ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿಡಿಆರ್’ ಅಕ್ರಮ: ಪತ್ತೆದಾರಿ ಏಜೆನ್ಸಿ ಮೇಲೆ ದಾಳಿ

ಜನರ ಮೊಬೈಲ್ ಕರೆಗಳ ವಿವರ ಮಾರಾಟ ಜಾಲ: ಸಿಸಿಬಿ ಪೊಲೀಸರ ಕಾರ್ಯಾಚರಣೆ: ಹತ್ತು ಮಂದಿ ಬಂಧನ
Published 28 ಮೇ 2024, 23:13 IST
Last Updated 28 ಮೇ 2024, 23:13 IST
ಅಕ್ಷರ ಗಾತ್ರ

ಬೆಂಗಳೂರು: ಸಾರ್ವಜನಿಕರ ಮೊಬೈಲ್ ಕರೆ ವಿವರಗಳನ್ನು (ಸಿಡಿಆರ್) ಅಕ್ರಮವಾಗಿ ಸಂಗ್ರಹಿಸಿ ಕಾನೂನು ಬಾಹಿರ ಚಟುವಟಿಕೆ ನಡೆಸುವವರಿಗೆ ನೀಡುತ್ತಿದ್ದ ಜಾಲ ಭೇದಿಸಿರುವ ಸಿಸಿಬಿ ಪೊಲೀಸರು, ನಗರದ ಮೂರು ಪತ್ತೆದಾರಿ ಏಜೆನ್ಸಿಗಳ ಕಚೇರಿ ಮೇಲೆ ದಾಳಿ ಮಾಡಿದ್ದಾರೆ.

‘ಗೋವಿಂದರಾಜನಗರ ಬಳಿಯ ಪ್ರಶಾಂತನಗರದಲ್ಲಿರುವ ‘ಮಹಾನಗರಿ ಡಿಟೆಕ್ಟಿವ್’, ‘ರಾಜಧಾನಿ ಕಾರ್ಪೊರೇಟ್ ಸರ್ವೀಸ್’ ಹಾಗೂ ಬಸವೇಶ್ವರನಗರದಲ್ಲಿರುವ ‘ಎಲಿಗೆಂಟ್ ಡಿಟೆಕ್ಟಿವ್’ ಏಜೆನ್ಸಿಗಳ ಮೇಲೆ ಇತ್ತೀಚೆಗೆ ದಾಳಿ ಮಾಡಲಾಗಿದೆ. ಏಜೆನ್ಸಿಗಳ ಮಾಲೀಕರು ಸೇರಿ ಹತ್ತು ಮಂದಿಯನ್ನು ಬಂಧಿಸಲಾಗಿದೆ’ ಎಂದು ಸಿಸಿಬಿ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಂಗೇರಿ ಉಪನಗರದ ಪುರುಷೋತ್ತಮ್ (43), ಮಾರತ್ತಹಳ್ಳಿಯ ಜಿ.ಕೆ. ತಿಪ್ಪೇಸ್ವಾಮಿ (48), ಅಂಜನಾನಗರದ ಮಹಾಂತಗೌಡ ಪಾಟೀಲ (46), ವಿಜಯನಗರದ ರೇವಂತ್ (25), ಅಡಕಮಾರನಹಳ್ಳಿಯ ಗುರುಪಾದಸ್ವಾಮಿ (38), ವಿಜಿನಾಪುರದ ಎಸ್. ರಾಜಶೇಖರ್ (32), ಮಹಾರಾಷ್ಟ್ರ ಪುಣೆಯ ಪ್ರಸನ್ನ ದತ್ತಾತ್ರೇಯ ಗರುಡಾ (36), ಕೊತ್ತನೂರು ದಿಣ್ಣೆಯ ಜೆ. ಸತೀಶ್‌ಕುಮಾರ್ (39), ಜೆ.ಸಿ. ನಗರದ ವಿ. ಶ್ರೀನಿವಾಸ್ (46) ಹಾಗೂ ಕುರುಬರಹಳ್ಳಿಯ ಕೆ.ಬಿ. ಭರತ್ (28) ಬಂಧಿತರು. ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಹೇಳಿದರು.

ವ್ಯವಸ್ಥಿತ ಜಾಲ: ‘ಆರೋ‍ಪಿ ಪುರುಷೋತ್ತಮ್, ರಾಜಧಾನಿ ಕಾರ್ಪೊರೇಷನ್ ಏಜೆನ್ಸಿ ಮಾಲೀಕ. ಮಹಾನಗರಿ ಡಿಟೆಕ್ಟಿವ್ ಏಜೆನ್ಸಿಯನ್ನು ಸತೀಶ್‌ಕುಮಾರ್ ಎಂಬಾತ ನಡೆಸುತ್ತಿದ್ದ. ಶ್ರೀನಿವಾಸ್ ಎಂಬಾತ ಎಲಿಗೆಂಟ್ ಡಿಟೆಕ್ಟಿವ್ ಏಜೆನ್ಸಿ ತೆರೆದಿದ್ದ. ಮೂವರು ಸಿಬ್ಬಂದಿಯನ್ನು ನೇಮಿಸಿಕೊಂಡು ಏಜೆನ್ಸಿ ನಿರ್ವಹಣೆ ಮಾಡುತ್ತಿದ್ದರು’ ಎಂದು ಅಧಿಕಾರಿ ತಿಳಿಸಿದರು.

‘ಏಜೆನ್ಸಿ ಮಾಲೀಕರು ಹಾಗೂ ಸಿಬ್ಬಂದಿ, ಸಾರ್ವಜನಿಕರ ಸಿಡಿಆರ್ ಅಕ್ರಮವಾಗಿ ಸಂಗ್ರಹಿಸುತ್ತಿದ್ದರು. ಹೆಚ್ಚು ಹಣ ನೀಡುತ್ತಿದ್ದವರಿಗೆ ಸಿಡಿಆರ್ ಕೊಡುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಹೇಳಿದರು.

‘ಆರೋಪಿ ಸತೀಶ್, ಈ ಹಿಂದೆ ರಾಜಧಾನಿ ಕಾರ್ಪೊರೇಷನ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ. ಕೆಲ ತಿಂಗಳ ಹಿಂದೆಯಷ್ಟೇ ಅಲ್ಲಿಯ ಕೆಲಸ ಬಿಟ್ಟಿದ್ದ ಈತ, ಮಹಾನಗರಿ ಡಿಟೆಕ್ಟಿವ್ ಏಜೆನ್ಸಿ ಆರಂಭಿಸಿದ್ದ. ಜನರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪದಡಿ ಈತನ ವಿರುದ್ಧ ಹಲವು ಠಾಣೆಗಳಲ್ಲಿ ದೂರುಗಳು ಬಾಕಿ ಇದ್ದು, ಈ ಬಗ್ಗೆ ಪರಿಶೀಲಿಸಲಾಗುತ್ತಿದೆ’ ಎಂದು ತಿಳಿಸಿದರು.

ಪೊಲೀಸರೂ ಭಾಗಿ ಶಂಕೆ: ‘ಅಪರಾಧ, ಕೌಟುಂಬಿಕ ಕಲಹ, ವೈಷಮ್ಯ, ಹಣಕಾಸು ವ್ಯವಹಾರ ಸೇರಿದಂತೆ ಹಲವು ಬಗೆಯ ಪ್ರಕರಣಗಳ ದೂರುದಾರರು ಹಾಗೂ ಸಂತ್ರಸ್ತರನ್ನು ಆರೋಪಿಗಳು ಸಂಪರ್ಕಿಸುತ್ತಿದ್ದರು. ಪೊಲೀಸರು ಮಾಡುವ ಕೆಲಸವನ್ನು ತಾವೇ ಮಾಡಿಕೊಡುವುದಾಗಿ ಹೇಳಿ ನಂಬಿಸುತ್ತಿದ್ದರು. ಆಂತರಿಕ ತನಿಖೆ ನಡೆಸಿ ಪುರಾವೆ ಸಮೇತ ವರದಿ ನೀಡುವುದಾಗಿ ಹೇಳುತ್ತಿದ್ದರು. ಇದಕ್ಕಾಗಿ ಶುಲ್ಕ ಸಹ ನಿಗದಿಪಡಿಸಿದ್ದರು’ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

‘ಪ್ರಕರಣಕ್ಕೆ ಸಂಬಂದಪಟ್ಟ ವ್ಯಕ್ತಿಗಳ ಮೊಬೈಲ್ ನಂಬರ್ ಸಂಗ್ರಹಿಸುತ್ತಿದ್ದ ಆರೋಪಿಗಳು, ಕೆಲವರ ಸಹಾಯದಿಂದ ಸಿಡಿಆರ್ ಪಡೆದುಕೊಳ್ಳುತ್ತಿದ್ದರು. ತಮ್ಮ ಗ್ರಾಹಕರಿಗೆ ಅದೇ ಸಿಡಿಆರ್‌ ನೀಡುತ್ತಿದ್ದರು. ಅದನ್ನು ಬಳಸಿಕೊಂಡು ಹಲವರು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದರು. ಕೆಲವರು, ಸಿಡಿಆರ್ ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರೆಂಬ ಬಗ್ಗೆಯೂ ಮಾಹಿತಿ ಇದೆ’ ಎಂದು ಅಧಿಕಾರಿ ವಿವರಿಸಿದರು.

‘ಸಿಡಿಆರ್ ಸಂಗ್ರಹಕ್ಕೆ ಸಂಬಂಧಪಟ್ಟಂತೆ ಕಠಿಣ ನಿಯಮವಿದೆ. ಯಾವುದೇ ಪ್ರಕರಣವಿದ್ದರೂ ದಿಢೀರ್ ಸಿಡಿಆರ್ ಸಂಗ್ರಹಿಸಲು ಸಾಧ್ಯವಿಲ್ಲ. ಅಧಿಕಾರಿಗಳ ಅನುಮತಿ ಬೇಕಾಗಿರುತ್ತದೆ. ಆದರೆ, ಆರೋಪಿಗಳು ಪೊಲೀಸ್ ಇಲಾಖೆಯಲ್ಲಿರುವ ಕೆಲವರ ಜೊತೆ ಒಡನಾಟವಿಟ್ಟುಕೊಂಡು ಸಿಡಿಆರ್ ಪಡೆದಿರುವ ಮಾಹಿತಿ ಇದೆ. ಪ್ರಕರಣದಲ್ಲಿ ಭಾಗಿಯಾಗಿರುವ ಪೊಲೀಸರು ಯಾರು? ಯಾವ ರೀತಿಯಲ್ಲಿ ಸಿಡಿಆರ್ ಸಂಗ್ರಹಿಸಲಾಗುತ್ತಿತ್ತು? ಎಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಅಧಿಕಾರಿ ಹೇಳಿದರು.

‘ಬಂಧಿತ ಆರೋಪಿಗಳು, ಸಿಡಿಆರ್ ನೀಡಲು ₹10 ಸಾವಿರದಿಂದ ₹ 25 ಸಾವಿರದವರೆಗೂ ಹಣ ಪಡೆದಿರುವ ಅನುಮಾನವಿದೆ. ಎಲ್ಲ ಬ್ಯಾಂಕ್ ಖಾತೆ ವಿವರ ಹಾಗೂ ವಹಿವಾಟು ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದರು.

ಏಜೆನ್ಸಿ ಪರವಾನಗಿ ಪರಿಶೀಲನೆ: ‘ಮಹಾನಗರಿ ಡಿಟೆಕ್ಟಿವ್’, ‘ರಾಜಧಾನಿ ಕಾರ್ಪೊರೇಟ್ ಸರ್ವೀಸ್’ ಹಾಗೂ ‘ಎಲಿಗೆಂಟ್ ಡಿಟೆಕ್ಟಿವ್’ ಏಜೆನ್ಸಿಗಳು ಸರ್ಕಾರದಿಂದ ಯಾವುದೇ ಪರವಾನಗಿ ಪಡೆದಿಲ್ಲವೆಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಬಗ್ಗೆ ಖಚಿತ ಮಾಹಿತಿ ತಿಳಿಯಲು ಆಂತರಿಕ ಭದ್ರತಾ ವಿಭಾಗದ (ಐಎಸ್‌ಸಿ) ಅಧಿಕಾರಿಗಳಿಂದ ಮಾಹಿತಿ ಕೋರಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.

43 ಮಂದಿ ಸಿಡಿಆರ್ ಪತ್ತೆ ‘ಮಹಾನಗರಿ ಡಿಟೆಕ್ಟಿವ್’ ‘ರಾಜಧಾನಿ ಕಾರ್ಪೊರೇಟ್ ಸರ್ವೀಸ್’ ಹಾಗೂ ‘ಎಲಿಗೆಂಟ್ ಡಿಟೆಕ್ಟಿವ್’ ಏಜೆನ್ಸಿಗಳ ಕಚೇರಿ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ 43 ಜನರ ಸಿಡಿಆರ್ ಪ್ರತಿಗಳು ಸಿಕ್ಕಿವೆ. ಪ್ರತಿಯೊಬ್ಬರಿಂದಲೂ ಮಾಹಿತಿ ಪಡೆಯಲಾಗುತ್ತಿದೆ. ಸಿಡಿಆರ್ ಉದ್ದೇಶವೇನು? ಎಂಬುದನ್ನು ಪತ್ತೆ ಮಾಡಬೇಕಿದೆ’ ಎಂದು ಪೊಲೀಸರು ಹೇಳಿದರು.

ಏನಿದು ಸಿಡಿಆರ್ ?

ಮೊಬೈಲ್ ಬಳಕೆದಾರರ ಕರೆ ವಿವರಗಳ ಸಂಪೂರ್ಣ ಮಾಹಿತಿಯನ್ನು ಸಿಡಿಆರ್‌ ಒಳಗೊಂಡಿರುತ್ತದೆ. ಯಾರು ? ಯಾರಿಗೆ ? ಯಾವ ಸಮಯದಲ್ಲಿ ಕರೆ ಮಾಡಿದ್ದರು. ಎಷ್ಟು ಸಮಯ ಮಾತನಾಡಿದ್ದರು ? ಎಂಬುದು ಉಲ್ಲೇಖವಾಗಿರುತ್ತದೆ. ಪ್ರಕರಣಗಳ ತನಿಖೆ ಸಂದರ್ಭದಲ್ಲಿ ಮಾತ್ರ ಅನುಮಾನಾಸ್ಪದ ವ್ಯಕ್ತಿಗಳ ಸಿಡಿಆರ್ ಪರಿಶೀಲಿಸಲು ಪೊಲೀಸರಿಗೆ ಅವಕಾಶವಿದೆ. ಅವರು ಸಹ ಕೆಲ ನಿಯಮಗಳನ್ನು ಪಾಲಿಸಬೇಕು. ಅವರನ್ನು ಹೊರತುಪಡಿಸಿ ಸಿಡಿಆರ್ ಸಂಗ್ರಹಿಸಿದರೆ ಅಪರಾಧವಾಗುತ್ತದೆ’ ಎಂದು ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಭರತ್
ಭರತ್
ರೇವಂತ್
ರೇವಂತ್
ತಿಪ್ಪೇಸ್ವಾಮಿ
ತಿಪ್ಪೇಸ್ವಾಮಿ
ಶ್ರೀನಿವಾಸ್
ಶ್ರೀನಿವಾಸ್
ಗುರುಪಾದಸ್ವಾಮಿ
ಗುರುಪಾದಸ್ವಾಮಿ
ಪುರುಷೋತ್ತಮ್
ಪುರುಷೋತ್ತಮ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT