ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೂರ್ತಿ ಶರಣರಿಗೆ ಮರಣದಂಡನೆ ಆಗಬೇಕಿತ್ತು: ಎಚ್‌. ವಿಶ್ವನಾಥ್‌

Published 25 ನವೆಂಬರ್ 2023, 15:53 IST
Last Updated 25 ನವೆಂಬರ್ 2023, 15:53 IST
ಅಕ್ಷರ ಗಾತ್ರ

ಬೆಂಗಳೂರು: ‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾಗಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರಿಗೆ ಮರಣದಂಡನೆ ವಿಧಿಸಬೇಕಿತ್ತು’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಹೇಳಿದರು.

ಮೈಸೂರಿನ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಮತ್ತು ಪರಶುರಾಂ ಅವರೊಂದಿಗೆ ಶನಿವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳನ್ನು ರಕ್ಷಿಸಲು ಪೋಕ್ಸೊ ಕಾಯ್ದೆ ಇದೆ. ನಿರ್ಭಯಾ ಪ್ರಕರಣದ ಬಳಿಕ ಅದು ಬಲಿಷ್ಠವಾಗಿದೆ. ಆದರೆ, ಶಿವಮೂರ್ತಿ ಶರಣರಂತಹವರ ಪ್ರಕರಣಗಳಲ್ಲಿ ಕರ್ನಾಟಕದಲ್ಲಿ ಪೋಕ್ಸೊ ಕಾಯ್ದೆ ದುರ್ಬಲವಾದಂತಿದೆ’ ಎಂದರು.

‘ಪೋಕ್ಸೊ (ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ ಕಾಯ್ದೆ–2012)  ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಆರೋಪಿಗಳಿಗೆ ಸುಲಭವಾಗಿ ಜಾಮೀನು ಮಂಜೂರಾಗುವುದಿಲ್ಲ. ಆಸಾರಾಂ ಬಾಪು ಹಲವು ವರ್ಷಗಳಿಂದ ಜೈಲಿನಲ್ಲಿದ್ದಾರೆ. ಆದರೆ, ಶಿವಮೂರ್ತಿ ಶರಣರು ಜೈಲಿನಿಂದ ಹೊರಗೆ ಬಂದಿದ್ದಾರೆ’ ಎಂದು ಹೇಳಿದರು.

‘ಈ ಪ್ರಕರಣದಲ್ಲಿ ಪೋಕ್ಸೊ ಕಾಯ್ದೆ ದುರ್ಬಲವಾದಂತೆ ಕಾಣುತ್ತಿದೆ. ರಾಘವೇಶ್ವರ ಶ್ರೀಗಳ ಪ್ರಕರಣ, ಸೌಜನ್ಯ ಪ್ರಕರಣ ಎಲ್ಲ ಏನಾದವು? ಶಿವಮೂರ್ತಿ ಶರಣರ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಧೀಶರು ಮಹಿಳೆ. ಅಕ್ಷಮ್ಯ ಅಪರಾಧ ಮಾಡಿದ ಶರಣರು ಹೇಗೆ ಹೊರಬಂದರು’ ಎಂದು ವಿಶ್ವನಾಥ್‌ ಪ್ರಶ್ನಿಸಿದರು.

‘ನಾನೇ ಬಸವೇಶ್ವರ ಎಂದು ಶರಣರು ಹೇಳಿಕೊಳ್ಳುತ್ತಿದ್ದರು. ಬಸವೇಶ್ವರ ಎಲ್ಲಿದ್ದಾನೆ ಈಗ? ದುರ್ಬಲ ವರ್ಗಗಳ ಹೆಣ್ಣು ಮಕ್ಕಳು ಸತ್ತು ಹೋದರು. ಪ್ರಬಲ ವರ್ಗದ ಹೆಣ್ಣು ಮಕ್ಕಳಿಗೆ ಚಿನ್ನ, ಜಮೀನು ಕೊಟ್ಟರು’ ಎಂದು ದೂರಿದರು.

ಕೃಷ್ಣ ಮೃಗಗಳು ಎಲ್ಲಿ?: ‘ಹುಲಿ ಉಗುರನ್ನು ಕೊರಳಿನಲ್ಲಿ ಹಾಕಿಕೊಂಡವರನ್ನು ಜೈಲಿಗೆ ಹಾಕಿದ್ದಾರೆ. ಮುರುಘಾ ಮಠದಲ್ಲಿ 25 ಕೃಷ್ಣ ಮೃಗಗಳು ಇದ್ದವು. ಅವು ಈಗ ಎಲ್ಲಿ ಹೋದವು? ಅರಣ್ಯ ಇಲಾಖೆ ಈ ಕುರಿತು ಗಮನಹರಿಸಬೇಕು’ ಎಂದು ಒತ್ತಾಯಿಸಿದರು.

‘ಕಾನೂನು ಸಚಿವರು ಗಮನಹರಿಸಲಿ’ ‘ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರು ಆರೋಪಿಯಾಗಿರುವ ಪೋಕ್ಸೊ ಪ್ರಕರಣದಲ್ಲಿ ಕೆಳಹಂತದ ವಿಚಾರಣಾ ನ್ಯಾಯಾಲಯ ಕಾನೂನಿನ ಪ್ರಕಾರ ಕೆಲಸ ಮಾಡಿದೆ. ಆದರೆ ಹೈಕೋರ್ಟ್‌ ಅಧೀನ ನ್ಯಾಯಾಲಯಕ್ಕೆ ನೋಟಿಸ್‌ ಜಾರಿಗೊಳಿಸಿದೆ. ಇದೇನು ವ್ಯವಸ್ಥೆ? ಈ ಬಗ್ಗೆ ಕಾನೂನು ಸಚಿವರು ಗಮನಹರಿಸಬೇಕು’ ಎಂದು ಎಚ್‌. ವಿಶ್ವನಾಥ್‌ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT