ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣ್ಯರ ಹೆಸರಿನಲ್ಲಿ ವಂಚನೆ: ಸಿಸಿಬಿ ದಾಳಿ

₹26 ಲಕ್ಷ ನಗದು, ₹91 ಕೋಟಿಯ ಚೆಕ್‌ ವಶ
Last Updated 16 ಡಿಸೆಂಬರ್ 2020, 19:32 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ನಾಯಕರು ತನಗೆ ಆಪ್ತರೆಂದು ಹೇಳಿಕೊಂಡು, ಸರ್ಕಾರಿ ಹುದ್ದೆಗಳನ್ನು ಕೊಡಿಸುವುದಾಗಿ ಜನರನ್ನು ವಂಚಿಸುತ್ತಿದ್ದ ಆರೋಪದಡಿ ನಾಗರಬಾವಿಯ ಯುವರಾಜ್ ಎಂಬಾತನ ನಿವಾಸದ ಮೇಲೆ ಸಿಸಿಬಿ ಅಧಿಕಾರಿಗಳು ಬುಧವಾರ ದಾಳಿ ನಡೆಸಿದರು.

‘ದಾಳಿ ವೇಳೆ ಆರೋಪಿ ಮನೆಯಲ್ಲಿ ಪತ್ತೆಯಾದ ಕೆಲ ದಾಖಲೆಗಳು, ₹26 ಲಕ್ಷ ನಗದು, ಆರೋಪಿ ಹೆಸರು ಉಲ್ಲೇಖಿಸಿರುವ ₹91 ಕೋಟಿ ಮೊತ್ತದ ವಿವಿಧ ಬ್ಯಾಂಕುಗಳ ಚೆಕ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಬಿಜೆಪಿ ನಾಯಕರೊಂದಿಗೆ ಈತ ಫೊಟೊ ತೆಗೆಸಿಕೊಂಡಿದ್ದ. ತನ್ನ ಹೆಸರು ಹೇಳಿದರೆ ಕ್ಷಣಮಾತ್ರದಲ್ಲಿ ಕೆಲಸಗಳು ನಡೆಯುತ್ತವೆ ಎಂದೂ ಜನರಿಂದ ಹಣ ಪಡೆದು ವಂಚಿಸುತ್ತಿದ್ದ.

‘ಕೆಎಸ್ಆರ್‌ಟಿಸಿ ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ ಉದ್ಯಮಿಯೊಬ್ಬರಿಂದ ₹1 ಕೋಟಿ ಹಣ ಪಡೆದಿದ್ದ. ಆದರೆ, ಯಾವುದೇ ಹುದ್ದೆ ಕೊಡಿಸದೆ ವಂಚಿಸಿದ್ದಾನೆ. ನಿಗಮಕ್ಕೆ ಬೇರೆಯವರು ಅಧ್ಯಕ್ಷರಾದ ಬಳಿಕ ಈತನ ವಂಚನೆ ತಿಳಿಯಿತು’ ಎಂದು ಆರೋಪಿಸಿ ಉದ್ಯಮಿ ಸಿಸಿಬಿಗೆ ದೂರು ನೀಡಿದ್ದರು.

‘ಈತ ಹಲವರಿಂದ ಕೋಟ್ಯಂತರ ಹಣ ಪಡೆದು ವಂಚಿಸಿರುವ ಮಾಹಿತಿ ಸಿಸಿಬಿಗೆ ಸಿಕ್ಕಿತ್ತು. ಆರೋಪಿ ವಿರುದ್ಧ ದಾಖಲಾಗಿದ್ದ ದೂರಿನನ್ವಯ ನ್ಯಾಯಾಲಯದಿಂದ ವಾರೆಂಟ್ ಪಡೆದು, ಆತನ ಮನೆ ಮೇಲೆ ದಾಳಿ ನಡೆಸಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.

ಚಾಲಕ ಹೆಸರಿನಲ್ಲಿ ಖಾತೆ?: ಆರೋಪಿ ತನ್ನಕಾರು ಚಾಲಕ ಉಮೇಶ್ ಹೆಸರಿನಲ್ಲೂ ಬ್ಯಾಂಕ್ ಖಾತೆ ತೆರೆದಿದ್ದ. ಉಮೇಶ್‌ಗೆ ತಿಳಿಯದಂತೆ ಚೆಕ್‍ಗಳ ಮೇಲೆ ಸಹಿ ಪಡೆದುಕೊಂಡು, ಕೋಟ್ಯಂತರ ವಹಿವಾಟು ನಡೆಸುತ್ತಿದ್ದ. ಇದರಿಂದ ಅನುಮಾನಗೊಂಡು ಪ್ರಶ್ನಿಸಿದಾಗ, ಹಲ್ಲೆಗೂ ಮುಂದಾಗಿದ್ದ. ಈ ಸಂಬಂಧ ಚಾಲಕ ಪೊಲೀಸರಿಗೆ ಈ ಹಿಂದೆಯೇ ದೂರು ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT