ಭಾನುವಾರ, ಮೇ 29, 2022
31 °C

ಶೌಚಗುಂಡಿ ಸ್ವಚ್ಛಗೊಳಿಸುವಂತೆ ಒತ್ತಡ: ಮೂವರ ವಿರುದ್ಧ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದಲಿತ ಕಾರ್ಮಿಕ ದೈವಾದೀನಂ (56) ಎಂಬುವರನ್ನು ಬಲವಂತದಿಂದ ಶೌಚಗುಂಡಿಗೆ ಇಳಿಸಿ ಅದನ್ನು ಸ್ವಚ್ಛಗೊಳಿಸುವಂತೆ ಒತ್ತಾಯಿಸಿದ್ದ ಇಂದಿರಾನಗರದ ಆಸ್ಪತ್ರೆಯೊಂದರ ಮೂವರು ಸಿಬ್ಬಂದಿ ವಿರುದ್ಧ ಹಲಸೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ದೈವಾದೀನಂ ಅವರ ಪರವಾಗಿ ಕರ್ನಾಟಕ ಸಮತಾ ಸೈನಿಕ ದಳದ ಕಾರ್ಯಕರ್ತರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಎನ್‌.ಮಧುಸೂದನ್‌ ಅವರು ಆಸ್ಪತ್ರೆಯ ಸ್ವಚ್ಛತಾ ಮೇಲ್ವಿಚಾರಕ ಡಿ.ರಾಜಾ, ಗಿಲ್ಬರ್ಟ್‌ ಮತ್ತು ನಿರ್ವಾಹಕನ ವಿರುದ್ಧ ಇದೇ 15ರಂದು ದೂರು ನೀಡಿದ್ದಾರೆ. ಮೂವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ದೈವಾದೀನಂ ಅವರು ಆಸ್ಪತ್ರೆಯ ಕಾಯಂ ಉದ್ಯೋಗಿಯಾಗಿದ್ದು, 21 ವರ್ಷಗಳಿಂದಲೂ ಕೆಲಸ ಮಾಡುತ್ತಿದ್ದಾರೆ. ಅವರನ್ನು ಶೌಚಗುಂಡಿಗೆ ಇಳಿದು ಸ್ವಚ್ಛಗೊಳಿಸುವಂತೆ ಸೂಚಿಸಲಾಗಿದೆ. ಅದನ್ನು ನಿರಾಕರಿಸಿದಾಗ ಸೇವೆಯಿಂದ ವಜಾಗೊಳಿಸುವುದಾಗಿ ಆರೋಪಿಗಳು ಬೆದರಿಸಿದ್ದಾರೆ. ಶೌಚಗುಂಡಿ ಶುಚಿಗೊಳಿಸುವಂತೆ  ಆಸ್ಪತ್ರೆಯ ಆಡಳಿತ ಮಂಡಳಿಯೂ ಬಲವಂತಪಡಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘ಶೌಚಗುಂಡಿ ಶುಚಿಗೊಳಿಸಲು ಕಾರ್ಮಿಕ ನಿರಾಕರಿಸಿದಾಗ, ‘ಇದು ನಿನ್ನ ಕೆಲಸ. ಇದನ್ನು ಮಾಡಲೇಬೇಕು’ ಎಂದು ಆಸ್ಪತ್ರೆಯ ಆಡಳಿತ ಮಂಡಳಿಯು ಬೆದರಿಸಿದ್ದಾಗಿಯೂ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆಸ್ಪತ್ರೆಯವರು ದೈವಾದೀನಂ ಅವರನ್ನು ಶೌಚಗುಂಡಿ ಸ್ವಚ್ಛಗೊಳಿಸಲು ಮತ್ತು ಆಸ್ಪತ್ರೆಯ ಕಸ ಸಂಗ್ರಹಿಸುವುದಕ್ಕೆಂದೇ ನಿಯೋಜಿಸಿದ್ದರು ಎಂದೂ ಗೊತ್ತಾಗಿದೆ’ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು