ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಆರ್‌ಟಿಸಿ ನೌಕರರ ‘ಹೃದಯಾಘಾತ’ ಇಳಿಕೆ

ಹೃದಯ ತಪಾಸಣೆ ಯೋಜನೆಯಿಂದಾಗಿ ಅಪಾಯದಿಂದ ಪಾರಾಗುತ್ತಿರುವ ಸಿಬ್ಬಂದಿ
Published 24 ಫೆಬ್ರುವರಿ 2024, 22:00 IST
Last Updated 24 ಫೆಬ್ರುವರಿ 2024, 22:00 IST
ಅಕ್ಷರ ಗಾತ್ರ

ಬೆಂಗಳೂರು: ಕೆಎಸ್‌ಆರ್‌ಟಿಸಿ ನೌಕರರಿಗೆ ಹೃದಯ ತಪಾಸಣೆ ಯೋಜನೆ ಆರಂಭಿಸಿದ ಬಳಿಕ ಹೃದಯಾಘಾತದಿಂದ ಸಾವಿಗೀಡಾಗುವ ನೌಕರರ ಪ್ರಮಾಣ ಕಡಿಮೆಯಾಗಿದೆ. ಈ ಹಿಂದೆ ತಿಂಗಳಿಗೆ ಸರಾಸರಿ ನಾಲ್ಕು ಜನ ಮೃತಪಡುತ್ತಿದ್ದರು. ಅದೀಗ ಒಂದಕ್ಕೆ ಇಳಿದಿದೆ.

ಕೆಎಸ್‌ಆರ್‌ಟಿಸಿಯಲ್ಲಿ 40 ವರ್ಷ ದಾಟಿದ ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿ 21 ಸಾವಿರಕ್ಕೂ ಅಧಿಕ ಇದ್ದಾರೆ. 2023ರ ಜನವರಿ ಒಂದೇ ತಿಂಗಳಲ್ಲಿ 8 ನೌಕರರು ಹೃದಯಾಘಾತದಿಂದ ನಿಧನರಾದಾಗ ನಿಗಮವು ಇದನ್ನು ಗಂಭೀರವಾಗಿ ಪರಿಗಣಿಸಿತು. ವ್ಯಾಯಾಮ ಮಾಡಬೇಕು, ಸರಿಯಾದ ಸಮಯದಲ್ಲಿ ಸರಿಯಾದ ಆಹಾರ ಸೇವಿಸಬೇಕು ಮುಂತಾದ ಆರೋಗ್ಯ ಕಾಳಜಿಯ ಸಲಹೆಗಳನ್ನು ನೌಕರರಿಗೆ ನೀಡಿದರೂ ದೊಡ್ಡ ಬದಲಾವಣೆಗಳಾಗಿರಲಿಲ್ಲ.

ಕೊನೆಗೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಜೊತೆಗೆ ಕೆಎಸ್‌ಆರ್‌ಟಿಸಿ ಒಡಂಬಡಿಕೆ ಮಾಡಿಕೊಂಡಿತ್ತು. ನೌಕರರಿಗೆ ಇಸಿಜಿ, ಇಸಿಎಚ್‌ಒ, ಟಿಎಂಟಿ, ಎಕ್ಸ್‌–ರೆ ಸೇರಿದಂತೆ ಹೃದಯ ಸಂಬಂಧಿ ಹತ್ತು ಮಾದರಿಯ ವೈದ್ಯಕೀಯ ತಪಾಸಣೆಗಳನ್ನು ಜಯದೇವ ಹೃದ್ರೋಗ ಸಂಸ್ಥೆ ನಡೆಸುವುದು, ಪ್ರತಿ ನೌಕರರ ತಪಾಸಣೆಗೆ ₹ 1,200 ಕೆಎಸ್‌ಆರ್‌ಟಿಸಿ ಪಾವತಿ ಮಾಡುವುದು ಈ ಒಡಂಬಡಿಕೆಯಾಗಿತ್ತು. 

‘ಬಸ್‌ಗಳಲ್ಲಿ ಕೆಲಸ ಮಾಡುವುದು ಎಂದರೆ ಅದು ಕಚೇರಿಗಳಲ್ಲಿ ಕೆಲಸ ಮಾಡುವುದಕ್ಕಿಂತ ಭಿನ್ನವಾದುದು. ಕಾರ್ಯಸ್ವರೂಪ, ಜೀವನಶೈಲಿ ಮತ್ತು ಇತರ ಕಾರಣಗಳಿಂದಾಗಿ ನೌಕರರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ತೀರಾ ಸಾಮಾನ್ಯ. ಇದೇ ಹೃದಯಾಘಾತಕ್ಕೂ ಕಾರಣವಾಗಿದೆ. ನಾಲ್ಕೈದು ಸಾವಿರ ರೂಪಾಯಿ ಖರ್ಚು ಮಾಡಿ ಆರೋಗ್ಯ ತಪಾಸಣೆ ಮಾಡಿಸುವ ಶಕ್ತಿಯೂ ನೌಕರರಿಗೆ ಇರುವುದಿಲ್ಲ. ನಾವು ನಮ್ಮ ನೌಕರರನ್ನು ಉಳಿಸಿಕೊಳ್ಳಬೇಕು. ಈ ಎಲ್ಲ ಕಾರಣದಿಂದ  ಹೃದಯ ತಪಾಸಣೆ ಯೋಜನೆ ಜಾರಿಗೆ ತರಲಾಗಿದೆ. ಬೆಂಗಳೂರು ಮತ್ತು ಮೈಸೂರಿನ ಜಯದೇವ ಆಸ್ಪತ್ರೆಗಳಲ್ಲಿ ನಿಯಮಿತವಾಗಿ ತಪಾಸಣೆಗಳು ನಡೆಯುತ್ತಿವೆ’ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ವಿ. ಅನ್ಬುಕುಮಾರ್ ಮಾಹಿತಿ ನೀಡಿದರು.

ಚಿಕಿತ್ಸಾ ವೆಚ್ಚ ಹೊರತುಪಡಿಸಿ ತಪಾಸಣೆಗೆ ವರ್ಷಕ್ಕೆ ₹ 2.55 ಕೋಟಿ ವೆಚ್ಚವಾಗಲಿದ್ದು, ಕೆಎಸ್‌ಆರ್‌ಟಿಸಿಯೇ ಭರಿಸಲಿದೆ ಎಂದು ತಿಳಿಸಿದರು.

3,526 ಮಂದಿಗೆ ತಪಾಸಣೆ: ಯೋಜನೆ ಜಾರಿಯಾದ 2023ರ ನವೆಂಬರ್‌ನಿಂದ ಇಲ್ಲಿವರೆಗೆ 3,526 ಸಿಬ್ಬಂದಿ ತಪಾಸಣೆ ಮಾಡಿಸಿಕೊಂಡಿದ್ದಾರೆ. ಅದರಲ್ಲಿ 28 ನೌಕರರಿಗೆ ಹೃದಯ ಸಂಬಂಧಿ ಸಮಸ್ಯೆ ಕಂಡು ಬಂದಿತ್ತು. 22 ಮಂದಿಗೆ ರಕ್ತನಾಳಕ್ಕೆ ಸ್ಟಂಟ್‌ ಅಳವಡಿಸಲಾಗಿದೆ. ಆರು ಜನರಿಗೆ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಲಾಗಿದೆ. ಚಿಕಿತ್ಸಾ ವೆಚ್ಚವನ್ನು ಕೂಡಾ ನಿಗಮವೇ ಸಿಜಿಎಚ್‌ಎಸ್‌ ದರದಲ್ಲಿ ಭರಿಸಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದರು.

‘ಎಲ್ಲ ನೌಕರರು ಆರೋಗ್ಯವಂತರಾಗಿರಬೇಕು’

ಆರೋಗ್ಯವಂತ ನೌಕರರೇ ಕೆಎಸ್‌ಆರ್‌ಟಿಸಿಯ ಆಸ್ತಿ. ಎಲ್ಲ ನೌಕರರು ಆರೋಗ್ಯವಂತರಾಗಿ ಕೆಲಸ ಮಾಡಬೇಕು. ಹೃದಯಾಘಾತ ಸಹಿತ ಯಾವುದೇ ಸಾವುನೋವು ಉಂಟಾಗಬಾರದು ಎಂಬುದು ನಮ್ಮ ಕಳಕಳಿ. ಕೆಎಸ್ಆರ್‌ಟಿಸಿ ನೌಕರರಿಗೆ ಹೃದಯ ತಪಾಸಣೆಯು ಪ್ರಮುಖ ಯೋಜನೆಯಾಗಿದ್ದು ಉತ್ತಮ ಪರಿಣಾಮ ಬೀರಿದೆ. ಹೃದಯಾಘಾತ ಪ್ರಮಾಣವನ್ನು ಕಡಿಮೆಗೊಳಿಸಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT