ಬುಧವಾರ, ಜನವರಿ 29, 2020
27 °C
ರಾಜ್ಯ ಪೊಲೀಸ್ ಮಹಾನಿರ್ದೇಶಕರ ಸುತ್ತೋಲೆ; ಕ್ರಿಮಿನಲ್ ಕೇಸ್ ದಾಖಲಿಸಲು ಅವಕಾಶ

ಸಾಕ್ಷಿದಾರರ ಆಡಿಯೊ, ವಿಡಿಯೊ ಹೇಳಿಕೆ ಕಡ್ಡಾಯ

ಸಂತೋಷ ಜಿಗಳಿಕೊಪ್ಪ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ಪ್ರತ್ಯಕ್ಷ ಸಾಕ್ಷಿದಾರರ ಹೇಳಿಕೆಯನ್ನು ನ್ಯಾಯಾಧೀಶರ ಎದುರು ಆಡಿಯೊ ಹಾಗೂ ವಿಡಿಯೊ ಮೂಲಕ ದಾಖಲಿಸಿಕೊಳ್ಳುವ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪಾಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಮಹತ್ವದ ಸುತ್ತೋಲೆ ಹೊರಡಿಸಿದ್ದಾರೆ.

ಅತ್ಯಾಚಾರ ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆಯಡಿ ದಾಖಲಾದ ಕೆಲ ಪ್ರಕರಣಗಳಲ್ಲಿ ಮಾತ್ರ ಹೇಳಿಕೆಯನ್ನು ಆಡಿಯೊ ಮತ್ತು ವಿಡಿಯೊ ಮೂಲಕ ದಾಖಲಿಸಿಕೊಳ್ಳಲಾಗುತ್ತಿದೆ. ಇನ್ನು ಮುಂದೆ ಎಲ್ಲ ಪ್ರಕರಣಗಳಿಗೂ ಈ ನಿಯಮ ಅನ್ವಯವಾಗಲಿದೆ.

ತನಿಖಾಧಿಕಾರಿಗಳ ನಿರ್ಲಕ್ಷ್ಯ, ಅವರ ಕಾರ್ಯವೈಖರಿಯಿಂದಾಗಿ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಕಡಿಮೆ ಆಗುತ್ತಿದ್ದು, ಪೊಲೀಸರ ತನಿಖೆ ಬಗ್ಗೆ ಜನರು ಅಸಮಾಧಾನಗೊಂಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ನೀಲಮಣಿ ರಾಜು, ಡೊಂಗರ ಸಿಂಗ್ ಮತ್ತು ಇತರರ ವಿರುದ್ಧ ರಾಜಸ್ಥಾನ ಸರ್ಕಾರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನಗಳನ್ನು ಉಲ್ಲೇಖಿಸಿ ಜ. 8ರಂದು ಸುತ್ತೋಲೆ ಹೊರಡಿಸಿದ್ದಾರೆ.

‘ತನಿಖೆ ಸಮಯದಲ್ಲೇ ದಂಡ ಪ್ರಕ್ರಿಯೆ ಸಂಹಿತೆ ಕಲಂ 164ರಡಿ ಪ್ರತ್ಯಕ್ಷದರ್ಶಿ ಸಾಕ್ಷಿದಾರರ ಹೇಳಿಕೆಯನ್ನು ಆಡಿಯೊ ಹಾಗೂ ವಿಡಿಯೊ ಮೂಲಕ ಕಡ್ಡಾಯವಾಗಿ ದಾಖಲಿಸಿಕೊಳ್ಳುವಂತೆ ನ್ಯಾಯಾಧೀಶರಿಗೆ ಕೋರಿಕೆ ಸಲ್ಲಿಸಬೇಕು. ಹೇಳಿಕೆ ದಾಖಲಿಸಿಕೊಂಡ ನ್ಯಾಯಾಧೀಶರ ಸಹಿಯುಳ್ಳ ವರದಿಯನ್ನು ಅವರಿಂದ ಪಡೆದುಕೊಳ್ಳಬೇಕು. ಅದೇ ವರದಿಯನ್ನು ಪ್ರಕರಣದ ದೋಷಾರೋಪ ಪಟ್ಟಿಯೊಂದಿಗೆ ನ್ಯಾಯಾಲಯಕ್ಕೆ ಪುನಃ ಸಲ್ಲಿಸಬೇಕು’ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.‌

‘ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಆರಂಭವಾಗುತ್ತಿದ್ದಂತೆ ಸಾಕ್ಷಿದಾರರ ವಿಚಾರಣೆಯನ್ನು ತ್ವರಿತವಾಗಿ ನಡೆಸುವಂತೆ ಪಬ್ಲಿಕ್ ಪ್ರಾಸಿಕ್ಯೂಟರ್ ಮೂಲಕ ನ್ಯಾಯಾಲಯಕ್ಕೆ ನಿವೇದನೆ ಸಲ್ಲಿಸಬೇಕು. ಸಾಕ್ಷಿದಾರರು ವಿಚಾರಣೆಗೆ ಹಾಜರಾಗದಿದ್ದರೆ ಅಥವಾ ನ್ಯಾಯಾಲಯಕ್ಕೆ ಬಂದು ವಾಪಸು ಹೋದರೆ, ಅದಕ್ಕೆ ಕಾರಣವೇನು ಎಂಬುದನ್ನು ಪತ್ತೆ ಮಾಡಿ ವರದಿ ಸಿದ್ಧಪಡಿಸಬೇಕು. ಆ ವರದಿಯನ್ನು ಪೊಲೀಸ್ ಕಮಿಷನರ್ ಅಥವಾ ಎಸ್ಪಿಗಳೇ ಪರಿಶೀಲಿಸಬೇಕು. ಸಾಕ್ಷಿದಾರರು ವಿಚಾರಣೆಗೆ ಕರೆಸಲು ಹಾಗೂ ಅವರ ಮನೋಬಲ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಅದರ ವರದಿಯನ್ನೂ ಮುಖ್ಯ ಕಚೇರಿಗೆ ಕಳುಹಿಸಬೇಕು’ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.

‘ಸುಪ್ರೀಂಕೋರ್ಟ್ ನಿರ್ದೇಶನದನ್ವಯ ರೂಪಿಸಿರುವ ಸುತ್ತೋಲೆ ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ತಪ್ಪಿದ್ದಲ್ಲಿ ಗಂಭೀರವಾದ ಕರ್ತವ್ಯಲೋಪವೆಂದು ಪರಿಗಣಿಸಿ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ನೀಲಮಣಿ ರಾಜು ಎಚ್ಚರಿಸಿದ್ದಾರೆ.

ಹಲವು ಪ್ರಕರಣಗಳಲ್ಲಿ ನ್ಯಾಯಾಧೀಶರು ಕೂಡ ಸುಪ್ರೀಂಕೋರ್ಟ್ ನಿರ್ದೇಶನ ಪಾಲಿಸುತ್ತಿಲ್ಲವೆಂಬ ಆರೋಪವಿದೆ. ಅದೇ ಕಾರಣಕ್ಕೆ ಈ ಸುತ್ತೋಲೆಯನ್ನು ಹೈಕೋರ್ಟ್‌ನ ರಜಿಸ್ಟ್ರಾರ್ ಜನರಲ್ ಅವರಿಗೂ ಕಳುಹಿಸಲಾಗಿದೆ.

ಕ್ರಿಮಿನಲ್ ಕೇಸ್‌ ದಾಖಲಿಸಲು ಅವಕಾಶ: ‘ಅಪರಾಧ ಪ್ರಕರಣಗಳಲ್ಲಿ ಸಾಕ್ಷಿದಾರರ ಹೇಳಿಕೆಯನ್ನು ದಂಡ ಪ್ರಕ್ರಿಯೆ ಸಂಹಿತೆ ಕಲಂ 164ರಡಿ ಆಡಿಯೊ ಹಾಗೂ ವಿಡಿಯೊ ಮೂಲಕ ದಾಖಲಿಸಲು ತನಿಖಾಧಿಕಾರಿಯು ತುರ್ತು ಕ್ರಮ ಕೈಗೊಳ್ಳಬೇಕು. ನ್ಯಾಯಾಧೀಶರೂ ತ್ವರಿತವಾಗಿ ಹೇಳಿಕೆ ದಾಖಲಿಸಿಕೊಳ್ಳಬೇಕು. ಇದನ್ನು ಪಾಲಿಸದಿದ್ದರೆ ನ್ಯಾಯಾಂಗ ನಿಂದನೆ ಆಗುವುದಲ್ಲದೇ, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸ್‌ ದಾಖಲಿಸಲು ಅವಕಾಶ ಸಿಗಲಿದೆ’ ಎಂದು ಪೊಲೀಸ್ ಇಲಾಖೆಯ ಕಾನೂನು ಸಲಹೆಗಾರರೊಬ್ಬರು ಹೇಳಿದರು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು