ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ ವಾದ ಒಪ್ಪುವವರು ಬಿಜೆಪಿ ಬೆಂಬಲಿಸಬೇಡಿ: ರೈತ ಸಂಘ

ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿಕೆ
Last Updated 20 ಫೆಬ್ರುವರಿ 2021, 21:33 IST
ಅಕ್ಷರ ಗಾತ್ರ

ಬೆಂಗಳೂರು: ‘ಅಂಬೇಡ್ಕರ್‌ ವಾದವನ್ನು ಒಪ್ಪುವವರು ಬಿಜೆಪಿಗೆ ಮತ ಹಾಕಬಾರದು. ಆರ್‌ಎಸ್‌ಎಸ್‌ನಿಂದ ಪೋಷಿಸಲ್ಪಡುತ್ತಿರುವ ಆ ಪಕ್ಷಕ್ಕೆ ಯಾರೂ ಸೇರಬಾರದು’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಜಂಟಿ ವೇದಿಕೆ ಆಯೋಜಿಸಿರುವ ದಲಿತ ಚಳವಳಿಯ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳ ಕಾರ್ಯಾಗಾರದಲ್ಲಿ ದುರ್ಗಂ ಸುಬ್ಬಾರಾವ್‌ ಅವರ ‘ಅಂಬೇಡ್ಕರ್‌ ಸಿದ್ಧಾಂತ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

‘ಶ್ರೀನಿವಾಸ್‌ ಪ್ರಸಾದ್‌ ಅವರು ಮುಂದೊಂದು ದಿನ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಎಂಬ ಆಸೆ ಇಟ್ಟುಕೊಂಡಿದ್ದೆವು. ಆದರೆ ಅವರು ರಾಜಕೀಯ ಜೀವನದ ಕೊನೆಯ ಘಟ್ಟದಲ್ಲಿ ಬಿಜೆಪಿ ಸೇರಿಬಿಟ್ಟರು. ಗೋವಿಂದ ಕಾರಜೋಳ, ರಮೇಶ ಜಿಗಜಿಣಗಿ ಅವರಿಗೆ ತಲೆ ಇಲ್ವಾ. ಬಿಜೆಪಿಯಲ್ಲಿದ್ದುಕೊಂಡು ಅವರು ಅಧಿಕಾರ ಅನುಭವಿಸಬಹುದಷ್ಟೇ. ಅಲ್ಲಿದ್ದು ಏನೂ ಸಾಧನೆ ಮಾಡಲು ಆಗುವುದಿಲ್ಲ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಯನ್ನು ನೋಡಿ, ಸಹಿಸಿಕೊಂಡು ಸುಮ್ಮನಿರುವುದು ಮುಟ್ಠಾಳತನ. ದಲಿತ ನಾಯಕರೆನಿಸಿಕೊಂಡವರು ಮೊದಲು ಬಿಜೆಪಿಯಿಂದ ಹೊರಬರಬೇಕು’ ಎಂದೂ ಒತ್ತಾಯಿಸಿದರು.

ದಲಿತ ಸಂಘರ್ಷ ಸಮಿತಿಯ ಹಿರಿಯ ಮುಖಂಡ ಹಾಗೂ ಪತ್ರಕರ್ತ ಇಂದೂಧರ ಹೊನ್ನಾಪುರ ‘ಅಂಬೇಡ್ಕರ್‌ ಅವರು ಬಹಳ ಆಸ್ಥೆ ವಹಿಸಿ ಮೀಸಲಾತಿಯನ್ನು ಜಾರಿಗೊಳಿಸಿದ್ದರು. ಅದನ್ನು ಬುಡಮೇಲಾಗಿಸುವ ಕಾರ್ಯ ಈಗ ನಡೆಯುತ್ತಿದೆ. ಮೀಸಲಾತಿಯನ್ನು ಬಡತನದೊಂದಿಗೆ ಸಮೀಕರಿಸುವ ಅನಾಗರಿಕ ಕೆಲಸ ಮಾಡಲಾಗುತ್ತಿದೆ. ಇದು ಬಡತನ ವಿಮೋಚನೆಗಾಗಿ ಅನುಷ್ಠಾನಗೊಂಡಿರುವ ಕಾರ್ಯಕ್ರಮವಲ್ಲ’ ಎಂದು ತಿಳಿಸಿದರು.

‘ನಾವು ಈ ದೇಶದ ಮಕ್ಕಳು. ನಮಗೆ ಈ ದೇಶದ ಸಂಪತ್ತಿನಲ್ಲಿ ಸಮಪಾಲು ಬೇಕಿದೆ. ಈ ನಿಟ್ಟಿನಲ್ಲಿ ನಾವು ಚಳವಳಿ ಆರಂಭಿಸಬೇಕು. ಖಾಸಗಿ, ರಾಜಕೀಯ ಕ್ಷೇತ್ರದಲ್ಲಿ ಮೀಸಲಾತಿಗಾಗಿ ಹಿಂದುಳಿದ ವರ್ಗದವರನ್ನೆಲ್ಲಾ ಒಗ್ಗೂಡಿಸಿಕೊಂಡು ಹೋರಾಟ ಮಾಡಬೇಕು’ ಎಂದು ಸಲಹೆ ನೀಡಿದರು.

‘ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಮೂಲಕ ಶೋಷಿತ ಸಮುದಾಯಗಳನ್ನು ತುಳಿಯುವ ಕೆಲಸ ಮಾಡಲಾಗುತ್ತಿದೆ. ಈಗಿನ ಸರ್ಕಾರವು ದಲಿತರ ಬದುಕುವ ಹಕ್ಕನ್ನೇ ಕಸಿದುಕೊಳ್ಳುತ್ತಿದೆ. ಪ್ರಶ್ನಿಸುವ ಮತ್ತು ಪ್ರತಿಭಟಿಸುವವರಿಗೆ ದೇಶದ್ರೋಹಿಗಳೆಂಬ ಹಣೆಪಟ್ಟಿ ಕಟ್ಟಿ ಜೈಲಿಗೆ ಅಟ್ಟಲಾಗುತ್ತಿದೆ. ಈಗ ನಾವೆಲ್ಲಾ ಜಾಗ್ರತರಾಗಬೇಕಿರುವುದು ಬಹಳ ಅವಶ್ಯ’ ಎಂದು ಗುರುಪ್ರಸಾದ್‌ ಕೆರಗೋಡು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT