ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಬರ್ ಕ್ರೈಂ: ದೂರು ದಾಖಲು ಜಾಲತಾಣಕ್ಕೆ ‘ನಕಲಿ’ ಕಾಟ

* ಕೇಂದ್ರ ಗೃಹ ಸಚಿವಾಲಯದ ‘ಸೈಬರ್ ದೋಸ್ತ್‌’ಗೆ ವಂಚಕರ ಸವಾಲು * ಇ–ಮೇಲ್ ಕಳುಹಿಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್
Published 26 ಮಾರ್ಚ್ 2024, 23:13 IST
Last Updated 26 ಮಾರ್ಚ್ 2024, 23:13 IST
ಅಕ್ಷರ ಗಾತ್ರ

ಬೆಂಗಳೂರು: ಸೈಬರ್ ಅಪರಾಧಗಳ ಕುರಿತು ದೂರು ದಾಖಲಿಸಲು ಕೇಂದ್ರ ಗೃಹ ಸಚಿವಾಲಯ ಅಭಿವೃದ್ಧಿಪಡಿಸಿರುವ ಜಾಲತಾಣದ ಹೆಸರಿನಲ್ಲಿ ನಕಲಿ ಜಾಲತಾಣ ಸೃಷ್ಟಿಸಿರುವ ವಂಚಕರು, ಜನರನ್ನು ಬ್ಲ್ಯಾಕ್‌ಮೇಲ್ ಮಾಡಿ ಹಣ ದೋಚುತ್ತಿದ್ದಾರೆ.   

ನಕಲಿ ಜಾಲತಾಣದಿಂದ ಬಂದಿದ್ದ ಬ್ಲ್ಯಾಕ್‌ಮೇಲ್ ಇ–ಮೇಲ್ ಕುರಿತು ಬೆಂಗಳೂರಿನ ಕಂಪನಿಯೊಂದರ ಉದ್ಯೋಗಿ ಸೈಬರ್ ಕ್ರೈಂ ವಿಭಾಗಕ್ಕೆ ಮಾಹಿತಿ ನೀಡಿದ್ದಾರೆ. ಇದನ್ನು ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದು, ನಕಲಿ ಜಾಲತಾಣ ಸೃಷ್ಟಿಸಿದ್ದು ಯಾರು ? ಎಂಬುದನ್ನು ಪತ್ತೆ ಮಾಡುತ್ತಿದ್ದಾರೆ.

ಸೈಬರ್ ಕ್ರೈಂ ಪ್ರಕರಣಗಳನ್ನು ಭೇದಿಸಲು ಅಭಿವೃದ್ಧಿಪಡಿಸಲಾಗಿರುವ ಕೇಂದ್ರ ಸಚಿವಾಲಯದ ಜಾಲತಾಣದ ಹೆಸರನ್ನೇ ವಂಚಕರು ದುರುಪಯೋಗಪಡಿಸಿಕೊಂಡಿದ್ದು, ಇನ್ನು ಜನಸಾಮಾನ್ಯರ ಪಾಡೇನು ಎಂಬ ಪ್ರಶ್ನೆ ಮೂಡಿದೆ.

‘ಸೈಬರ್ ವಂಚಕರು, ಜನರಿಂದ ಹಣ ದೋಚಲು ಕೇಂದ್ರ ಸಚಿವಾಲಯದ ಜಾಲತಾಣದ ಹೆಸರು ಬಳಕೆ ಮಾಡುತ್ತಿದ್ದಾರೆ. ಇದೊಂದು ವ್ಯವಸ್ಥಿತ ಜಾಲವೆಂಬುದು ಗೊತ್ತಾಗುತ್ತಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯಕ್ಕೂ ಮಾಹಿತಿ ಇದೆ. ರಾಷ್ಟ್ರ ಮಟ್ಟದಲ್ಲಿಯೂ ಹಲವು ತನಿಖಾ ಸಂಸ್ಥೆಗಳು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿವೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಅಸಲಿ ಹೆಸರು ಹೋಲುವಂತೆ ನಕಲಿ ಹೆಸರು: ‘ದೇಶದ ಯಾವುದೇ ಭಾಗದಲ್ಲಿ ಸೈಬರ್ ಅಪರಾಧಗಳು ನಡೆದರೆ, ಈ ಬಗ್ಗೆ ದೂರು ದಾಖಲಿಸಲು ಕೇಂದ್ರ ಸಚಿವಾಲಯದ https://cybercrime.gov.in ಜಾಲತಾಣವಿದೆ. ಇದೇ ಜಾಲತಾಣದ ಹೆಸರು ಹೋಲುವಂತೆ www.cybercrimegovin.in ನಕಲಿ ಜಾಲತಾಣ ಸೃಷ್ಟಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘www.cybercrimegovin.in ನಕಲಿ ಜಾಲತಾಣದಲ್ಲಿ ಸೈಬರ್ ದೋಸ್ತ್ (cyberdost@cybercrimegovin.in) ಹೆಸರಿನಲ್ಲಿ ಇ–ಮೇಲ್ ಐಡಿ ಸೃಷ್ಟಿಸಲಾಗಿದೆ. ಇದೇ ಇ–ಮೇಲ್‌ನಿಂದ ಜನರಿಗೆ ಬೆದರಿಕೆ ಸಂದೇಶ ಕಳುಹಿಸಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ನ್ಯಾಯಾಲಯದ ನೋಟಿಸ್ ರವಾನೆ: ‘ನ್ಯಾಯಾಲಯ ನೋಟಿಸ್‌’ ಶೀರ್ಷಿಕೆಯಡಿ ಕಂಪನಿ ಉದ್ಯೋಗಿಯೊಬ್ಬರಿಗೆ ವಂಚಕರು ಇತ್ತೀಚೆಗೆ ಇ–ಮೇಲ್ ಕಳುಹಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.

