ಮಂಗಳವಾರ, ಅಕ್ಟೋಬರ್ 20, 2020
23 °C
ಸಿಐಡಿ ಸೈಬರ್ ಪೊಲೀಸರ ಕಾರ್ಯಾಚರಣೆ: ನಕಲಿ ಕಾರ್ಡ್ ಸೃಷ್ಟಿ– ವ್ಯಕ್ತಿ ಬಂಧನ

ಖಾತೆದಾರರ ಗೋಪ್ಯ ಮಾಹಿತಿ ಖರೀದಿಸಿ ಖಾತೆಗಳಿಗೆ ಕನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Cyber crime

ಬೆಂಗಳೂರು: ಬ್ಯಾಂಕ್ ಖಾತೆದಾರರ ಗೋಪ್ಯ ಮಾಹಿತಿಯನ್ನು ಜಾಲತಾಣ ಗಳಿಂದ ಖರೀದಿಸಿ ನಕಲಿ ಕಾರ್ಡ್‌ಗಳನ್ನು ಸೃಷ್ಟಿಸಿ ಖಾತೆಗಳಿಗೆ ಕನ್ನ ಹಾಕುತ್ತಿದ್ದ ಆರೋಪಿ ಅಬ್ದುಲ್ ರಜಾಕ್ ಅಲಿಯಾಸ್ ಮೊಹಮ್ಮದ್ ಷರೀಫ್ (27) ಎಂಬಾತನನ್ನು ಸಿಐಡಿ ಸೈಬರ್ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

‘ಉಡುಪಿ ಜಿಲ್ಲೆಯ ಕಾಪು ನಿವಾಸಿಯಾದ ಆರೋಪಿ, ಪಿಯುಸಿ ವರೆಗೆ ಓದಿದ್ದಾನೆ. ಶಿಕ್ಷಣ ಅರ್ಧಕ್ಕೆ ಮೊಟಕುಗೊಳಿಸಿ ದುಬೈಗೆ ಹೋಗಿದ್ದ ಆತ, ಅಲ್ಲಿಯ ಏರ್ ಟಿಕೆಟ್ ಮಾರಾಟ ಮಳಿಗೆಯಲ್ಲಿ ಕೆಲ ವರ್ಷ ಕೆಲಸ ಮಾಡಿದ್ದ. ಅಲ್ಲಿಯೇ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್‌ ವಂಚನೆ ಬಗ್ಗೆ ತಿಳಿದು ಕೊಂಡಿದ್ದ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಯುವತಿಯೊಬ್ಬರ ಹೆಸರಿನಲ್ಲಿ ನಕಲಿ ಖಾತೆ ತೆರೆದು ₹ 50 ಲಕ್ಷ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದ ಸಂಬಂಧ ಮೈಸೂರಿನಲ್ಲಿ ಪ್ರಕರಣ ದಾಖಲಾಗಿತ್ತು. ಅದರ ತನಿಖೆ ಹೊಣೆಯನ್ನು ಸಿಐಡಿ ಸೈಬರ್‌ ವಿಭಾಗಕ್ಕೆ ವಹಿಸಲಾಗಿತ್ತು. ಆರಂಭದಲ್ಲಿ ಬ್ಯಾಂಕ್ ಉದ್ಯೋಗಿ ಉದಯ್ ಶೆಟ್ಟಿ ಹಾಗೂ ನೀಲಂಕಂಠ ಎಂಬುವರನ್ನು ಬಂಧಿಸಲಾಗಿತ್ತು. ಅವರ ವಿಚಾರಣೆ ಹಾಗೂ ಬ್ಯಾಂಕ್ ವಹಿವಾಟಿನಿಂದ ಕೆಲಹಾಕಿದ್ದ ಪುರಾವೆಗಳನ್ನು ಆಧರಿಸಿ ಅಬ್ದುಲ್‌ನನ್ನು ಬಂಧಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿದೆ’ ಎಂದೂ ಮೂಲಗಳೂ ತಿಳಿಸಿವೆ.

ಡಾರ್ಕ್‌ನೆಟ್‌ನಲ್ಲಿ ದತ್ತಾಂಶ ಖರೀದಿ: ‘ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಬ್ಯಾಂಕ್‌ಗಳ ಖಾತೆದಾರರ ಗೋಪ್ಯ ಮಾಹಿತಿಯನ್ನು ಹ್ಯಾಕ್‌ ಮಾಡಿದ್ದ ಖದೀಮರು, ಅದೇ ದತ್ತಾಂಶವನ್ನು ಡಾರ್ಕ್‌ನೆಟ್‌ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದರು. 50 ಡಾಲರ್‌ನಿಂದ 100 ಡಾಲರ್ ಕೊಟ್ಟು ಗೋಪ್ಯ ಮಾಹಿತಿ ಖರೀದಿಸುತ್ತಿದ್ದ ಅಬ್ದುಲ್, ವಂಚನೆಗೆ ಬಳಸುತ್ತಿದ್ದ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಖಾತೆದಾರರ ಹೆಸರಿನಲ್ಲಿ ಕ್ರೆಡಿಟ್ ಹಾಗೂ ಡೇಬಿಟ್ ಕಾರ್ಡ್ ಸೃಷ್ಟಿಸುತ್ತಿದ್ದ ಆರೋಪಿ, ಸ್ವೈಪಿಂಗ್ ಯಂತ್ರದಲ್ಲಿ ಉಜ್ಜಿ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದ. ಅಂತರರಾಷ್ಟ್ರೀಯ ಕಾರ್ಡ್‌ಗಳನ್ನೇ ಆರೋಪಿ ಹೆಚ್ಚಾಗಿ ಬಳಸುತ್ತಿದ್ದ. ಹೀಗಾಗಿ, ಬಹುತೇಕ ಗ್ರಾಹಕರಿಗೆ ವಂಚನೆ ಬಗ್ಗೆ ಗೊತ್ತಾಗುತ್ತಿರಲಿಲ್ಲ. ದೂರು ಸಹ ನೀಡುತ್ತಿರಲಿಲ್ಲ’ ಎಂದೂ ಸಿಐಡಿ ಮೂಲಗಳು ತಿಳಿಸಿವೆ.

ಎಲ್ಲರಿಗೂ ಪಾಲು: ‘ಕೇರಳ, ಆಂಧ್ರ ಪ್ರದೇಶ ಹಾಗೂ ರಾಜಸ್ಥಾನದಲ್ಲಿರುವ ಪರಿಚಯಸ್ಥರಿಂದ ಸ್ವೈಪಿಂಗ್ ಯಂತ್ರಗಳನ್ನು ಆರೋಪಿ ಬಾಡಿಗೆಗೆ ತರುತ್ತಿದ್ದ. ವಂಚನೆ ಹಣವನ್ನು ವರ್ಗಾಯಿಸಲು ಅಗತ್ಯವಿರುವ ಬ್ಯಾಂಕ್ ಖಾತೆದಾರರ ಜೊತೆಯೂ ಸಂಪರ್ಕವಿಟ್ಟುಕೊಳ್ಳುತ್ತಿದ್ದ. ಅವರಿಗೆ ಕಮಿಷನ್ ಸಹ ಕೊಡುತ್ತಿದ್ದ’ ಎಂದೂ ಮೂಲಗಳು ಹೇಳಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು