ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡ ಸಾಹಿತ್ಯಕ್ಕೆ ಹೊಸ ಬೆಳಕಿನ ದಿಕ್ಕು ತೋರುವ ಮಾಲೆ’

ಸಾಹಿತಿ ಎಚ್‌.ಎಸ್‌.ವೆಂಕಟೇಶಮೂರ್ತಿ ಅಭಿಮತ 
Last Updated 23 ಮೇ 2022, 19:17 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಹೊರತಂದಿರುವ ‘ದೇಸಿ ದರ್ಶನ ಮಾಲೆ’ಯುಕನ್ನಡ ಸಾಹಿತ್ಯಕ್ಕೆ ಹೊಸ ಬೆಳಕಿನ ದಿಕ್ಕುಗಳನ್ನು ತೋರಿಸುತ್ತದೆ. ಮಹಾಕವಿಗಳ ಬಗೆಗಿನ ಓದುಗರ ಗ್ರಹಿಕೆಯನ್ನು ಮತ್ತಷ್ಟು ಹೆಚ್ಚಿಸಲು ನೆರವಾಗುತ್ತದೆ’ ಎಂದು ಸಾಹಿತಿ ಎಚ್‌.ಎಸ್‌.ವೆಂಕಟೇಶಮೂರ್ತಿ ತಿಳಿಸಿದರು.

‘ದೇಸಿ ದರ್ಶನ ಮಾಲೆ’ಯಡಿ ರಚಿತವಾಗಿರುವ ಏಳು ಕೃತಿಗಳನ್ನು ಬಿಡುಗಡೆ ಮಾಡಿ ಸೋಮವಾರ ಮಾತನಾಡಿದರು.

‘ಅಲಕ್ಷಿತವಾಗಿದ್ದ ವಿದ್ವತ್‌ ಪರಂಪರೆಯನ್ನು ಮತ್ತೆ ಉಜ್ಜೀವಿಸುವ ಪ್ರಯತ್ನ ಈ ಕೃತಿಗಳ ಮೂಲಕ ಸದ್ದಿಲ್ಲದೆ ಆಗಿದೆ. ಏಳು ಪುಸ್ತಕಗಳನ್ನೂತಿರುವಿ ಹಾಕಿದಾಗ ನಿಗೂಢವಾದ ನಿಕ್ಷೇಪವೊಂದು ಒಮ್ಮೆಗೆ ಪತ್ತೆಯಾದ ಅನುಭವವಾಗುತ್ತದೆ. ವಿಶಿಷ್ಟ ಮಾಹಿತಿಗಳನ್ನು ಒಳಗೊಂಡಿರುವ ಈ ಪುಸ್ತಕಮಾಲೆ ಅಪರೂಪವಾದುದು’ ಎಂದರು.

‘ತತ್ವದ ಮೂಲಕ ಕಾವ್ಯವೊ, ಕಾವ್ಯದ ಮೂಲಕ ತತ್ವವೊ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನೂ ಈ ಮಾಲೆ ಮಾಡುತ್ತದೆ’ ಎಂದು ಹೇಳಿದರು.

‘ಈ ಪುಸ್ತಕಗಳನ್ನು ಓದಿದಾಗ ದೇಸಿ ದರ್ಶನಗಳ ಕುರಿತು ಇಷ್ಟು ಆಳವಾಗಿ ಆಲೋಚನೆ ಮಾಡುವ ಪ್ರತಿಭಾಶಾಲಿಗಳು ನಮ್ಮಲ್ಲಿ ಇದ್ದಾರೆಯೇ ಎಂಬ ಅಚ್ಚರಿ ಮೂಡುತ್ತದೆ. ಏಳು ಮಂದಿ ಲೇಖಕರೂ ಹೊಸ ಹೊಸ ವಿಚಾರಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಹೊಸ ಪರಂಪರೆಯನ್ನು ಕಟ್ಟುವ ಸಾಮರ್ಥ್ಯ ನಮ್ಮ ಹೊಸ ಲೇಖಕರಲ್ಲಿ ಇದೆ ಎಂಬುದನ್ನೂ ಈ ಕೃತಿಗಳು ಸಾಬೀತುಪಡಿಸುತ್ತವೆ’ ಎಂದು ತಿಳಿಸಿದರು.

‘ಕೆಲವು ಗ್ರಂಥಗಳ ಅಚ್ಚಿನಲ್ಲಿ ದೋಷಗಳು ಇವೆ. ಕೆಲ ಹಾಳೆಗಳು ಪುನರಾವರ್ತನೆಯಾಗಿವೆ. ಒಂದು ಪುಸ್ತಕದ ಹಾಳೆ ಮತ್ತೊಂದು ಪುಸ್ತಕದಲ್ಲಿ ಅಚ್ಚಾಗಿದೆ. ಈ ತಾಂತ್ರಿಕ ದೋಷಗಳನ್ನು ತಿದ್ದಿ ಶುದ್ಧ ಪ್ರತಿಗಳನ್ನು ಮಾರುಕಟ್ಟೆಗೆ ಬಿಡಬೇಕು’ ಎಂದು ಸಲಹೆ ನೀಡಿದರು.

ಮಾಲೆಯ ಯೋಜನಾ ಸಂಪಾದಕಮಲ್ಲೇಪುರಂ ಜಿ.ವೆಂಕಟೇಶ್‌, ‘ವ್ಯಾಸ ಪಂಥದ ಕುರಿತ ಕೃತಿಯು ಮೂರು ಬಗೆಯ ಓದಿಗೆ ಅನುಕೂಲವಾಗುತ್ತದೆ. ಸಂಶೋಧನೆಯಲ್ಲಿ ತೊಡಗಿರುವವರಿಗೆ ಈ ಮಾಲೆ ಅಗತ್ಯ ಮಾರ್ಗದರ್ಶನ ಮಾಡುತ್ತದೆ. ಚರಿತ್ರೆ ಅಭ್ಯಾಸ ಮಾಡುವವರಿಗೆ ಹಾಗೂ ಸಮಾಜ ವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೂ ಹೆಚ್ಚು ಉಪಯುಕ್ತವಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT