ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಹೋರಾಟದ ಹಕ್ಕಿಗಾಗಿ ಆಗ್ರಹಿಸಿ ಅ.2ರಂದು ಪ್ರತಿಭಟನೆ

Published 20 ಸೆಪ್ಟೆಂಬರ್ 2023, 14:28 IST
Last Updated 20 ಸೆಪ್ಟೆಂಬರ್ 2023, 14:28 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತಿಭಟನೆಗಳನ್ನು ಸ್ವಾತಂತ್ರ್ಯ ಉದ್ಯಾನಕ್ಕೆ ಮಾತ್ರ ಸೀಮಿತಗೊಳಿಸಿರುವುದನ್ನು ವಿರೋಧಿಸಿ ಅಕ್ಟೋಬರ್‌ 2ರಂದು ಎಂ.ಜಿ. ರಸ್ತೆಯ ಗಾಂಧಿ ಪ್ರತಿಮೆಯಿಂದ ವಿಧಾನಸೌಧದ ಮುಂಭಾಗದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್‌ ಪ್ರತಿಮೆವರೆಗೂ ಪ್ರತಿಭಟನಾ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟದ ಹಕ್ಕಿಗಾಗಿ ಜನಾಂದೋಲನ ಸಮಿತಿ ತಿಳಿಸಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸದಸ್ಯ ಹಾಗೂ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ‘ಹಿಂದಿನ ಬಿಜೆಪಿ ಸರ್ಕಾರ ತೆಗೆದುಕೊಂಡ ನಿರ್ಧಾರದಿಂದ ಬೆಂಗಳೂರಿನಲ್ಲಿ ಪ್ರತಿಭಟಿಸುವ ಹಕ್ಕನ್ನು ಕಳೆದುಕೊಂಡಿದ್ದೇವೆ. ಕಳೆದ ಒಂದೂವರೆ ವರ್ಷದಿಂದ ಪೊಲೀಸರು ಸ್ವಾತಂತ್ರ್ಯ ಉದ್ಯಾನ ಹೊರತುಪಡಿಸಿ ಬೇರೆ ಯಾವುದೇ ಸ್ಥಳದಲ್ಲಿ ಪ್ರತಿಭಟನೆ, ಸಾರ್ವಜನಿಕ ಸಭೆ ಮತ್ತು ಮೆರವಣಿಗೆಗಳಿಗೆ ಅನುಮತಿ ನಿರಾಕರಿಸುತ್ತಿದ್ದಾರೆ. ಇದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ’ ಎಂದು ದೂರಿದರು.

ರೈತ ಸಂಘದ ಕಾರ್ಯಧ್ಯಕ್ಷ ವೀರಸಂಗಯ್ಯ, ‘ಹೈಕೋರ್ಟ್‌ ಆದೇಶದಂತೆ ಬೆಂಗಳೂರು ನಗರದಲ್ಲಿ ಪ್ರತಿಭಟನೆ ಮತ್ತು ಮೆರವಣಿಗೆಗಳಿಗೆ ನಿರ್ಬಂಧ ಹೇರಲಾಗಿದೆ ಎಂದು ಸುಳ್ಳು ಹೇಳಲಾಗುತ್ತಿದೆ. ಆದರೆ, 2021ರಲ್ಲಿ ಅಂದಿನ ಬೆಂಗಳೂರು ನಗರ ಪೊಲೀಸ್‌ ಆಯುಕ್ತರು ಪ್ರತಿಭಟನೆ, ಪ್ರದರ್ಶನ ಮೆರವಣಿಗೆಗಳನ್ನು ಸ್ವಾತಂತ್ರ್ಯ ಉದ್ಯಾನದಲ್ಲಿ ಮಾತ್ರ ಮಾಡಬೇಕೆಂಬ ಪ್ರಜಾಪ್ರಭುತ್ವ ವಿರೋಧಿ ಆದೇಶ ಹೊರಡಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು. 

ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾದ ರಾಜ್ಯ ಘಟಕದ ಅಧ್ಯಕ್ಷ ಮೋಹನ್‌ ರಾಜ್, ಅಖಿಲ ಭಾರತ ವಕೀಲರ ಸಂಘದ ಅಧ್ಯಕ್ಷೆ ಮೈತ್ರೇಯಿ ಮಾತನಾಡಿದರು. ಲೇಖಕಿ ಬಿ.ಟಿ. ಲಲಿತಾ ನಾಯಕ್, ಕಾರ್ಮಿಕ ಸಂಘಗಳ ಜಂಟಿ ಒಕ್ಕೂಟದ ಸಂಚಾಲಕ ಕೆ.ವಿ. ಭಟ್, ಅಖಿಲ ಭಾರತ ವಿದ್ಯಾರ್ಥಿಗಳ ಸಂಘದ ಶ್ರೀಗಂಗಾ, ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್‌ನ ಮಹಮ್ಮದ್ ಪೀರ್ ಲೋಟಗೇರಿ, ಫ್ರೈಡೇಸ್ ಫಾರ್ ಫ್ಯೂಚರ್‌ನ ನಿಷ್ಕಲಾ ಪಿ., ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT