ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರೂಣ ಹತ್ಯೆ ತಡೆಗೆ ಕಾರ್ಯಪಡೆ ರಚನೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ

Published 18 ಜನವರಿ 2024, 21:42 IST
Last Updated 18 ಜನವರಿ 2024, 21:42 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಬೆಂಗಳೂರು: ‘ಭ್ರೂಣ ಹತ್ಯೆ ತಡೆಗೆ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಕಾರ್ಯಪಡೆ ರಚಿಸಲಾಗುವುದು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. 

ಗರ್ಭಪೂರ್ವ ಲಿಂಗ ಆಯ್ಕೆ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯ್ದೆ ಅಡಿ (ಪಿಸಿಪಿಎನ್‍ಡಿಟಿ) ರಚಿಸಲಾಗಿದ್ದ ಮೇಲ್ವಿಚಾರಣಾ ಸಮಿತಿಯ ಜೊತೆಗೆ ನಗರದಲ್ಲಿ ಗುರುವಾರ ಸಭೆ ನಡೆಸಿದ ಅವರು, ಭ್ರೂಣ ಹತ್ಯೆ ತಡೆಗೆ ಸಂಬಂಧಿಸಿದಂತೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸಮಿತಿಯ ಸದಸ್ಯರ ಜತೆಗೆ ಚರ್ಚಿಸಿದರು. ಶಾಸಕಿಯರಾದ ರೂಪಕಲಾ, ನಯನಾ ಮೊಟಮ್ಮ, ಲತಾ ಮಲ್ಲಿಕಾರ್ಜುನ್ ಅವರೂ ಅಗತ್ಯ ಸಲಹೆಗಳನ್ನು ನೀಡಿದರು. ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ವೈದ್ಯಕೀಯ ತಜ್ಞರು ಪಾಲ್ಗೊಂಡಿದ್ದರು. 

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆರೋಗ್ಯ ಇಲಾಖೆಯ ಸಕ್ಷಮ ಪ್ರಾಧಿಕಾರಕ್ಕೆ ಎಸಿಪಿ ಮಟ್ಟದ ಅಧಿಕಾರಿ ಹಾಗೂ ಸಿಬ್ಬಂದಿ ನಿಯೋಜಿಸಲು ಗೃಹ ಇಲಾಖೆಗೆ ಮನವಿ ಸಲ್ಲಿಸಲಾಗುವುದು. ಪ್ರತಿ ಹಂತದಲ್ಲಿ ಮೇಲ್ವಿಚಾರಣೆ ನಡೆಸುವುದರ ಜೊತೆಗೆ ಹೆಣ್ಣು ಮಕ್ಕಳು ಸಮಾಜಕ್ಕೆ ಎಷ್ಟು ಮುಖ್ಯ ಎಂಬುದರ ಬಗ್ಗೆ ದೊಡ್ಡ ಮಟ್ಟದಲ್ಲಿ ಜಾಗೃತಿ ಮೂಡಿಸಲಾಗುವುದು’ ಎಂದರು.

‘ಭ್ರೂಣ ಹತ್ಯೆ ತಡೆಗೆ ರಾಜ್ಯಮಟ್ಟದಲ್ಲಿ ಆರೋಗ್ಯ ಇಲಾಖೆ ಆಯುಕ್ತರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲು ನಿರ್ಧರಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳನ್ನೊಳಗೊಂಡ ಕಾರ್ಯಪಡೆ ರಚಿಸಲಾಗುವುದು.‌ ಈ ಕಾರ್ಯಪಡೆಗಳು ಭ್ರೂಣ ಹತ್ಯೆ ಪ್ರಕರಣಗಳ ವಿಚಾರದಲ್ಲಿ ಪಿಸಿಪಿಎನ್‍ಡಿಟಿ ಕಾಯ್ದೆ ಅಡಿ ಕಾರ್ಯನಿರ್ವಹಿಸಿ, ಹೆಚ್ಚು ನಿಗಾ ವಹಿಸಲಿವೆ’ ಎಂದು ಹೇಳಿದರು.

‘ಭ್ರೂಣ ಹತ್ಯೆ ನಡೆಸುತ್ತಿರುವವರ ಮೇಲೆ ಕಠಿಣ ಕ್ರಮಗಳು ಆಗಬೇಕು. ಈಗ ಕಾಯ್ದೆಯಡಿ ತಪ್ಪಿತಸ್ಥರಿಗೆ ₹ 10 ಸಾವಿರ ದಂಡ ಹಾಗೂ 3 ವರ್ಷ ಜೈಲು ಶಿಕ್ಷೆಯಿದೆ. ಶಿಕ್ಷೆ ಪ್ರಮಾಣ ಹೆಚ್ಚಿಸಲು ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆಯೂ ಚರ್ಚಿಸಲಾಗಿದೆ. ₹ 5 ಲಕ್ಷದವರೆಗೆ ದಂಡ ವಿಧಿಸಿ, 5 ವರ್ಷ ಜೈಲು ಶಿಕ್ಷೆ ವಿಧಿಸಬೇಕೆಂಬ ಸಲಹೆಗಳು ಬಂದಿದ್ದು, ಈ ಪ್ರಕರಣಗಳಲ್ಲಿ ಜಾಮೀನು ಸಿಗಬಾರದು. ಈ ಬಗ್ಗೆ ಮುಂದಿನ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT