ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಾಜದೆಡೆ ವಾತ್ಸಲ್ಯಪೂರ್ಣ ಹೃದಯವಂತಿಕೆ ಬೆಳೆಸಿಕೊಳ್ಳಿ’

Last Updated 15 ಜೂನ್ 2021, 21:38 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಷ್ಟ್ರದ ಹಿತದ ಎದುರು ವೈಯಕ್ತಿಕ ಮೌಲ್ಯಗಳ ನೆರಳು ಕೂಡ ಸುಳಿಯಬಾರದು.ಅನೈಕ್ಯದ ಕಾರಣದಿಂದಾಗಿ ಕುಟುಂಬ ಹಾಗೂ ಸಮಾಜ ಸೋಲುತ್ತದೆ. ನಾನು, ನನ್ನದು ಎಂಬ ಸ್ವಾರ್ಥದ ಪರಿಧಿಯನ್ನು ರಾಷ್ಟ್ರಮಟ್ಟಕ್ಕೆ ವಿಸ್ತರಿಸುವುದೇ ಸಮಾಜ ಯೋಗ’ ಎಂದು ವಿಯೆಟ್ನಾಂನ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕ ಜಿ.ಬಿ.ಹರೀಶ್‌ ತಿಳಿಸಿದರು.

ರಾಷ್ಟ್ರೋತ್ಥಾನ ಪರಿಷತ್‌, 7ನೇ ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ದಿಶಾ ಭಾರತ್‌ ಮತ್ತು ಯೂತ್‌ ಫಾರ್‌ ಸೇವಾ ಸಹಯೋಗದಲ್ಲಿ ಹಮ್ಮಿಕೊಂಡಿರುವ ಆನ್‌ಲೈನ್‌ ಉಪನ್ಯಾಸ ಸರಣಿಯಲ್ಲಿ ಮಂಗಳವಾರ ‘ಸಮಾಜ ಯೋಗ’ ವಿಷಯದ ಕುರಿತು ಮಾತನಾಡಿದರು.

‘ಜೀವನದಲ್ಲಿ ಮೌಲ್ಯಗಳ ಸಂಘರ್ಷ ಎದುರಾಗುತ್ತದೆ. ಅಂತಹ ಸಮಯದಲ್ಲಿ ಯಾವ ಮೌಲ್ಯ ಶ್ರೇಷ್ಠ ಎಂಬುದನ್ನು ನಾವೇ ನಿರ್ಧರಿಸಬೇಕು.ಸಮಾಜದೆಡೆಗೆ ವಾತ್ಸಲ್ಯಪೂರ್ಣವಾದ ಹೃದಯ ಬೆಳೆಸಿಕೊಳ್ಳಬೇಕು’ ಎಂದರು.

ಹೊ.ವೆ.ಶೇಷಾದ್ರಿ ಅವರ ‘ಸಮಾಜ ಯೋಗ’ ಪುಸ್ತಕದ ಆಧಾರದಲ್ಲಿ ಮಾತನಾಡಿದ ಅವರು ‘ಅಗತ್ಯಕ್ಕಿಂತಲೂ ಹೆಚ್ಚು ಕೊಂಡುಕೊಳ್ಳುವ ಮನಸ್ಥಿತಿ ನಮ್ಮ ಜನರಲ್ಲಿದೆ. ಕೊಳ್ಳುಬಾಕತನದಿಂದ ಅಶಾಂತಿ ನಿರ್ಮಾಣವಾಗುತ್ತದೆ. ಇದು ಮನುಷ್ಯನನ್ನು ಮಾನಸಿಕ ಅಸಮತೋಲನ ಪರಿಸ್ಥಿತಿಗೆ ದೂಡುತ್ತದೆ.ದೇಹ, ಮನಸ್ಸನ್ನು ಕಟ್ಟುವುದು, ಕುಟುಂಬಗಳ ನಡುವಣ ತಾಕಲಾಟವನ್ನು ಕಡಿಮೆಮಾಡುವುದೇ ಸಮಾಜ ಯೋಗ. ಎಲ್ಲರೂ ಅವರವರ ಕೆಲಸವನ್ನು ಮಾಡುತ್ತಾ, ಮತ್ತೊಬ್ಬರ ಕೆಲಸವನ್ನು ಗೌರವಿಸುತ್ತಾ ಸಾಮರಸ್ಯದಿಂದ ಬದುಕಬೇಕು. ಸಾಮರಸ್ಯದ ಕೊರತೆ ಉಂಟಾದಾಗ ಕುಟುಂಬ ಹಾಗೂ ಸಮಾಜ ವಿಷ ವರ್ತುಲದಲ್ಲಿ ಸಿಲುಕುತ್ತದೆ’ ಎಂದು ತಿಳಿಸಿದರು.

‘ಯಾವುದೇ ಕೆಲಸ ಮಾಡುವ ಮುನ್ನ ಸುಖದ ಮೂಲ ಯಾವುದು ಎಂಬ ಪ್ರಶ್ನೆಯನ್ನು ನಮ್ಮಲ್ಲೇ ಕೇಳಿಕೊಳ್ಳಬೇಕು. ಸುಖ ಎಂದರೇನು, ಅದನ್ನು ಪಡೆಯುವುದು ಹೇಗೆ ಇದರ ಹುಡುಕಾಟವೇ ಸಮಾಜ ಯೋಗ. ಇದರ ಅನುಷ್ಠಾನವೇ ಸಾಮಾಜಿಕ ಸಾಮರಸ್ಯ. ಸುಖವು ಧರ್ಮಕ್ಕೆ ವಿರುದ್ಧವಾಗಿರಬಾರದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT