ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರಿನಲ್ಲಿ ಶೇ.60ರಷ್ಟು‌ ಕನ್ನಡ ನಾಮಫಲಕ: ಗಡುವು 2 ವಾರ ವಿಸ್ತರಣೆ; ಡಿಕೆಶಿ

Published 29 ಫೆಬ್ರುವರಿ 2024, 6:25 IST
Last Updated 29 ಫೆಬ್ರುವರಿ 2024, 6:25 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರಿನ ಎಲ್ಲಾ ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು ಮೊದಲಾದ ಕಡೆ ಶೇ.60ರಷ್ಟು‌ ಕನ್ನಡ ನಾಮಫಲಕಗಳನ್ನು ಅಳವಡಿಸಲು ಹೆಚ್ಚಿನ ಸಮಯ ಬೇಕೆಂಬುದನ್ನು ಪರಿಗಣಿಸಿ, ಈಗಾಗಲೇ ನೀಡಲಾಗಿದ್ದ ಗಡುವನ್ನು 2 ವಾರಗಳ‌ ಕಾಲ ವಿಸ್ತರಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಕ್ಸ್ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ.

ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ, ಹಾಗಾಗಿ ನಮ್ಮ ಹೃದಯದ ಭಾಷೆಯನ್ನು ಎತ್ತಿ‌ಹಿಡಿಯುವುದು ಅತಿ ಮುಖ್ಯ. 2 ವಾರಗಳ‌ ನಂತರ ಎಲ್ಲರೂ ಕಾನೂನು ಪಾಲನೆ ಮಾಡುತ್ತಾರೆ‌ ಎಂದು ನಿರೀಕ್ಷಿಸಿದ್ದೇನೆ ಎಂದು ಹೇಳಿದ್ದಾರೆ.

ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಬಳಸದ ವಾಣಿಜ್ಯ ಮಳಿಗೆಗಳ ‘ವ್ಯಾಪಾರ ಪರವಾನಗಿ’ ಅಮಾನತು ಮಾಡಿ, ಇಂದಿನಿಂದ ಬೀಗ ಹಾಕಲು ಬಿಬಿಎಂಪಿ ನಿರ್ಧರಿಸಿತ್ತು.

ಸರ್ಕಾರ, ಸ್ಥಳೀಯ ಪ್ರಾಧಿಕಾರಗಳಿಂದ ಅನುಮತಿ ಮತ್ತು ಮಂಜೂರಾತಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ ಕೈಗಾರಿಕೆ ಮತ್ತು ವ್ಯವಹಾರ ಉದ್ಯಮಗಳು, ಟ್ರಸ್ಟ್‌ಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು ಮತ್ತು ಹೋಟೆಲ್‌ಗಳ ನಾಮಫಲಕಗಳಲ್ಲಿ ಕನ್ನಡವನ್ನು ಶೇ 60ರಷ್ಟು ಪ್ರದರ್ಶಿಸಬೇಕು. ಮೇಲ್ಭಾಗದಲ್ಲಿ ಕನ್ನಡ ಪ್ರದರ್ಶಿತವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ವಿಶೇಷ ರಾಜ್ಯ ಪತ್ರಿಕೆ ಅಧಿಸೂಚನಾ ಪತ್ರದಲ್ಲಿ ಸೂಚಿಸಲಾಗಿತ್ತು.

ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಅಧಿಸೂಚನೆಯಂತೆ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲ ವಾಣಿಜ್ಯ ಮಳಿಗೆಗಳು ಫೆ.28ರೊಳಗೆ ನಾಮಫಲಕ ಗಳಲ್ಲಿ ಶೇ 60ರಷ್ಟು ಕನ್ನಡ ಅಳವಡಿಸಿ ಕೊಳ್ಳಲು ಸೂಚಿಸಿ, 55,187 ಮಳಿಗೆ ಗಳಿಗೆ ನೋಟಿಸ್‌ ಜಾರಿ ಮಾಡಲಾಗಿತ್ತು. ಫೆ.28ರ ವೇಳೆಗೆ 52,134 ವಾಣಿಜ್ಯ ಉದ್ದಿಮೆಗಳು ಸೂಚನೆಯನ್ನು ಪಾಲಿಸಿವೆ. ಉಳಿದ 3,044 ವಾಣಿಜ್ಯ ಉದ್ದಿಮೆಗಳು ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ರಾಜರಾಜೇಶ್ವರಿ ನಗರ ವಲಯದಲ್ಲಿ ಅತಿ ಹೆಚ್ಚು ಬಾಕಿ ಉಳಿದಿದ್ದು, ಯಲಹಂಕ, ಬೊಮ್ಮನಹಳ್ಳಿ ವಲಯ ನಂತರದ ಸ್ಥಾನದಲ್ಲಿವೆ.

ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಪ್ರದರ್ಶಿಸದಿರುವ ವಾಣಿಜ್ಯ ಉದ್ದಿಮೆಗಳ ಉದ್ದಿಮೆ ಪರವಾನಗಿಗಳನ್ನು ಅಮಾನತುಗೊಳಿಸಬೇಕು. ಮಳಿಗೆಗಳಿಗೆ ಬೀಗಮುದ್ರೆ ಹಾಕಬೇಕು ಎಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರೋಳ್ಕರ್ ವಿಕಾಸ್ ಕಿಶೋರ್ ಅವರು ಫೆ.28ರಂದು ಸುತ್ತೋಲೆ ಹೊರಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT