ಬುಧವಾರ, ಸೆಪ್ಟೆಂಬರ್ 22, 2021
22 °C

‘ಸಿಕ್ಸ್ ಪ್ಯಾಕ್’ ಆಸೆ ಹುಟ್ಟಿಸಿ ₹ 6.20 ಲಕ್ಷ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸಿಕ್ಸ್ ಪ್ಯಾಕ್’ ಮಾಡಿಸುವ ಆಸೆ ಹುಟ್ಟಿಸಿ ಸಾಫ್ಟ್‌ವೇರ್‌ ಎಂಜಿನಿಯರೊಬ್ಬರಿಂದ ₹ 6.20 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಹೊಸಕೆರೆಹಳ್ಳಿ ದತ್ತಾತ್ರೇಯ ನಗರದ ನಿವಾಸಿ ಕೌಶಿಕ್ ಎಂಬುವರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ‘ಎಂಪವರ್ ಫಿಟ್ನೆಸ್’ ಜಿಮ್ ಮಾಲೀಕ ಮೋಹನ್‌ಕುಮಾರ್ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಆರೋಪಿ ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದಕ್ಕಾಗಿ ಜಿಮ್‌ಗೆ ಹೋಗಲು ತೀರ್ಮಾನಿಸಿದ್ದ ದೂರುದಾರ, ಆರೋಪಿ ಬಳಿ ಹೋಗಿ ವಿಚಾರಿಸಿದ್ದರು. ತಮ್ಮ ದೈಹಿಕ ಕಸರತ್ತಿನ ಫೋಟೊ ತೋರಿಸಿದ್ದ ಆರೋಪಿ, ‘6 ತಿಂಗಳ ಬದಲು 3 ತಿಂಗಳಿನಲ್ಲೇ ಸಿಕ್ಸ್ ಪ್ಯಾಕ್ ಬರುವಂತೆ ಮಾಡುತ್ತೇನೆ’ ಎಂದಿದ್ದರು. ಅದನ್ನು ನಂಬಿದ್ದ ದೂರುದಾರ, ಶುಲ್ಕ ಹಾಗೂ ಇತರೆ ಪ್ಯಾಕೇಜ್‌ಗಾಗಿ ₹ 80 ಸಾವಿರ ತುಂಬಿದ್ದರು.’

‘ಜಿಮ್‌ಗೆ ಹೋಗಲಾರಂಭಿಸಿದ್ದ ದೂರುದಾರರ ಆರೋಗ್ಯದಲ್ಲಿ ಏರುಪೇರಾಗಿತ್ತು. ಒಂದು ವಾರ ಮನೆಯಲ್ಲೇ ವಿಶ್ರಾಂತಿ ಪಡೆದು, ನಂತರ ಜಿಮ್‌ಗೆ ತೆರಳಿದ್ದರು. ಕಷ್ಟವಿರುವುದಾಗಿ ಹೇಳಿದ್ದ ಆರೋಪಿ, ಪುನಃ ಸಾವಿರಾರು ರೂಪಾಯಿ ಹಣ ಪಡೆದಿದ್ದರು. ದೂರುದಾರ ಎಂಜಿನಿಯರ್‌ ಎಂಬುದು ಗೊತ್ತಾಗುತ್ತಿದ್ದಂತೆ, ‘₹ 7 ಲಕ್ಷ ಸಾಲ ಕೊಡಿಸಿ’ ಎಂದು ಆರೋಪಿ ಬೆನ್ನುಬಿದ್ದಿದ್ದ. ಅದನ್ನು ನಂಬಿ ದೂರುದಾರ, ₹ 5 ಲಕ್ಷ ಸಾಲ ಕೊಡಿಸಿದ್ದರು. ಅದರ ತಿಂಗಳ ಕಂತನ್ನೂ ಆರೋಪಿ ತುಂಬಿರಲಿಲ್ಲ. ಈ ವಿಚಾರ ದೂರುದಾರರ ತಂದೆಗೆ ಗೊತ್ತಾಗಿತ್ತು.’

‘ತಂದೆ– ಮಗ ಇಬ್ಬರೂ ಸೇರಿ ಆರೋಪಿ ಬಳಿ ಹೋಗಿ ಹಣ ವಾಪಸು ಕೇಳಿದ್ದರು. ಅವರಿಬ್ಬರನ್ನು ಬೆದರಿಸಿದ್ದ ಆರೋಪಿ, ಹಣ ನೀಡುವುದಿಲ್ಲವೆಂದು ಹೇಳಿದ್ದಾನೆ. ನೊಂದ ದೂರುದಾರ ಠಾಣೆಗೆ ದೂರು ನೀಡಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು