ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಬಾಗಿಲಿಗೆ ಔಷಧ, ಆಹಾರದ ಪೊಟ್ಟಣ ತಲುಪಿಸುತ್ತಿರುವ ಶಿಕ್ಷಕಿ ದಶ್ಮಿ

ಮನೆ ಬಾಗಿಲಿಗೆ ಔಷಧ, ಆಹಾರದ ಪೊಟ್ಟಣ ತಲುಪಿಸುತ್ತಿರುವ ಶಿಕ್ಷಕಿ
Last Updated 1 ಜೂನ್ 2021, 22:25 IST
ಅಕ್ಷರ ಗಾತ್ರ

ಬೆಂಗಳೂರು: ಅವರದ್ದು ಸುಖೀ ಕುಟುಂಬ. ಕೋವಿಡ್‌ನಿಂದ ಸೃಷ್ಟಿಯಾಗಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಗಂಡ ಹಾಗೂ ಮುದ್ದು ಮಗಳ ಜೊತೆ ಮನೆಯಲ್ಲಿ ಹಾಯಾಗಿ ಕಾಲ ಕಳೆಯಬಹುದಿತ್ತು. ಅದಕ್ಕೆ ಮನಸ್ಸು ಒಪ್ಪಲಿಲ್ಲ. ಏನಾದರೂ ವಿಶೇಷವಾದದ್ದನ್ನು ಸಾಧಿಸಬೇಕೆಂಬ ಹಂಬಲ ಹೊತ್ತ ಅವರು ಈ ಸಂಕಷ್ಟದ ಕಾಲದಲ್ಲಿ ನೊಂದವರ ನೋವಿಗೆ ಮಿಡಿಯುತ್ತಿದ್ದಾರೆ.

ಆ ಮಹಿಳೆಯ ಹೆಸರು ದಶ್ಮಿ ರಾಣಿ. ವೃತ್ತಿಯಲ್ಲಿ ವಿಜ್ಞಾನ ಶಿಕ್ಷಕಿ. ಚಂದ್ರಾ ಲೇಔಟ್‌ನಲ್ಲಿ ನೆಲೆಸಿರುವ ಅವರಿಗೆ ಬೈಕ್‌ ಓಡಿಸುವುದೆಂದರೆ ಬಲು ಪ್ರೀತಿ. ಕನ್ಯಾಕುಮಾರಿಯಿಂದ ಕಾಶ್ಮೀರ, ಬೆಂಗಳೂರಿನಿಂದ ಕೋಲ್ಕತ್ತ, ರಾಮೇಶ್ವರ, ಉತ್ತರಾಖಂಡ ಹೀಗೆ ಅನೇಕ ಪ್ರಸಿದ್ಧ ಸ್ಥಳಗಳಿಗೆ ಬೈಕ್‌ನಲ್ಲೇ ಪ್ರಯಾಣಿಸಿ ಸೈ ಎನಿಸಿಕೊಂಡಿದ್ದಾರೆ.

ರಾಯಲ್‌ ಎನ್‌ಫೀಲ್ಡ್‌ ಇಂಟರ್‌ಸೆಪ್ಟರ್‌ 650 ಸಿಸಿ ಬೈಕ್‌ನಲ್ಲಿ ನೂರಾರು ಕಿ.ಮೀ. ಸಂಚರಿಸಿ ಕೋವಿಡೇತರ ರೋಗಿಗಳಿಗೆ ಔಷಧ ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಕೋವಿಡ್‌ನಿಂದಾಗಿ ಮನೆ ಆರೈಕೆಯಲ್ಲಿರುವ ಬೆಂಗಳೂರಿನ ನಿವಾಸಿಗಳಿಗೆ ಆಹಾರದ ಪೊಟ್ಟಣಗಳನ್ನೂ ಪೂರೈಸುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕೋವಿಡ್‌ ಕಾಲದಲ್ಲಿ ಕುಗ್ರಾಮಗಳಲ್ಲಿ ನೆಲೆಸಿರುವ ವೃದ್ಧರು ಹಾಗೂ50 ಬಡ ಕುಟುಂಬಗಳಿಗೆ ಅಗತ್ಯಔಷಧ ತಲುಪಿಸಿರುವ ಅವರು, 1,000 ಮಂದಿಗೆ ಸ್ಯಾನಿಟರಿ ಪ್ಯಾಡ್‌ ಹಾಗೂ 50 ಕುಟುಂಬಗಳಿಗೆ ದಿನಸಿ ಕಿಟ್‌ ಕೂಡ ವಿತರಿಸಿದ್ದಾರೆ.

‘ಹೋದ ವರ್ಷ ನಾನು ಕೋವಿಡ್‌ ಸೇನಾನಿಯಾಗಿ ಕೆಲಸ ಮಾಡಿದ್ದೆ. ಬೈಕ್‌ನಲ್ಲೇ ಹಳ್ಳಿಗಳಿಗೆ ಹೋಗಿ ಔಷಧ ನೀಡಿ ಬರುತ್ತಿದ್ದೆ. ಅವರು ಈಗಲೂ ಕರೆ ಮಾಡಿ ಔಷಧ ಕೇಳುತ್ತಿದ್ದಾರೆ. ಜೊತೆಗೆ ಕೆಲವು ಸ್ವಯಂಸೇವಾ ಸಂಸ್ಥೆಗಳ ಸದಸ್ಯರು ಕರೆ ಮಾಡಿ ಮನೆ ಆರೈಕೆಯಲ್ಲಿರುವವರ ವಿಳಾಸ ಹೇಳುತ್ತಾರೆ. ಅಲ್ಲಿಗೆ ಹೋಗಿ ಔಷಧ ಕೊಟ್ಟು ಬರುತ್ತೇನೆ’ ಎಂದು ದಶ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಡದಿಯಲ್ಲಿ ಬಡ ಮಹಿಳೆಯೊಬ್ಬರು ಎಚ್‌ಐವಿಯಿಂದ ಬಳಲುತ್ತಿದ್ದರು. ಅವರಿಗೆ ತುರ್ತಾಗಿ ಔಷಧ ಬೇಕಿತ್ತು. ಅದನ್ನು ರಾಮನಗರದಿಂದಲೇ ತಂದು ಕೊಡಬೇಕಿತ್ತು. ಸ್ವಯಂಸೇವಾ ಸಂಘಟನೆಯಿಂದ ಕರೆ ಬಂದ ಕೂಡಲೇ ಬೈಕ್‌ ಏರಿ ಹೊರಟೆ. ಅಲ್ಲಿಗೆ ಹೋದ ಮೇಲೆ ರೋಗಿಯ ಸಹಿ ಬೇಕು ಎಂದರು. ಕೂಡಲೇ ಬಿಡದಿಗೆ ಬಂದು ಮಹಿಳೆಯನ್ನು ಕರೆದುಕೊಂಡು ಹೋಗಿ ಔಷಧ ಕೊಡಿಸಿ ಮನೆಗೆ ಬಿಟ್ಟು ಬಂದೆ. ಒಮ್ಮೆ ತುಮಕೂರಿನ ಕುಣಿಗಲ್‌ ರಸ್ತೆಯಲ್ಲಿರುವ ಗೂಳೂರಿಗೂ ಹೋಗಿ ವ್ಯಕ್ತಿಯೊಬ್ಬರಿಗೆ ಔಷಧ ತಲುಪಿಸಿದ್ದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT