೆ, ದರೋಡೆ, ಸೈಬರ್‌ ಅಪರಾಧ

2023ರ ಅಪರಾಧ ಪ್ರಕರಣಗಳ ಅಂಕಿಅಂಶ ಬಿಡುಗಡೆ ಮಾಡಿದ ಪೊಲೀಸರು
Published 4 ಜನವರಿ 2024, 0:25 IST
Last Updated 4 ಜನವರಿ 2024, 0:25 IST
ಅಕ್ಷರ ಗಾತ್ರ

ಬೆಂಗಳೂರು: ‘ಸಿಲಿಕಾನ್‌ ಸಿಟಿ’ಯಲ್ಲಿ ವರ್ಷದಿಂದ ವರ್ಷಕ್ಕೆ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ.

ನಗರ ಪೊಲೀಸ್‌ ಇಲಾಖೆ, 2023ರಲ್ಲಿ ನಡೆದ ಅಪರಾಧ ಪ್ರಕರಣಗಳ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದು ಕೊಲೆ, ದರೋಡೆ, ಚಿನ್ನಾಭರಣ ಕಳವು, ಸೈಬರ್ ಅಪರಾಧಗಳು ಗಣನೀಯ ಪ್ರಮಾಣದಲ್ಲಿ ಏರಿಕೆ ಆಗಿರುವುದು ಕಂಡುಬಂದಿದೆ. ಅಪರಾಧ ಪ್ರಕರಣಗಳ ಹೆಚ್ಚಳ ನಗರದ ಜನರಲ್ಲಿ ಆತಂಕ ಹುಟ್ಟಿಸಿದೆ.

2022ಕ್ಕೆ ಹೋಲಿಸಿದರೆ ಕೊಲೆ ಪ್ರಕರಣಗಳಲ್ಲಿ ಶೇ 31ರಷ್ಟು ಹೆಚ್ಚಳವಾಗಿದೆ. ಪ್ರಚೋದನೆ, ಅನೈತಿಕ ಸಂಬಂಧ, ಕೌಟುಂಬಿಕ ಕಲಹ, ವೈರತ್ವ ಹಾಗೂ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಕೊಲೆಗಳು ನಡೆದಿವೆ. ಆದರೆ, ಲಾಭಕ್ಕಾಗಿ ನಡೆದಿರುವ ಕೊಲೆ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿವೆ ಎಂದು ವರದಿ ಹೇಳಿದೆ.

2022ಕ್ಕೆ ಹೋಲಿಸಿದರೆ ದರೋಡೆ ಪ್ರಕರಣಗಳಲ್ಲಿ ಶೇ 41ರಷ್ಟು ಹೆಚ್ಚಳವಾಗಿದೆ. 673 ದರೋಡೆ ಪ್ರಕರಣಗಳಲ್ಲಿ 385 (ಶೇ 57) ಮೊಬೈಲ್‌ ಕಸಿದು ಪರಾರಿಯಾದ ಪ್ರಕರಣಗಳೇ ಆಗಿವೆ. ಅಲ್ಲದೇ ಆತ್ಮಹತ್ಯೆ ಪ್ರಕರಣಗಳೂ ಹೆಚ್ಚು ವರದಿಯಾಗಿವೆ.

ಮಾದಕ ವಸ್ತುಗಳ ಮಾರಾಟ ಜಾಲವು ವರ್ಷದಿಂದ ವರ್ಷಕ್ಕೆ ವಿಸ್ತಾರವಾಗಿ ಬೆಳೆಯುತ್ತಿದೆ. 2021ರಲ್ಲಿ ₹60 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಎಂಟು ವಿಭಾಗದ ಪೊಲೀಸರು ಹಾಗೂ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿದ್ದರು. ಅದೇ 2023ರಲ್ಲಿ ₹103 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಬಂಧಿತ ಆರೋಪಿಗಳ ಸಂಖ್ಯೆಯೂ ಏರಿಕೆಯಾಗಿದೆ. 

ಅಪಹರಣ ಪ್ರಕರಣಗಳೂ ಏರುಗತಿಯಲ್ಲಿ ಸಾಗಿರುವುದು ಕಂಡುಬಂದಿದೆ. 2021ರಲ್ಲಿ ಬೇರೆ ಬೇರೆ ಕಾರಣಕ್ಕೆ 803 ಮಂದಿಯ ಅಪಹರಣವಾಗಿತ್ತು. ಆ ಪೈಕಿ 783 ಮಂದಿಯನ್ನು ಪತ್ತೆ ಮಾಡಲಾಗಿತ್ತು. 2022ರಲ್ಲಿ 931 ಮಂದಿ ಅಪಹರಣವಾಗಿದ್ದರು. ಅದರಲ್ಲಿ 908 ಮಂದಿಯನ್ನು ಪತ್ತೆ ಮಾಡಲಾಗಿತ್ತು. 23 ಮಂದಿ ಇನ್ನೂ ಸಿಕ್ಕಿಲ್ಲ. ಅದೇ 2023ರಲ್ಲಿ 1,189 ಮಂದಿ ಅಪಹರಣಕ್ಕೆ ಒಳಗಾಗಿದ್ದರು. 981 ಮಂದಿಯನ್ನು ಪತ್ತೆ ಮಾಡಲಾಗಿದೆ. 208 ಮಂದಿ ಇನ್ನೂ ಪತ್ತೆಯಾಗಿಲ್ಲ. ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಏರಿಕೆ ಹಾದಿಯಲ್ಲಿವೆ.

ಸಾವು–ನೋವು:

ಕಳೆದ ವರ್ಷ 2,358 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. ವಿದ್ಯುತ್‌ ಆಘಾತ, ಕಾಲು ಜಾರಿ ಬಿದ್ದು ಹಾಗೂ ಕಟ್ಟಡದಿಂದ ಆಕಸ್ಮಿಕವಾಗಿ ಬಿದ್ದಿದ್ದ ಪ್ರಕರಣಗಳಲ್ಲಿ 3,490 ಮಂದಿ ಮೃತಪಟ್ಟಿದ್ದರು. ‌

ವಿದೇಶಿ ಪ್ರಜೆಗಳ ವಿರುದ್ಧ ಕ್ರಮ: 

ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಹಾಗೂ ಅಕ್ರಮವಾಗಿ ನೆಲೆಸಿರುವ ವಿದೇಶಿಯರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಕಳೆದ ವರ್ಷ 92 ಪ್ರಕರಣಗಳು ವರದಿಯಾಗಿದ್ದವು. ಅದರಲ್ಲಿ 126 ವಿದೇಶಿಯರನ್ನು ಬಂಧಿಸಲಾಗಿತ್ತು. ಅಕ್ರಮವಾಗಿ ನೆಲೆಸಿದ್ದ 247 ವಿದೇಶಿಯರನ್ನು ಅವರ ದೇಶಕ್ಕೆ ವಾಪಸ್‌ ಕಳುಹಿಸಲಾಗಿದೆ.

ನ್ಯಾಯಾಲಯದಲ್ಲಿ ಎಲ್‌.ಪಿ.ಆರ್‌(ಗೈರು ಪ್ರಕರಣ) ಪ್ರಕರಣಗಳಿದ್ದು ತಲೆಮರೆಸಿಕೊಂಡಿದ್ದ ಆರೋಪಿಗಳ ಪೈಕಿ 99 ಮಂದಿಯನ್ನು ಪತ್ತೆಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಸೈಬರ್‌ ಅಪರಾಧ: 14285 ತನಿಖಾ ಹಂತದ ಪ್ರಕರಣ

2022ಕ್ಕೆ ಹೋಲಿಸಿದರೆ ಸೈಬರ್‌ ಅಪರಾಧ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗಿವೆ. ಸೈಬರ್‌ ಟಿಪ್‌ಲೈನ್‌ ಎನ್‌ಸಿಆರ್‌ಪಿ ಪೋರ್ಟಲ್‌ ಸಹಾಯವಾಣಿ 112ರ ಮೂಲಕ ದಾಖಲಾದ ದೂರುಗಳನ್ನು ಎಫ್‌ಐಆರ್‌ಗಳಾಗಿ ಪರಿವರ್ತಿಸಲಾಗಿದೆ. 2021ರಲ್ಲಿ 6422 ಸೈಬರ್‌ ಅಪರಾಧ ಪ್ರಕರಣಗಳು ವರದಿಯಾಗಿದ್ದವು. ಆ ಪೈಕಿ 2257 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. 192 ಪ್ರಕರಣಗಳಲ್ಲಿ ಆರೋಪಿಗಳ ಪತ್ತೆ ಸಾಧ್ಯವಾಗಿಲ್ಲ. ಅದೇ 2022ರಲ್ಲಿ 9940 ಪ್ರಕರಣ ದಾಖಲಾಗಿದ್ದವು. 2431 ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿತ್ತು. ಕಳೆದ ವರ್ಷ 17623 ಸೈಬರ್‌ ಅಪರಾಧ ಪ್ರಕರಣಗಳು ದಾಖಲಾಗಿದ್ದವು. 1271 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿತ್ತು. 14285 ಪ್ರಕರಣಗಳು ತನಿಖಾ ಹಂತದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT