ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿನಲ್ಲಿ ‘ಅಕ್ರಮ’: ಕೈದಿಯ ಮೊಬೈಲ್, ಸಿಮ್ ಜಪ್ತಿ

ಹೊರಗಿನವರಿಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ ಆರೋಪಗಳ ಹಿನ್ನೆಲೆಯಲ್ಲಿ ತನಿಖೆ
Last Updated 18 ಡಿಸೆಂಬರ್ 2022, 4:09 IST
ಅಕ್ಷರ ಗಾತ್ರ

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಅಕ್ರಮ ಚಟುವಟಿಕೆಗಳು ಮುಂದುವರಿದಿದ್ದು, ಕೈದಿಯೊಬ್ಬರು ಎರಡು ಮೊಬೈಲ್ ಹಾಗೂ ಮೂರು ಸಿಮ್‌ಕಾರ್ಡ್‌ ಬಳಸುತ್ತಿದ್ದ ಸಂಗತಿಯನ್ನು ಜೈಲಿನ ಅಧಿಕಾರಿಗಳೇ ಪತ್ತೆ ಮಾಡಿದ್ದಾರೆ.

‘ಜೈಲಿನಲ್ಲಿರುವ ಕೆಲ ಕೈದಿಗಳು ಐಷಾರಾಮಿ ಸೌಲಭ್ಯ ಪಡೆಯುತ್ತಿದ್ದಾರೆ ಹಾಗೂ ಜೈಲಿನಿಂದಲೇ ಹೊರಗಿನವರಿಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ’ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಬಗ್ಗೆ ವಿಶೇಷ ತನಿಖೆ ಸಹ ನಡೆದಿತ್ತು. ಇದೀಗ ಮತ್ತೆ ಕೈದಿಗಳ ಅಕ್ರಮಗಳು ಒಂದೊಂದಾಗಿ ಬಯಲಾಗುತ್ತಿವೆ.

‘ಕಾರಾಗೃಹದ 2ನೇ ಟವರ್‌ ಕಟ್ಟಡದ ಡಿ. ಬ್ಯಾರಕ್‌ನ ಕೊಠಡಿ ಸಂಖ್ಯೆ 6ರಲ್ಲಿರುವ ಕೈದಿ ಸಾಗರ್ ಅಲಿಯಾಸ್ ರಕಿಬುಲ್ ಇಸ್ಲಾಮ್ ಎಂಬಾತನ ಬಳಿ ಡಿ. 14ರಂದು ಎರಡು ಮೊಬೈಲ್ ಹಾಗೂ ಮೂರು ಸಿಮ್‌ಕಾರ್ಡ್‌ಗಳು ಸಿಕ್ಕಿವೆ. ಅವುಗಳ ಸಮೇತ ಜೈಲಿನ ಅಧೀಕ್ಷಕರು ದೂರು ನೀಡಿದ್ದಾರೆ. ಕೈದಿ ಸಾಗರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪರಪ್ಪನ ಅಗ್ರಹಾರ ಪೊಲೀಸ್ ಮೂಲಗಳು ಹೇಳಿವೆ.

‘ಜೈಲಿನ ಸಿಬ್ಬಂದಿ, ಬ್ಯಾರಕ್‌ಗಳ ಎಲ್ಲ ಕೊಠಡಿಗಳಲ್ಲಿ ಅನಿರೀಕ್ಷಿತವಾಗಿ ತಪಾಸಣೆ ನಡೆಸಿದ್ದರು. ಕೈದಿ ಸಾಗರ್ ತನ್ನ ಹಾಸಿಗೆಯ ಕೆಳಭಾಗದಲ್ಲಿ ಮೊಬೈಲ್ ಹಾಗೂ ಸಿಮ್‌ಕಾರ್ಡ್‌ಗಳನ್ನು ಬಚ್ಚಿಟ್ಟುಕೊಂಡಿದ್ದ. ಹಾಸಿಗೆ ತೆಗೆದು ಪರಿಶೀಲಿಸಿದಾಗ, ಮೊಬೈಲ್ ಹಾಗೂ ಸಿಮ್‌ಕಾರ್ಡ್‌ಗಳು ಸಿಕ್ಕಿರುವುದಾಗಿ ಜೈಲಿನ ಸಿಬ್ಬಂದಿ ಹೇಳಿದ್ದಾರೆ’ ಎಂದು ಮೂಲಗಳು
ವಿವರಿಸಿವೆ.

‘ಜೈಲಿನಲ್ಲಿ ಮೊಬೈಲ್ ಹಾಗೂ ಸಿಮ್‌ಕಾರ್ಡ್ ಬಳಕೆ ನಿಷೇಧಿಸಲಾಗಿದೆ. ಇಷ್ಟಾದರೂ ಕೈದಿ ಸಾಗರ್, ಜೈಲಿನ ನಿಯಮಗಳನ್ನು ಉಲ್ಲಂಘನೆ ಮಾಡಿ ಅಕ್ರಮವಾಗಿ ಮೊಬೈಲ್ ಇಟ್ಟುಕೊಂಡಿದ್ದನೆಂದು ಜೈಲಿನ ಸಿಬ್ಬಂದಿ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು
ತಿಳಿಸಿವೆ.

ಮೊಬೈಲ್ ಕೊಟ್ಟವರ ಬಗ್ಗೆ ಮಾಹಿತಿ: ‘ಅಪರಾಧ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದ ಸಾಗರ್, ಯಾರಿಂದ ಮೊಬೈಲ್ ಪಡೆದುಕೊಂಡಿದ್ದನೆಂಬ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಜೊತೆಗೆ, ಈತ ಸಹ ಕೈದಿಗಳಿಗೆ ಮೊಬೈಲ್ ನೀಡಿ ಹಣ ಪಡೆಯುತ್ತಿದ್ದನೆಂಬ ಅನುಮಾನವೂ ಇದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT