ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಯಲ್ಲಿ ಕೋಮುವಾದಿಗಳ ಸೋಲಿಸಿ: ‘ಜಾಗೃತ ನಾಗರಿಕರು ಕರ್ನಾಟಕ’ ಮನವಿ

Published 5 ಏಪ್ರಿಲ್ 2024, 15:03 IST
Last Updated 5 ಏಪ್ರಿಲ್ 2024, 15:03 IST
ಅಕ್ಷರ ಗಾತ್ರ

ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನರು ವಿವೇಚನೆಯಿಂದ ಮತ ಚಲಾಯಿಸಬೇಕು. ಕೋಮುವಾದಿಗಳನ್ನು ಸೋಲಿಸಬೇಕು ಎಂದು ‘ಜಾಗೃತ ನಾಗರಿಕರು ಕರ್ನಾಟಕ’ ಸಂಘಟನೆಯು ಮನವಿ ಮಾಡಿದೆ.

ದ್ವೇಷ ರಾಜಕಾರಣ ತುಂಬಿ ತುಳುಕುತ್ತಿರುವ ಈ ಹೊತ್ತಿನಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಅಪಾಯದ ಸ್ಥಿತಿಯಲ್ಲಿವೆ. ಬಹುತ್ವ ಭಾರತದ ಸೌಹಾರ್ದಕ್ಕೆ ಧಕ್ಕೆ ಬಂದಿದೆ. ಧರ್ಮ, ಭಾಷೆ, ಜಾತಿಗಳ ಹೆಸರಿನಲ್ಲಿ ಸಮಾಜ ಒಡೆಯಲಾಗುತ್ತಿದೆ ಎಂದು ಹೇಳಿದೆ.

‘ಈ ಬಾರಿಯ ಲೋಕಸಭೆ ಚುನಾವಣೆಯು ಪ್ರಜಾಪ್ರಭುತ್ವದ, ಸಂವಿಧಾನದ ಅಳಿವು, ಉಳಿವಿನ ಚುನಾವಣೆ’ ಎಂದು ‘ಜಾಗೃತ ನಾಗರಿಕರು ಕರ್ನಾಟಕ’ ಸಂಘಟನೆಯ ಕೆ.ಮರುಳಸಿದ್ಧಪ್ಪ, ಜಿ.ರಾಮಕೃಷ್ಣ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಜಾತಿ, ಹಣ, ಹೆಂಡ ಮುಂತಾದ ಆಮಿಷಗಳಿಗೆ ಬಲಿಯಾಗದೇ ದೇಶದ ಭವಿಷ್ಯವನ್ನು, ಪ್ರಗತಿಯ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡು ಮತ ಹಕ್ಕು ಚಲಾಯಿಸಬೇಕು. ಬಡವರಿಗೆ ಸೌಲಭ್ಯ ಒದಗಿಸುವುದನ್ನೇ ಪ್ರಧಾನಿ ನರೇಂದ್ರ ಮೋದಿ ಗೇಲಿ ಮಾಡಿದ್ದರು. ಗೋದಾಮುಗಳಲ್ಲಿ ಧಾನ್ಯ ಕೊಳೆಯುತ್ತಿದ್ದಾಗಲೂ ಅನ್ನಭಾಗ್ಯ ಯೋಜನೆಯಡಿ ವಿತರಿಸಲು ರಾಜ್ಯ ಸರ್ಕಾರಕ್ಕೆ ಅಕ್ಕಿ ಖರೀದಿ ಮಾಡಲೂ ಅವಕಾಶ ನೀಡಲಿಲ್ಲ. ಇಂಥ ಅನ್ನ ಕಂಟಕರನ್ನು ಮತದಾರರು ತಿರಸ್ಕರಿಸಬೇಕು’ ಎಂದು ಹೇಳಿದರು.

‘ನಮ್ಮ ರಾಜ್ಯದ ತೆರಿಗೆ ಪಾಲು, ನಮಗೆ ಬರಬೇಕು. ಇದು, ನಮ್ಮ ಹಕ್ಕು. ಜಿದ್ದಿನ ರಾಜಕಾರಣದಲ್ಲಿ ನಮ್ಮ ಹಕ್ಕನ್ನು ಕಸಿಯುತ್ತಿರುವವರ ವಿರುದ್ಧ ನಾವು ನಿಲ್ಲಬೇಕು. ದೇಶದ ರೈತರ ಬೆನ್ನು ಮೂಳೆ ಮುರಿಯುವ ಕರಾಳ ಕೃಷಿ ಕಾನೂನು ತಂದಾಗ ಅದನ್ನು ವಿರೋಧಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ರೈತರ ಮೇಲೆ ದಬ್ಬಾಳಿಕೆ, ದಾಳಿಗಳನ್ನು ಕೇಂದ್ರ ಸರ್ಕಾರ ಮಾಡಿತ್ತು. ಇಂಥವರು ಮತ್ತೆ ಅಧಿಕಾರಕ್ಕೆ ಬಂದರೆ ಉಣ್ಣುವ ಅನ್ನಕ್ಕೂ ತತ್ವಾರವಾದೀತು’ ಎಂದು ಸಂಘಟನೆಯ ಸದಸ್ಯರಾದ ಎಸ್‌.ಜಿ. ಸಿದ್ದರಾಮಯ್ಯ, ಜಾಣಗೆರೆ ವೆಂಕಟರಾಮಯ್ಯ ಆತಂಕ ವ್ಯಕ್ತಪಡಿಸಿದರು.

ಬೇಟಿ ಬಚಾವೋ, ಬೇಟಿ ಪಢಾವೋ ಎಂದವರು ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿ ಲೈಂಗಿಕ ದೌರ್ಜನ್ಯ ಎಸಗಿದರೂ, ಕೊಲೆ ಮಾಡಿದರೂ ಸುಮ್ಮನಿದ್ದರು. ಕುಸ್ತಿಪಟುಗಳ ಮೇಲೆ ಬಿಜೆಪಿಯ ಸಂಸದರಿಂದಲೇ ಅತ್ಯಾಚಾರ ನಡೆದ ಆರೋಪ ಬಂದಾಗಲೂ ಮಹಿಳಾ ಕುಸ್ತಿಪಟುಗಳನ್ನು ರಕ್ಷಿಸಲಿಲ್ಲ. ಚುನಾವಣಾ ಬಾಂಡ್‌ ಎಂಬ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿರುವ ಬಿಜೆಪಿಯನ್ನು ಸೋಲಿಸಬೇಕು ಎಂದು ವಿಮಲಾ ಕೆ.ಎಸ್‌. ಅವರು ಮನವಿ ಮಾಡಿದರು.

‘ಜಾಗೃತ ನಾಗರಿಕರು ಕರ್ನಾಟಕ’ ಸಂಘಟನೆಯ ರುದ್ರಪ್ಪ ಹನಗವಾಡಿ, ಬಿ. ಶ್ರೀಪಾದ ಭಟ್‌, ವಸುಂಧರಾ ಭೂಪತಿ, ಟಿ. ಸುರೇಂದ್ರ ರಾವ್‌, ಬಂಜಗೆರೆ ಜಯಪ್ರಕಾಶ್‌, ದಿನೇಶ್‌ ಅಮಿನ್‌ ಮಟ್ಟು ಅವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT