ಶುಕ್ರವಾರ, ಆಗಸ್ಟ್ 19, 2022
22 °C

ಹೆಣ್ಣುಮಗು ಕೊಲೆಗೆ ಯತ್ನ: ತಂದೆ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಐದು ವರ್ಷದ ಹೆಣ್ಣುಮಗುವನ್ನು ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದ ಆರೋಪದಡಿ ವೆಂಕಟೇಶ್ವರ್‌ ರಾವ್ (29) ಎಂಬುವರನ್ನು ಎಚ್ಎಎಲ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ತೆಲಂಗಾಣದ ವೆಂಕಟೇಶ್ವರ್ ರಾವ್, ಸಿವಿಲ್ ಗುತ್ತಿಗೆದಾರ. ತನ್ನ ಮಗಳನ್ನೇ ಕೊಲೆ ಮಾಡಲು ಯತ್ನಿಸಿ ಪರಾರಿಯಾಗಿದ್ದ. ತೆಲಂಗಾಣದಲ್ಲೇ ಈತನನ್ನು ಬಂಧಿಸಿ ನಗರಕ್ಕೆ ಕರೆತರಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.‌

‘ಬೆಂಗಳೂರು ಎಚ್‌ಎಎಲ್‌ ನಿವಾಸಿ ನಯನಾ ಅವರನ್ನು 2016ರಲ್ಲಿ ವೆಂಕಟೇಶ್ವರ್ ರಾವ್ ಮದುವೆಯಾಗಿದ್ದ. ನಯನಾ ಅವರು ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಹೆಣ್ಣು ಹುಟ್ಟಿತೆಂಬ ಕಾರಣಕ್ಕೆ ಆರೋಪಿಯು ಪತ್ನಿಗೆ ಕಿರುಕುಳ ನೀಡಲಾರಂಭಿಸಿದ್ದ.’

‘ಎರಡನೇ ಬಾರಿ ಗರ್ಭ ಧರಿಸಿದ್ದ ನಯನಾ, ಹೆರಿಗೆಗೆಂದು ತವರು ಮನೆಗೆ ಬಂದಿದ್ದರು. ತಮ್ಮ ಐದು ವರ್ಷದ ಮಗಳನ್ನೂ ಜೊತೆಯಲ್ಲೇ ಕರೆತಂದಿದ್ದರು. 10 ದಿನಗಳ ಹಿಂದೆಯಷ್ಟೇ ನಯನಾ ಅವರಿಗೆ ಹೆಣ್ಣುಮಗು ಜನಿಸಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಜೂನ್ 20ರಂದು ಬೆಂಗಳೂರಿಗೆ ಬಂದಿದ್ದ ಆರೋಪಿ, ನಯನಾ ಹಾಗೂ ಅವರ ಕುಟುಂಬದವರ ಜೊತೆ ಗಲಾಟೆ ಮಾಡಿದ್ದ. ಮೊದಲ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಲು ಮುಂದಾಗಿದ್ದ’ ಎಂದು ಮೂಲಗಳು ತಿಳಿಸಿವೆ.

‘ಗಲಾಟೆ ವೇಳೆ ಸ್ಥಳೀಯರು ಮಧ್ಯ ಪ್ರವೇಶಿಸುತ್ತಿದ್ದಂತೆ ಆರೋಪಿ ಓಡಿಹೋಗಿದ್ದ. ಗಾಯಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ’ ಎಂದು ಹೇಳಿವೆ.

‘ಗಂಡುಮಗು ಬೇಕಿತ್ತು. ಎರಡನೇ ಬಾರಿಯೂ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇದರಿಂದ ಕೋಪಗೊಂಡು ಮೊದಲ ಮಗಳನ್ನು ಕೊಲೆ ಮಾಡಲು ತೀರ್ಮಾನಿಸಿದ್ದೆ’ ಎಂಬುದಾಗಿ ಆರೋಪಿ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.