‘ನಿಮ್ಮ ಮೊಬೈಲ್‌ನಲ್ಲಿ ಮಕ್ಕಳಿಗೆ ಸಂಬಂಧಪಟ್ಟ ನಗ್ನವಿಡಿಯೊಗಳನ್ನು ನೋಡಿದ್ದೀರಾ? ಐಪಿ (ಇಂಟರ್‌ನೆಟ್ ಪ್ರೊಟೊಕಾಲ್) ಅಡ್ರೆಸ್ ಮೂಲಕ ನಮಗೆ ಪುರಾವೆ ಸಿಕ್ಕಿದೆ. ಹೀಗಾಗಿ, ನಿಮಗೆ ನ್ಯಾಯಾಲಯ ನೋಟಿಸ್‌ ಕಳುಹಿಸುತ್ತಿದ್ದೇವೆ. ನೋಟಿಸ್ ತಲುಪಿದ 24 ಗಂಟೆಯೊಳಗೆ ನಮಗೆ ಪ್ರತಿಕ್ರಿಯೆ ನೀಡಬೇಕು. ಇಲ್ಲದಿದ್ದರೆ, ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು– ಪೊಲೀಸ್ ಮುಖ್ಯಸ್ಥ ಪ್ರಶಾಂತ್ ಗೌತಮ್‌’ ಎಂಬುದಾಗಿ ಇ–ಮೇಲ್‌ನಲ್ಲಿ ಬರೆಯಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಪತ್ರದ ಬಗ್ಗೆ ಅನುಮಾನಗೊಂಡ ಉದ್ಯೋಗಿ, ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡಿದ್ದರು. ಆದರೆ, ಸೈಬರ್ ಕ್ರೈಂ ವಿಭಾಗದಲ್ಲಿ ಪ್ರಶಾಂತ್ ಗೌತಮ್ ಎಂಬ ಅಧಿಕಾರಿಯೇ ಇಲ್ಲವೆಂಬುದು ಗೊತ್ತಾಗಿದೆ. ಬಳಿಕವೇ ಅವರು  ಪೊಲೀಸರಿಗೆ ದೂರು ನೀಡಿದ್ದಾರೆ’ ಎಂದು ಹೇಳಿವೆ.

‘ವಂಚಕರ ಬ್ಲ್ಯಾಕ್‌ಮೇಲ್‌ಗೆ ಹೆದರಿ ಹಲವರು ₹ 20 ಸಾವಿರದಿಂದ ₹ 5 ಲಕ್ಷದವರೆಗೂ ಹಣ ನೀಡಿರುವುದು ಗೊತ್ತಾಗಿದೆ. ಆದರೆ, ಕೆಲವರು ಇ–ಮೇಲ್‌ಗೆ ಪ್ರತಿಕ್ರಿಯಿಸಿಲ್ಲ’ ಎಂದು ಮೂಲಗಳು ಹೇಳಿವೆ.

‘ಜನರು ಠಾಣೆಗೆ ಅಲೆಯುವುದನ್ನು ತಪ್ಪಿಸಲು ಹಾಗೂ ಸೈಬರ್ ಅಪರಾಧಗಳನ್ನು ಹತ್ತಿಕ್ಕಲು ಕೇಂದ್ರ ಸಚಿವಾಲಯ ಈ ಜಾಲತಾಣ ತೆರೆದಿದೆ. ಆದರೆ, ಸೈಬರ್ ವಂಚಕರು ನಕಲಿ ಜಾಲತಾಣ ತೆರೆದು ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಜೊತೆಗೆ, ಹಲವರನ್ನು ಸುಲಿಗೆ ಮಾಡುತ್ತಿದ್ದಾರೆ. ಇಂಥವರ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು’ ಎಂದು ತಿಳಿಸಿವೆ. 

ನಕಲಿ ಜಾಲತಾಣ ನಿಷ್ಕ್ರಿಯ: ‘ಮಾಹಿತಿ ತಿಳಿಯುತ್ತಿದ್ದಂತೆ ನಕಲಿ ಜಾಲತಾಣವನ್ನು ನಿಷ್ಕ್ರಿಯಗೊಳಿಸಲಾಗಿದೆ. ಇದನ್ನು ಸೃಷ್ಟಿಸಿದವರು ಯಾರು ? ಯಾವ ಪ್ರದೇಶದಲ್ಲಿ ನಿರ್ವಹಣೆ ಮಾಡಲಾಗುತ್ತಿತ್ತು? ಎಂಬ ಬಗ್ಗೆ ತಾಂತ್ರಿಕ ಪುರಾವೆಗಳನ್ನು ಸಂಗ್ರಹಿಸಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT