ಗುರುವಾರ , ಜುಲೈ 29, 2021
21 °C

ನಾಡ ಬಂದೂಕುಗಳು ಜಪ್ತಿ: ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಹಾರಾಷ್ಟ್ರದಿಂದ ಬಂದೂಕುಗಳನ್ನು ತಂದು ನಗರದಲ್ಲಿ ಅಕ್ರಮವಾಗಿ ಮಾರುತ್ತಿದ್ದ ಮೂವರು ಆರೋಪಿಗಳನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

ಆರ್‌.ಕೆ.ಹೆಗಡೆ ನಗರದ ಫಯಾಜ್‌ ಉಲ್ಲಾ (32), ಮಹಮ್ಮದ್ ಅಲಿ (32) ಹಾಗೂ ಸೈಯದ್ ಸಿರಾಜ್ ಅಹ್ಮದ್ (42) ಬಂಧಿತರು.

‘ಆರೋಪಿಗಳು ಮಹಾರಾಷ್ಟ್ರದ ಶಿರಡಿ ಬಳಿಯ ಕೊಪ್ಪರ್‌ಗಾವ್ ಪ್ರದೇಶದಿಂದ ಬಂದೂಕುಗಳನ್ನು ತರುತ್ತಿದ್ದರು. ಶೋಕಿಗಾಗಿ ಹಾಗೂ ಆತ್ಮರಕ್ಷಣೆಗಾಗಿ ಬಂದೂಕುಗಳನ್ನು ತಮ್ಮಲ್ಲಿ ಇಟ್ಟುಕೊಂಡಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದರು. ಈ ವೇಳೆ ಅವರ ಬಳಿ ಇದ್ದ ಮೂರು ನಾಡ ಬಂದೂಕುಗಳು ಹಾಗೂ 24 ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಫಯಾಜ್‌ ಉಲ್ಲಾ ಸಂಪಿಗೆಹಳ್ಳಿ ಠಾಣೆಯ ರೌಡಿಶೀಟರ್ ಆಗಿದ್ದು, ಈತನ ಮೇಲೆ ಆರು ಪ್ರಕರಣಗಳಿವೆ. ಈ ಹಿಂದೆಯೂ ಬಂದೂಕುಗಳನ್ನು ಹೊಂದಿದ್ದ ಆರೋಪ ಈತನ ಮೇಲಿತ್ತು. ಶಿವಾಜಿನಗರದ ರೌಡಿಶೀಟರ್ ಆಗಿರುವ ಮಹಮ್ಮದ್ ಅಲಿ ವಿರುದ್ಧ ನಾಲ್ಕು ಪ್ರಕರಣಗಳು ಹಾಗೂ ಸಿರಾಜ್ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿದ್ದವು’ ಎಂದೂ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.