ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರು ಅಡ್ಡಗಟ್ಟಿ ಗೂಂಡಾಗಿರಿ: ಆರೋಪಿಗಳ ಪತ್ತೆಗೆ ನೆರವಾದ ಡ್ಯಾಶ್‌ಬೋರ್ಡ್‌ ಕ್ಯಾಮ್

Published 8 ಆಗಸ್ಟ್ 2023, 14:32 IST
Last Updated 8 ಆಗಸ್ಟ್ 2023, 14:32 IST
ಅಕ್ಷರ ಗಾತ್ರ

ಬೆಂಗಳೂರು: ‘ರಸ್ತೆಯಲ್ಲಿ ಬೈಕ್‌ ಮುಂದೆ ಸಾಗಲು ಜಾಗ ನೀಡಲಿಲ್ಲ’ ಎಂಬ ಕಾರಣಕ್ಕೆ ಸಾಫ್ಟ್‌ವೇರ್‌ ಎಂಜಿನಿಯರ್ ಪ್ರಯಾಣಿಸುತ್ತಿದ್ದ ಕಾರನ್ನು ಅಡ್ಡಗಟ್ಟಿ ಬೆದರಿಕೆ ಹಾಕಿ ಪುಂಡಾಟ ನಡೆಸಿದ್ದ ಇಬ್ಬರು ಆರೋಪಿಗಳನ್ನು ಕಾರಿನ ಡ್ಯಾಶ್‌ಬೋರ್ಡ್‌ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿ ಪರಿಶೀಲಿಸಿ ವೈಟ್‌ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.‌

ಟೆನಿಸ್ ತರಬೇತುದಾರ ಮುರಳಿ ನೆಲ್ಲೂರುಹಳ್ಳಿ ಹಾಗೂ ಎಲೆಕ್ಟ್ರಿಕ್‌ ಕೆಲಸ ಮಾಡುತ್ತಿರುವ ರಘು ನೆಲ್ಲೂರಹಳ್ಳಿ ಬಂಧಿತ ಆರೋಪಿಗಳು.

ಆಗಸ್ಟ್‌ 5ರಂದು ಸಾಫ್ಟ್‌ವೇರ್‌ ಎಂಜಿನಿಯರ್‌ ಪ್ರಿಯಂದತ್ತ ಅವರು ತಮ್ಮ ಕಾರಿನಲ್ಲಿ ವೈಟ್‌ಫೀಲ್ಡ್‌ನ ವೈದೇಹಿ ಆಸ್ಪತ್ರೆ ಕಡೆಯಿಂದ ರಾಮಗೊಂಡನಹಳ್ಳಿ ಸಮೀಪದ ಮಧುರಂ ನಗರಕ್ಕೆ ತೆರಳುತ್ತಿದ್ದರು. ಪ್ರಿಯಂದತ್ತ ಅವರ ಪತ್ನಿ ಲಲಿತಾ ಅವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಮಾರ್ಗ ಮಧ್ಯದಲ್ಲಿ ಕಾರನ್ನು ಹಿಂದಿಕ್ಕಲು ಬೈಕ್‌ನಲ್ಲಿ ಬಂದ ಇಬ್ಬರು ಆರೋಪಿಗಳು ಮುಂದಾಗಿದ್ದರು. ಈ ವೇಳೆ ಬೈಕ್‌ ಮುಂದೆ ಸಾಗಲು ಜಾಗ ಕೊಡಲಿಲ್ಲ ಎಂಬ ಕಾರಣಕ್ಕೆ ಕೆರಳಿದ ಆರೋಪಿಗಳು ಸ್ವಲ್ಪ ದೂರ ಮುಂದಕ್ಕೆ ಸಾಗಿ ಕಾರನ್ನು ಅಡ್ಡಗಟ್ಟಿದ್ದರು.

ರಘು
ರಘು

‘ಕಾರಿನ ಎದುರು ನಿಂತು ಆರೋಪಿಗಳು ಕೂಗಾಡಿದ್ದರು. ಬಳಿಕ ಕಾರಿನ ಬಳಿ ಬಂದು ದಂಪತಿಗೆ ಕಾರಿನಿಂದ ಇಳಿಯುವಂತೆ ಬೆದರಿಕೆ ಹಾಕಿದ್ದರು. ಕೆಳಗೆ ಇಳಿಯದಿರುವಾಗ ಕಾರಿನ ಗಾಜು ಒಡೆಯಲು ಯತ್ನಿಸಿದ್ದರು. ಕೊಲೆ ಬೆದರಿಕೆ ಹಾಕಿದ್ದರು. ಸಾರ್ವಜನಿಕರು, ಸಾಫ್ಟ್‌ವೇರ್ ಎಂಜಿನಿಯರ್ ಅವರ ನೆರವಿಗೆ ಬರುತ್ತಿದ್ದಂತೆಯೇ ಆರೋಪಿಗಳು ಅಲ್ಲಿಂದ ಕಾಲ್ಕಿತ್ತಿದ್ದರು. ಆರೋಪಿಗಳ ಪುಂಡಾಟ ನಡೆಸುವ ದೃಶ್ಯಾವಳಿಗಳು ಕಾರಿನ ಡ್ಯಾಶ್‌ಬೋರ್ಡ್‌ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಈ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು. ಅದನ್ನು ವ್ಯಕ್ತಿಯೊಬ್ಬರು ಪೊಲೀಸರಿಗೆ ಟ್ಯಾಗ್‌ ಮಾಡಿ ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಅಲ್ಲದೇ ದಂಪತಿಯೂ ಪೊಲೀಸರಿಗೆ ದೂರು ನೀಡಿದ್ದರು’ ಎಂದು ಮೂಲಗಳು ಹೇಳಿವೆ.

ಕಾರಿನಲ್ಲಿ ಈ ಡ್ಯಾಶ್‌ಬೋರ್ಡ್‌ ಕ್ಯಾಮೆರಾ ಅಳವಡಿಕೆ ಈ ರೀತಿಯ ಸಂದರ್ಭದಲ್ಲಿ ನೆರವಿಗೆ ಬರಲಿದೆ. ಬೆಂಗಳೂರಿನಂತಹ ಮಹಾನಗರದಲ್ಲಿ ಕಾರುಗಳಿಗೆ ಈ ರೀತಿಯ ಕ್ಯಾಮೆರಾ ಅಳವಡಿಕೆ ಮಾಡಿಕೊಳ್ಳುವಂತೆ ಪೊಲೀಸರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT