ಗುರುವಾರ , ಆಗಸ್ಟ್ 18, 2022
25 °C

ಕೆಂಗೇರಿ ವಾರ್ಡ್: ಮರು ಸೇರ್ಪಡೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಂಗೇರಿ: ಬಿಬಿಎಂಪಿ ವಾರ್ಡ್ ಮರು ವಿಂಗಡಣೆಯಲ್ಲಿ ಕೈಬಿಟ್ಟಿರುವ ಕೆಂಗೇರಿ ವಾರ್ಡ್ ಹೆಸರನ್ನು ಮರು ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿ ಕೆಂಗೇರಿ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ಸಹಕಾರ ಸಚಿವ ಸೋಮಶೇಖರ್ ಅವರಿಗೆ ಮನವಿ ಸಲ್ಲಿಸಿದರು.

ಮರು ವಿಂಗಡಣೆ ಹೆಸರಿನಲ್ಲಿ ಐತಿಹಾಸಿಕ ಹಿನ್ನೆಲೆಯುಳ್ಳ ಪ್ರದೇಶಗಳನ್ನು ಇತರೆ ವಾರ್ಡ್‌ಗಳಲ್ಲಿ ವಿಲೀನ
ಗೊಳಿಸುವುದು ಅಸಮಂಜಸ. ಸುಮಾರು 400 ವರ್ಷಗಳ ಇತಿಹಾಸ ಹೊಂದಿರುವ ಕೆಂಗೇರಿಯನ್ನು ಬಂಡೆ ಮಠ ಹಾಗೂ ಕೆಂಗೇರಿ ಉಪನಗರ ವಾರ್ಡ್ ಹೆಸರಿನಲ್ಲಿ ವಿಲೀನಗೊಳಿಸಲಾಗಿದೆ. ಸ್ವಾತಂತ್ರ್ಯ ಹೋರಾಟ ಸಮಯದಲ್ಲಿ ಮಹಾತ್ಮ ಗಾಂಧಿ ಅವರು ಕೆಂಗೇರಿಗೆ ಭೇಟಿ ನೀಡಿದ್ದರು. ಇಲ್ಲಿನ ವಿದ್ಯಾಪೀಠದಲ್ಲಿನ ತೆರೆದ ಬಾವಿಗೆ ಪೂಜೆ ಸಲ್ಲಿಸಿದ್ದರು. ಮೈಸೂರಿನ ಅರಸರು ಬೆಂಗಳೂರಿಗೆ ಭೇಟಿ ನೀಡುವ ವೇಳೆ ಇಲ್ಲಿ ತಂಗುತ್ತಿದ್ದರು. ಇಂತಹ ಐತಿಹಾಸಿಕ ಹಿನ್ನೆಲೆಯುಳ್ಳ ಪ್ರದೇಶವನ್ನು ಬೇರೆ ವಾರ್ಡಿನಲ್ಲಿ ವಿಲೀನಗೊಳಿಸುವುದು ಸ್ಥಳದ ಐತಿಹಾಸಿಕ ಮಹತ್ವಕ್ಕೆ ತೋರುತ್ತಿರುವ ಅಗೌರವ ಎಂದು ಬೇಸರ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ತಮ್ಮ ಅವಧಿಯಲ್ಲಿ ಕೆಂಗೇರಿಯನ್ನು ‘ಗೇಟ್ ವೇ ಆಫ್ ಬೆಂಗಳೂರು’ ಎಂದು ನಾಮಕರಣ ಮಾಡುವ ಕನಸು ಹೊಂದಿದ್ದರು. ಐತಿಹಾಸಿಕ ಕೆಂಗೇರಿ ಕರಗ, ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು ಓದಿದ ಶಾಲೆ, ಗಾಂಧಿ ಅವರಿಂದ ಶಿಲಾನ್ಯಾಸಗೊಂಡ ಕೆಂಗೇರಿ ಮಾರುಕಟ್ಟೆ ಮೊದಲಾದ ಐತಿಹಾಸಿಕ ಸ್ಥಳವನ್ನು ಹೊಂದಿದ್ದರೂ ಕೆಂಗೇರಿಯು ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ತನ್ನ ಮೂಲ ಹೆಸರು ಕಳೆದುಕೊಳ್ಳುವ ಆತಂಕ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂಚಾಲಕ ಜೆ.ರಮೇಶ್ ಮಾತನಾಡಿ, ಈ ಗೋಜಲನ್ನು ಸರ್ಕಾರ ಕೂಡಲೇ ಸರಿ ಪಡಿಸಬೇಕು ಎಂದು ಒತ್ತಾಯಿಸಿದರು.

ಕೆಂಗೇರಿಯ ಐತಿಹಾಸಿಕ ಮಹತ್ವವನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಎಸ್.ಟಿ.ಸೋಮಶೇಖರ್ ಪ್ರತಿಕ್ರಿಯಿಸಿದರು. ಸಹ ಸಂಚಾಲಕ ಟಿ.ಪ್ರಭಾಕರ್ ಹಾಗೂ ಕೆ.ಆರ್.ಮೂರ್ತಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು