ಮಂಗಳವಾರ, ಆಗಸ್ಟ್ 16, 2022
20 °C

ಅಡುಗೆ ಎಣ್ಣೆ ಅನಧಿಕೃತ ದಾಸ್ತಾನು ವಿರುದ್ಧ ಕ್ರಮ: ನಗರ ಜಿಲ್ಲಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ರಷ್ಯಾ– ಉಕ್ರೇನ್ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ಲಾಭ ಮಾಡಿಕೊಳ್ಳಲು ಅಡುಗೆ ಎಣ್ಣೆಯನ್ನು ಅನಧಿಕೃತ ದಾಸ್ತಾನು ಮಾಡಿಕೊಂಡು ಕಾಳಸಂತೆಯಲ್ಲಿ ಮಾರಾಟಕ್ಕೆ ಯತ್ನಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಎಚ್ಚರಿಸಿದರು.

‘ಅಕ್ರಮ ದಾಸ್ತಾನು ಮಾಡಿ ಕಾಳಸಂತೆಯಲ್ಲಿ ಮಾರಾಟ ಆಗಲಿದೆಯೇ ಎಂಬುದರ ಬಗ್ಗೆ ಜಿಲ್ಲಾಡಳಿತ ನಿಗಾ ವಹಿಸಲಿದೆ. ದರ ಹೆಚ್ಚಳದ ಬಗ್ಗೆಯೂ ಮಾಹಿತಿ ಬಂದಿದ್ದು, ಆ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು’ ಎಂದು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮನೆ ಬಾಗಿಲಿಗೆ ಕಂದಾಯ ದಾಖಲೆ:

‘ಕಂದಾಯ ದಾಖಲೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಚಾಲನೆ ನೀಡಲಿದ್ದಾರೆ. ಬೆಂಗಳೂರು ಜಿಲ್ಲೆಯ 5 ತಾಲ್ಲೂಕುಗಳಲ್ಲಿ ಯೋಜನೆ ಜಾರಿ ಮಾಡಲಾಗುತ್ತಿದೆ. 97,209 ಪಹಣಿ, 11,513 ಅಟ್ಲಾಸ್, 31,232 ಜಾತಿ ಮತ್ತು ಆದಾಯ ದೃಢೀಕರಣ ಪತ್ರಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 52,285 ರೈತ ಕುಟುಂಬಗಳಿಗೆ ಇದರಿಂದ ಅನುಕೂಲ ಆಗಲಿದೆ’ ಎಂದು ವಿವರಿಸಿದರು.

‘ಬಿಬಿಎಂಪಿ ಚುನಾವಣೆ ನಡೆಸಲು ವಾರ್ಡ್‌ ಮರು ವಿಂಗಡಣೆ ಕುರಿತಂತೆ ಸಭೆ ನಡೆಸಲಾಗಿದೆ. 2011ರ ಜನಗಣತಿ ಆಧಾರದಲ್ಲಿ ಚುನಾವಣೆ ನಡೆಸಲು ಸಿದ್ಧತೆ ನಡೆಯುತ್ತಿದೆ. ಮತದಾರರ ಪಟ್ಟಿಯ ಕರಡು ಕೂಡ ಸಿದ್ಧವಿದೆ. ಚುನಾವಣೆ ನಡೆಸಲು ಆಯೋಗ ಸೂಚನೆ ನೀಡಿದರೆ ನಾವು ಸಿದ್ಧರಿದ್ದೇವೆ’ ಎಂದರು.

‘ಬಿಬಿಎಂಪಿಗೆ ಸೇರಿಸಬೇಕೆಂಬ ಉದ್ದೇಶದಿಂದ ಕೆಲ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆದಿಲ್ಲ. ಈ ಕುರಿತು ನಗರಾಭಿವೃದ್ಧಿ ಇಲಾಖೆ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಕೆಲವು ಗ್ರಾಮ ಪಂಚಾಯಿತಿಗಳನ್ನು ಬಿಬಿಎಂಪಿಗೆ ಸೇರ್ಪಡೆ ಮಾಡಿಕೊಳ್ಳುವ ವಿಷಯ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ವಿಧಾನಸಭಾ ಕ್ಷೇತ್ರವಾರ ಎಷ್ಟು ವಾರ್ಡ್‌ಗಳಿವೆ ಎಂಬುದರ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. 198 ವಾರ್ಡ್‌ಗಳ ವ್ಯಾಪ್ತಿಯಲ್ಲಿಯೇ 243 ವಾರ್ಡ್‌ಗಳಾಗಿ ವಿಂಗಡಿಸಿ ಚುನಾವಣೆ ನಡೆಸಲಾಗುವುದು’ ಎಂದು  ಜೆ. ಮಂಜುನಾಥ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು