ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾಧಿಕಾರಿ ಹೆಸರಿನಲ್ಲಿ ವಂಚನೆ; ಆರೋಪಿ ಬಂಧನ

Last Updated 9 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ಸೇನಾಧಿಕಾರಿಯೆಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದ್ದ ಅಂಜನೇಶ್ ಮಠಪತಿ (31) ಎಂಬಾತನನ್ನು ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಬೆಳಗಾವಿಯ ಅಂಜನೇಶ್, ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ. ಸೇನಾಧಿಕಾರಿ ರೀತಿಯಲ್ಲೇ ಬಟ್ಟೆ ಹಾಕಿಕೊಂಡು ಫೋಟೊ ತೆಗೆಸಿಕೊಂಡಿದ್ದ. ಅದನ್ನೇ ಜನರಿಗೆ ತೋರಿಸಿ ವಂಚಿಸುತ್ತಿದ್ದ. ಆತನಿಂದ ನಕಲಿ ಪಿಸ್ತೂಲ್, ನಕಲಿ ಗುರುತಿನ ಚೀಟಿ, ಸಮವಸ್ತ್ರವನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತೆರಿಗೆ ವಿನಾಯಿತಿ ವಂಚನೆ: ‘ಸೇನಾಧಿಕಾರಿಗಳಿಗೆ ವಸ್ತುಗಳ ಖರೀದಿ ಮೇಲೆ ತೆರಿಗೆ ವಿನಾಯಿತಿ ಇರುವುದನ್ನು ಆರೋಪಿ ತಿಳಿದುಕೊಂಡಿದ್ದ. ಸುಬ್ರಹ್ಮಣ್ಯನಗರ ನಿವಾಸಿಯೊಬ್ಬರನ್ನು ಸಂಪರ್ಕಿಸಿದ್ದ ಆತ, ‘ನನಗೆ ತೆರಿಗೆ ವಿನಾಯಿತಿ ಇದೆ. ಮೊಬೈಲ್, ಕಾರು ತೆರಿಗೆ ರಹಿತವಾಗಿ ಸಿಗುತ್ತವೆ. ನಿಮಗೆ ಬೇಕಾದರೆ ಹೇಳಿ ಕೊಡಿಸುತ್ತೇನೆ. ನನಗೆ ಕಮಿಷನ್ ಕೊಟ್ಟರೆ ಸಾಕು’ ಎಂದಿದ್ದ. ಅದನ್ನು ನಂಬಿದ್ದ ನಿವಾಸಿ ಹಾಗೂ ಅವರ ಪರಿಚಯಸ್ಥರು, ಕಾರು ಹಾಗೂ ಇತರೆ ವಸ್ತುಗಳ ಖರೀದಿಸಲೆಂದು ಲಕ್ಷಾಂತರ ರೂಪಾಯಿ ಕೊಟ್ಟಿದ್ದರು.’

‘ಹಣ ಪಡೆದು ತಿಂಗಳಾದರೂ ಆರೋಪಿ ಕಾರು ಕೊಡಿಸಿರಲಿಲ್ಲ. ಅನುಮಾನಗೊಂಡ ನಿವಾಸಿ, ಆರೋಪಿ ಹಿನ್ನೆಲೆ ಬಗ್ಗೆ ವಿಚಾರಿಸಿದಾಗಲೇ ವಂಚನೆ ಗಮನಕ್ಕೆ ಬಂದಿದೆ. ನಂತರ ಠಾಣೆಗೆ ಬಂದು ದೂರು ನೀಡಿದ್ದರು. ಅದರನ್ವಯ ಆರೋಪಿಯನ್ನು ಬಂಧಿಸಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ಮದುವೆ ವಂಚನೆ: ‘ಮದುವೆಯಗುವುದಾಗಿ ಹೇಳಿ ಯುವತಿ ಹಾಗೂ ಅವರ ಮನೆಯವರಿಂದಲೂ ಹಣ ಪಡೆದು ಆರೋಪಿ ಅಂಜನೇಶ್ ವಂಚಿಸಿರುವುದು ತನಿಖೆಯಿಂದ ಗೊತ್ತಾಗಿದೆ. ಈ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT